Advertisement

ಸೇವಾ ಭದ್ರತೆ-ಸಮಾನ ವೇತನಕ್ಕೆ ಒತ್ತಾಯ

11:34 AM Oct 26, 2018 | Team Udayavani |

ಕಲಬುರಗಿ: ರಾಷ್ಟ್ರೀಯ ಆರೋಗ್ಯ ಮಿಷನ್‌ ಹಾಗೂ ಇತರ ಆರೋಗ್ಯ ಕಾರ್ಯಕ್ರಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರು ದೇಶವ್ಯಾಪಿ ಹಮ್ಮಿಕೊಂಡಿದ್ದ ಒಂದು ದಿನದ ಆಂದೋಲನದ ಭಾಗವಾಗಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಸಾವಿರಾರು ಗುತ್ತಿಗೆ ನೌಕರರು
ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಆರೋಗ್ಯ ಇಲಾಖೆಯ ಎಲ್ಲ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕು ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ವೇದಿಕೆ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಸಲಾಯಿತು. 

ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತಷ್ಟು ಬಲಪಡಿಸುವ ಅಗತ್ಯ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರದ ಆರೋಗ್ಯ ಕ್ಷೇತ್ರದ ಬಜೆಟ್‌ನ್ನು ಶೇ.15ಕ್ಕೆ ಏರಿಸಬೇಕು. ಇದಕ್ಕೆ ಅಗತ್ಯ ಆರ್ಥಿಕ ನೆರವನ್ನು ಕೇಂದ್ರ ಸರ್ಕಾರ ಒದಗಿಸಬೇಕು. ಆರೋಗ್ಯ ಇಲಾಖೆಯಲ್ಲಿ ಕಾಯಂ ನೌಕರರ ಸಂಖ್ಯೆಗಿಂತ ಗುತ್ತಿಗೆ ನೌಕರರ ಸಂಖ್ಯೆಯೇ ಅಧಿಕವಾಗಿದ್ದು, ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಮಾದರಿಯಲ್ಲಿ ಆರೋಗ್ಯ ಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಕಾಯ್ದೆ ಜಾರಿಗೆ ತರಬೇಕು. ಈ ಮೂಲಕ ಎಲ್ಲ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಕ್ರಮಕೈಗೊಳ್ಳಬೇಕು. ಜತೆಗೆ ಹರಿಯಾಣ ಮಾದರಿಯಲ್ಲಿ ವೇತನ ಮತ್ತು ಭತ್ಯೆ ನೀಡುವ ನೀತಿಯನ್ನು ರಾಜ್ಯದಲ್ಲೂ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಸರ್ಕಾರಿ ನೌಕರರಿಗೆ ನೀಡುವ “ಜ್ಯೋತಿ ಸಂಜೀವಿನಿ’ ವೈದ್ಯಕೀಯ ಯೋಜನೆ ಸೌಲಭ್ಯ ಆರೋಗ್ಯ ಇಲಾಖೆಯಲ್ಲಿಯೇ ಕೆಲಸ ಮಾಡುವ ಗುತ್ತಿಗೆ ನೌಕರರಿಗೆ ಇಲ್ಲವಾಗಿದ್ದು, ಗುತ್ತಿಗೆ ನೌಕರರಿಗೂ ಈ ಯೋಜನೆ ಜಾರಿಗೆ ತರಬೇಕು. ನೇಮಕಾತಿಯಲ್ಲಿ ವಯಸ್ಸಿನ ಮಿತಿ ವಿಸ್ತರಿಸಬೇಕು ಹಾಗೂ ಸೇವಾ ಅನುಭವಕ್ಕೆ ತಕ್ಕಂತೆ ಸೇವಾಂಕ ನೀಡಬೇಕೆಂದು ಆಗ್ರಹಿಸಿದರು.

ಈ ಹಿಂದೆ ಸೇವಾ ಭದ್ರತೆ ಇಲ್ಲದ ಕಾರಣ ಹಲವರನ್ನು ತೆಗೆದು ಹಾಕಲಾಗಿದ್ದು, ಅವರನ್ನು ಪುನಃ ನೇಮಕ ಮಾಡಿಕೊಳ್ಳಬೇಕು. ಗ್ರಾಮೀಣ ಸೇವೆ, ಎಚ್‌ಐವಿ, ಟಿಬಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರು, ಆ್ಯಂಬುಲೆನ್ಸ್‌ ವಾಹನ ಚಾಲಕರು, ಡಿ ಗ್ರೂಪ್‌ ನೌಕರರಿಗೆ ವಿಶೇಷ ಭತ್ಯೆ ನೀಡಬೇಕೆಂದು ಒತ್ತಾಯಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಂತರ ಕಚೇರಿ ಎದುರುಗಡೆಯ ಐವಾನ್‌ ಶಾಹಿ ರಸ್ತೆಯಲ್ಲಿ ಗುತ್ತಿಗೆ ನೌಕರರು ಸಂಜೆ 5 ಗಂಟೆ ವರೆಗೆ ಸಾಂಕೇತಿಕವಾಗಿ ಧರಣಿ ಕುಳಿತರು. ನೌಕರರ ವೇದಿಕೆಯ ಕಲಬುರಗಿ ಶಾಖೆ ಅಧ್ಯಕ್ಷ ಶ್ರೀಕಾಂತ ನೇತೃತ್ವದಲ್ಲಿ ಜಿಲ್ಲೆಯ 400 ಜನ ಸ್ಟಾಫ್‌ ನರ್ಸ್‌ಗಳು, 200 ಜನ ಆಪ್ತ ಸಮಾಲೋಚಕರು, 100 ಜನ ಲ್ಯಾಬ್‌ ಸಿಬ್ಬಂದಿ, 50 ಕಿರಿಯ ಆರೋಗ್ಯ ಸಹಾಯಕಿಯರು ಸೇರಿದಂತೆ ಸುಮಾರು
950 ಸಿಬ್ಬಂದಿ ಧರಣಿಯಲ್ಲಿ ಪಾಲ್ಗೊಂಡಿದ್ದರು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರು ಧರಣಿಗೆ ಬೆಂಬಲ ಸೂಚಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next