ದೇವನಹಳ್ಳಿ: ಕೇಂದ್ರ ಸರ್ಕಾರದ ಮೋಟಾರು ಕಾಯ್ದೆ ತಿದ್ದುಪಡಿ ಕೈಬಿಡಬೇಕೆಂದು ಒತ್ತಾಯಿಸಿ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ತಾಲೂಕು ವಕೀಲರ ಸಂಘದ ಸದಸ್ಯರು ನಗರದ ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಸಾಮಾನ್ಯ ಜನರಿಗೆ ಹೊರೆ: ಕೇಂದ್ರ ಸರ್ಕಾರ ಮೋಟಾರು ಕಾಯ್ದೆ ತಿದ್ದುಪಡಿ ಮಾಡಿರುವುದರಿಂದ ವಾಹನ ಸವಾರರು ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದಾರೆ. ಮೊದಲು ವಾಹನ ವಿಮೆ ಕಡಿಮೆಯಿತ್ತು. ಈಗ ಪ್ರೀಮಿಯಂ ಹೆಚ್ಚಾಗಿದ್ದು, ಜತೆಗೆ ಕಡ್ಡಾಯವಾಗಿದೆ. ವಿಮೆ ಕಂಪನಿಗಳಿಗೆ ಅನುಕೂಲ ಕಲ್ಪಿಸಲು ಕೇಂದ್ರ ತಿದ್ದುಪಡಿ ಮಾಡಿದೆ. ಅಪಘಾತದಲ್ಲಿ ವ್ಯಕ್ತಿ ಮೃಪಟ್ಟರೆ ವಾಹನ ಮಾಲಿಕನು ಪರಿಹಾರ ಕೇಳಲು ಸಾಧ್ಯವಾಗುವುದಿಲ್ಲ. ವಿಮೆ ಕಂಪನಿಗಳು ನೀಡುವ 5 ಲಕ್ಷ ರೂ. ಪರಿಹಾರ ಸಾಕಾಗುವುದಿಲ್ಲ. ಈಗಾಗಲೇ ಜನರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ದುಬಾರಿ ದಂಡ ಕಟ್ಟಲು ಸಾಮಾನ್ಯ ಜನರಿಗೆ ಹೊರೆಯಾಗಿದೆ ಎಂದು ಆಕ್ಷೇಪ್ತ ವ್ಯಕ್ತಪಡಿಸಿದರು.
ನಿಯಮ ಅವೈಜ್ಞಾನಿಕ: ಒಂದು ಕಡೆ ಅತಿವೃಷ್ಟಿ ಮತ್ತೂಂದೆಡೆ ಅನಾವೃಷ್ಟಿ ಇದ್ದಾಗಲೂ, ಕೇಂದ್ರ ಸರ್ಕಾರ ಮೋಟಾರು ಕಾಯ್ದೆ ತಿದ್ದುಪಡಿ ಮಾಡಿರುವುದು ಜನರ ಆರ್ಥಿಕ ಸ್ಥಿತಿಗತಿ ಮೇಲೆ ಪರಿಣಾಮ ಬೀರುತ್ತಿದೆ. ಹಳ್ಳಿಗಾಡಿನ ಜನರು ನಗರ ಪ್ರದೇಶಗಳಿಗೆ ಬರಬೇಕು ಹಾಗೂ ಹೊಲ ಗದ್ದೆಗಳಿಗೆ ತೆರಳಲು ದ್ವಿಚಕ್ರ ವಾಹನ ಬಳಸುತ್ತಾರೆ. ಆದರೆ, ವಾಹನ ಚಾಲನೆ ಮಾಡುವಾಗ ಚಪ್ಪಲಿ ಬಳಸ ಬಾರದು, ಶೂ ಬಳಸಬೇಕು ಎನ್ನುವ ನಿಯಮ ಅವೈಜ್ಞಾನಿಕವಾಗಿದೆ ಎಂದು ಕಿಡಿಕಾರಿದರು.
ಕೇಂದ್ರದ ಹಗಲು ದರೋಡೆ ಆರೋಪ: ಈಗಾಗಲೇ ದೇಶದ ಆರ್ಥಿಕತೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಆದರೂ ಪ್ರಧಾನಿ ಮೋದಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಈ ಯೋಜನೆಯ ಸಾಧಕ, ಭಾದಕಗಳನ್ನು ಅರಿಯದೆ ಕೇಂದ್ರ ಸರ್ಕಾರ ಏಕಾಏಕಿ ಜಾರಿಗೆ ತಂದು, ಹಗಲು ದರೋಡೆ ಮಾಡಲು ಹೊರಟಿದೆ ಎಂದು ಆರೋಪಿಸಿದರು. ಇದೊಂದು ದೇಶ ದ್ರೋಹದ ಕಾಯ್ದೆಯಾಗಿದೆ. ಜನ ಸಾಮಾನ್ಯರ ಹಣ ಕಿತ್ತುಕೊಳ್ಳುವ ಕಾಯ್ದೆಯಾಗಿದ್ದು, ಕೇಂದ್ರ ಸರ್ಕಾರ ವಾಪಾಸ್ಸು ಪಡೆಯಬೇಕು ಎಂದು ಒತ್ತಾಯಿಸಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಆರ್.ಮಾರೇಗೌಡ , ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಎಂ.ಭೈರೇಗೌಡ, ಎನ್.ಶ್ರೀನಿವಾಸ್ ಮೂರ್ತಿ, ಮಾಜಿ ಕಾರ್ಯದರ್ಶಿ ಮುನಿರಾಜು, ತಾಲೂಕು ಸಂಘದ ಉಪಾಧ್ಯಕ್ಷ ಜಯರಾಮಪ್ಪ, ಕಾರ್ಯದರ್ಶಿ ಆನಂದ್, ಖಜಾಂಚಿ ವೆಂಕಟೇಶ್, ವಕೀಲ ನಾರಾಯಣಸ್ವಾಮಿ, ರಮೇಶ್, ಕೇಶವ ಮೂರ್ತಿ, ಬೀರಪ್ಪ, ಪ್ರಭಾಕರ್, ಕೆಂಪೇಗೌಡ, ಮನೋಜ್ ಇದ್ದರು.