Advertisement
ನಿರ್ದೇಶನ ನೀಡಿ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ನೇತೃತ್ವದಲ್ಲಿ ಜಿಲ್ಲೆಯ ಪದಾಧಿಕಾರಿಗಳು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅವರನ್ನು ಬೆಂಗಳೂರಿನ ವಿಕಾಸಸೌಧದಲ್ಲಿ ಭೇಟಿ ಮಾಡಿ ಹೆಚ್.ಎನ್ ವ್ಯಾಲಿ ಯೋಜನೆ ವಿಳಂಬ ಆಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿ ಕಾಮಗಾರಿ ತ್ವರಿತವಾಗಿ ಮುಗಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸಚಿವರನ್ನು ಭೇಟಿಯಾಗಿ ನಿಯೋಗ ಮನವಿ ಸಲ್ಲಿಸಿ ಆಗ್ರಹಿಸಿದೆ.
Related Articles
Advertisement
ರೈತರಿಗೆ ಕೃಷಿ ಯಂತ್ರಗಳನ್ನು 50ಃ90ರ ಅನುಪಾತವನ್ನು 70:90 ರಷ್ಟು ಸಬ್ಸಿಡಿಯೊಂದಿಗೆ ಏರಿಕೆ ಮಾಡಿ ನೀಡುವುದರ ಜೊತೆಗೆ ರೈತರಿಗೆ ರಾಗಿ ಮತ್ತು ಜೋಳ ಕಟಾವು ಯಂತ್ರ, ಕೃಷಿ ಹೊಂಡಗಳಿಗೆ ಟಾರ್ಪಾಲ್ ವ್ಯವಸ್ಥೆ ಸೇರಿದಂತೆ ಕೃಷಿ ಹಾಗೂ ಹೈನುಗಾರಿಕೆಗೆ ಆದ್ಯತೆ ನೀಡಲಾಗುವುದು ಎಂದು ರೈತ ಸಂಘದ ನಿಯೋಗಕ್ಕೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಭರವಸೆ ನೀಡಿದರು.
ನಿಯೋಗದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ, ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಗೌರವಾಧ್ಯಕ್ಷ ಎಸ್.ಎನ್.ನಾರಾಯಣಸ್ವಾಮಿ, ಹಿತ್ತಲಹಳ್ಳಿ ರಮೇಶ್, ಮುನಿನಂಜಪ್ಪ, ಟಿ.ಕೃಷ್ಣಪ್ಪ, ಬಚ್ಚೇಗೌಡ, ಚನ್ನಕೃಷ್ಣಪ್ಪ, ರಾಮಕೃಷ್ಣಪ್ಪ, ರಮೇಶ್, ಚಿಕ್ಕಬಳ್ಳಾಪುರದ ರಾಮಾಂಜಿನಪ್ಪ, ಗುಡಿಬಂಡೆಯ ರಾಮನಾಥ್, ಚಿಂತಾಮಣಿ ರಮಣಾರೆಡ್ಡಿ, ಬಾಗೇಪಲ್ಲಿ ಲಕ್ಷಣ್‌ರೆಡ್ಡಿ, ಗೌರಿಬಿದನೂರಿನ ನರಸಿಂಹರೆಡ್ಡಿ ಇದ್ದರು.
ಕಾಮಗಾರಿ ಮಂದಗತಿ, ಅಸಮಾಧಾನ: ಜಿಲ್ಲೆಯಲ್ಲಿ ಸತತವಾಗಿ ಮಳೆ ಬೆಳೆ ಇಲ್ಲದೇ ರೈತಾಪಿ ಜನ ತೀವ್ರ ಸಂಕಷ್ಟ ಅನುಭವಿಸುತ್ತಿದೆ. ಪಕ್ಕದ ಕೋಲಾರ ಜಿಲ್ಲೆಗೆ ಕೆ.ಸಿ ವ್ಯಾಲಿ ಯೋಜನೆ ಪೂರ್ಣಗೊಂಡು ಕೆರೆಗಳಿಗೆ ನೀರು ಹರಿಯುತ್ತಿದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ರೂಪಿಸಿರುವ ಹೆಚ್.ಎನ್ ವ್ಯಾಲಿ ಯೋಜನೆ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ ಎಂದು ರೈತ ಸಂಘದ ಪದಾಧಿಕಾರಿಗಳು ಸಚಿವರ ಬಳಿ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಗೂ ಕೃಷಿ ನೀರಾವರಿಗೆ ತೀವ್ರ ಹಾಹಾಕಾರ ಉಂಟಾಗಿದೆ. ಈ ಭಾಗದ ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಿ ರೂಪಿಸಿರುವ ಯೋಜನೆ ಶೀಘ್ರಗತಿಯಲ್ಲಿ ಅನುಷ್ಠಾನಗೊಳಿಸಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಸಚಿವರಲ್ಲಿ ಮನವಿ ಮಾಡಿದರು.
ನೆರೆಯ ಆಂಧ್ರಪ್ರದೇಶದಲ್ಲಿ ಹೊಸ ಸರ್ಕಾರ ರಚನೆಯಾದ ಕೂಡಲೇ ಹಿಂದೂಪುರ ಹಾಗೂ ಅನಂತಪುರಕ್ಕೆ ಬಂದಿರುವ ಕೃಷ್ಣಾ ಮತ್ತು ತುಂಗಭದ್ರ, ಗೋದಾವರಿ ಯೋಜನೆಯನ್ನು ಬಳಕೆ ಮಾಡಿಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ನೀರಾವರಿ ಒದಗಿಸಲು ಸಹಕಾರ ನೀಡುವಂತೆ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ಆಂಧ್ರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು.-ಎನ್.ಎಚ್.ಶಿವಶಂಕರರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವರು