ಆಳಂದ: ಬೇಸಿಗೆಯ ವಿಪರೀತ ಬಿಸಿಲಿನಲ್ಲೂ ಉದ್ಯೋಗ ಖಾತ್ರಿ ಕಾಮಗಾರಿ ಕೈಗೊಳ್ಳುವ ಕಾರ್ಮಿಕರಿಗೆ ದಿನದ ಎರಡು ಬಾರಿ ಹಾಜರಿ ಹಾಕುವ ಕ್ರಮ ಕೈಬಿಟ್ಟು ಕಾರ್ಮಿಕರಿಗೆ ಅನುಕೂಲ ಒದಗಿಸಲು ಮಧ್ಯಾಹ್ನದ ಹಾಜರಾತಿ ರದ್ದುಗೊಳಿಸಬೇಕು ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ತಾಪಂ ಕಚೇರಿ ಎದುರು ಬುಧವಾರ ಅಖೀಲಭಾರತ ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಪ್ರಾಂತ ಕೃಷಿ ಕೂಲಿಕರಾರರ ಸಂಘ, ದಲಿತ ಸಮನ್ವಯ ಸಮಿತಿಗಳ ತಾಲೂಕು ಘಟಕಗಳು ಜಂಟಿಯಾಗಿ ಉದ್ಯೋಗ ಖಾತ್ರಿ ಕಾರ್ಮಿಕರ ಬೇಡಿಕೆಗೆ ಒತ್ತಾಯಿಸಿ ಕೈಗೊಂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕಾರ್ಮಿಕರು ಬೆಳಗಿನಿಂದ 7ಗಂಟೆಯಿಂದ 11ಗಂಟೆ ವರೆಗೆ ಕೆಲಸ ನಿರ್ವಹಿಸಿ ಹಾಜರಿ ಹಾಕಿ ಮನೆಗೆ ಹೋಗುತ್ತಾರೆ. ಆದರೆ ಸರ್ಕಾರ ಸಮಯದ ಮಿತಿ ಹೇರಿ ಎರಡು ಬಾರಿ ಹಾಜರಿಯ ಮಿತಿ ಹೇರಿದ್ದರಿಂದ ಕಾರ್ಮಿಕರು ದಿನವಿಡಿ ಕೆಲಸ ಮಾಡಿದರೂ ಹಾಜರಿ ಹಾಕಲು ಸ್ಥಳದಲ್ಲೇ ಸಂಜೆಯ ವರೆಗೆ ಕುಳಿತುಕೊಳ್ಳುತ್ತಿರುವುದರಿಂದ ಬೇಸಿಗೆ ಧಗೆಗೆ ತೊಂದರೆ ಪಡುವಂತಾಗಿದೆ. ಕೂಡಲೇ ಸರ್ಕಾರ ಸಮಯದ ಮಿತಿ ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.
ಹೊಸ ಆ್ಯಫ್ ಬಳಸುತ್ತಿರುವುದರಿಂದ (ಎನ್‌ಎಂಎಂಎಸ್) ಕೃಷಿ ಕೂಲಿಕಾರರಿಗೆ ತೊಂದರೆ ಆಗುತ್ತಿದೆ. ಬೇಸಿಗೆ ತಾಪ ಮಾನ ಹೆಚ್ಚುತ್ತಿದ್ದು, ಮಧ್ಯಾಹ್ನ 2ಗಂಟೆಗೆ ಆನ್‌ಲೈನ್ ಹಾಜರಾತಿ ಕಡ್ಡಾಯಗೊಳಿಸಿದ್ದರಿಂದ ತೊಂದರೆ ಆಗುತ್ತಿದೆ. ಸರ್ಕಾರ ಕೂಡಲೇ ಆನ್ ಲೈನ್ ಹಾಜರಾತಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಪಾಂಡುರಂಗ ಮಾವೀ ನಕರ್, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಸುಧಾಮ ಧನ್ನಿ ಮಾತನಾಡಿ, ಉದ್ಯೋಗ ಖಾತ್ರಿ ಕಾಮಗಾರಿಯಡಿ ಒಂದು ವಾರ ಕೆಲಸ ಕೊಟ್ಟು ನಾಲ್ಕು ವಾರ ಬಿಡುವು ಮಾಡದೇ ನಿರಂತರವಾಗಿ ಕೆಲಸ ನೀಡಬೇಕು. ಕೂಲಿ ಕಾರ್ಮಿಕರಿಗೆ ಪ್ರತಿನಿತ್ಯ 600 ರೂ. ನೀಡಬೇಕು ಎಂದು ಮುಖ್ಯಮಂತ್ರಿಗೆ ಬರೆದ ಪತ್ರವನ್ನು ತಾಪಂ ಇಒಗೆ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಾಪಂ ಇಒ ಡಾ| ಸಂಜಯ ರೆಡ್ಡಿ ಮಾತನಾಡಿ, ಮನವಿಯನ್ನು ಸರ್ಕಾರಕ್ಕೆ ಕಳುಹಿಸ ಲಾಗುವುದು ಎಂದು ತಿಳಿಸಿದರು. ಬಂಡಾಯ ಸಾಹಿತಿ ಡಾ| ಪ್ರಭು ಖಾನಾಪುರೆ, ಜನವಾದಿ ಮಹಿಳಾ ಸಂಘಟನೆ ತಾಲೂಕು ಅಧ್ಯಕ್ಷೆ ಮಲ್ಲಮ್ಮ ಜಿಡಗಾ, ಕಾರ್ಯದರ್ಶಿ ಸುಮಂಗಲಾ, ಶಶಿಕಲಾ ಪಾಟೀಲ ಕಡಗಂಚಿ, ರೂಪದೇವಿ, ಇಂದುಮತಿ, ಫಯಾಜ್ ಪಟೇಲ್ ಮತ್ತಿತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು