Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶನಿವಾರ ಮುಖ್ಯಮಂತ್ರಿ ಕುಮಾರಸ್ವಾಮಿ ನಗರಕ್ಕೆ ಭೇಟಿ ನೀಡುವಸಂದರ್ಭದಲ್ಲಿ ಕರಗಡ ಕುಡಿಯುವ ನೀರಿನ ಯೋಜನೆ, ವೈದ್ಯಕೀಯ ಕಾಲೇಜು, ಜಿಲ್ಲಾಸ್ಪತ್ರೆ ಉನ್ನತೀಕರಣ, ಬಯಲು ಸೀಮೆಯ 63 ಕೆರೆಗಳನ್ನು ತುಂಬಿಸುವ ಯೋಜನೆ, ಜಿಲ್ಲೆಯ ಅತಿವೃಷ್ಟಿ, ಅನಾವೃಷ್ಟಿ ಪರಿಹಾರ ಕಾರ್ಯಕ್ರಮಗಳು, ಹಾಲು ಒಕ್ಕೂಟ ಸ್ಥಾಪನೆ ಸೇರಿ ಹಲವು ಅಭಿವೃದ್ಧಿ ಯೋಜನೆಗಳು ನೆನೆಗುದಿಗೆ ಬಿದ್ದಿರುವ ಬಗ್ಗೆ ಅವರ ಗಮನ ಸೆಳೆಯುತ್ತೇವೆ ಎಂದರು.
ಈಗಲೂ 7 ಗ್ರಾಮಗಳಿಗೆ ಟ್ಯಾಂಕರ್‌ನಲ್ಲಿ ನೀರು ಕೊಡುತ್ತಿದ್ದೇವೆ ಎಂದು ತಿಳಿಸಿದರು.
Related Articles
Advertisement
ಸರ್ಕಾರಕ್ಕೆ ಎರಡು ಜವಾಬ್ದಾರಿಗಳಿವೆ. ಅತಿವೃಷ್ಟಿಯಿಂದ ಸಂಕಷ್ಟ ಅನುಭವಿಸುತ್ತಿರುವ ಕಾಫಿ, ಏಲಕ್ಕಿ, ಅಡಕೆ, ಇನ್ನಿತರೆ ತೋಟಗಾರಿಕೆ ಬೆಳೆಹಾನಿಗೆ ಪರಿಹಾರ ನೀಡಿ ನೆರವಿಗೆ ಬರಬೇಕಾಗಿರುವುದು. ಬಯಲಿನಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಜನರು ಗುಳೆ ಹೋಗುವುದನ್ನು ತಪ್ಪಿಸಬೇಕಾಗಿರುವುದು. ಈ ಹಿನ್ನೆಲೆಯಲ್ಲೂಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. ಜಿಲ್ಲೆಯ ಅನೇಕ ರೈತರಿಗೆ 2016-17ನೆಯ ಸಾಲಿನ ಫಸಲ್ ಬಿಮಾ ಯೋಜನೆಯ ಪರಿಹಾರ ಪೂರ್ಣ ಮಟ್ಟದಲ್ಲಿ ಸಿಕ್ಕಿಲ್ಲ. ಯೂನಿವರ್ಸಲ್ ಸೋಂಪೊ ಎನ್ನುವ ಏಜೆನ್ಸಿ ರೈತರಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ ಎಂದರು. ಕರಗಡ 2 ನೆಯ ಹಂತದ ಕಾಮಗಾರಿಗೆ ಅನುದಾನ ಮಂಜೂರು ಮಾಡಬೇಕಾಗಿದೆ. ಲಕ್ಯಾ ಹಾಗೂ ಸಖರಾಯಪಟ್ಟಣ ಹೋಬಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೀರಿನ ಹಂಚಿಕೆ ಹಾಗೂ ಅನುದಾನ ಮಂಜೂರು ಮಾಡಬೇಕು ಎಂದು ಮನವಿ ಮಾಡಲಾಗುವುದು ಎಂದರು. ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ರಸ್ತೆ ಹಾಗೂ ಸೇತುವೆಗಳ ಅಭಿವೃದ್ದಿಗಾಗಿ ಕೇಂದ್ರೀಯ ರಸ್ತೆನಿಧಿಯಿಂದ 103.55 ಕೋಟಿ ರೂ. ಮಂಜೂರು ಮಾಡಿಸಿದ್ದು ,ರಾಜ್ಯ ಸರ್ಕಾರವು ಇದುವರೆಗೂ ಟೆಂಡರ್ ಕರೆದು ಅನುಷ್ಠಾನಗೊಳಿಸುವ ಕ್ರಮವಹಿಸಿರುವುದಿಲ್ಲ. ಆದ್ದರಿಂದ ಈ ಕಾಮಗಾರಿಗಳಿಗೆ ತುರ್ತಾಗಿ ಟೆಂಡರ್ ಕರೆದು ಕಾಮಗಾರಿ ಅನುಷ್ಠಾನಗೊಳಿಸಬೇಕಾಗಿ ಕೋರಲಾಗುವುದು ಎಂದು ತಿಳಿಸಿದರು. ಪ್ರವಾಸಿ ತಾಣಗಳನ್ನು ಹೊಂದಿರುವ ಈ ಕ್ಷೇತ್ರ ಮೂಲ ಸೌಕರ್ಯದ ಕೊರತೆ ಎದುರಿಸುತ್ತಿದೆ. ಜಿಲ್ಲೆಯ ಎಲ್ಲಾ ಪ್ರವಾಸಿ
ತಾಣಗಳಿಗೆ ಅಗತ್ಯ ಮೂಲಸೌಕರ್ಯ ಗಳನ್ನೊದಗಿಸಬೇಕು. ಪರಿಸರ ರಕ್ಷಣೆ, ಉದ್ಯೋಗ ಸೃಷ್ಟಿ ಹಾಗೂ ಪ್ರವಾಸಿಗರ
ಹಿತದೃಷ್ಟಿಯಿಂದ ಜಿಲ್ಲೆಗೆ ಒಂದು ಉತ್ತಮವಾದ ಪ್ರವಾಸೋದ್ಯಮ ನೀತಿ ಜಾರಿಗೊಳಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು.
ಸಿ.ಟಿ. ರವಿ, ಶಾಸಕ