Advertisement
ಎಪ್ಪತ್ತರ ದಶಕದ ಮಧ್ಯಭಾಗದಲ್ಲಿ ಈ ಪ್ರಶ್ನೆ ಕೇಳಿದಾಗ ಕಲೆ ಮತ್ತು ಸಾಹಿತ್ಯ ಇವು ಬಡ ದೇಶದಲ್ಲಿ ಅನುಪಯುಕ್ತ, ವ್ಯರ್ಥ; ಆಧುನಿಕ ಯುಗಕ್ಕೆ ಸೇರ್ಪಡೆಗೊಳ್ಳಲು ಹೋರಾಟ ನಡೆಸುತ್ತಿರುವ ಪಾಶ್ಚಾತ್ಯವಲ್ಲದ ದೇಶಕ್ಕಂತೂ ವ್ಯರ್ಥವಾದ ಲಕುರಿ ಇದು ಎಂಬ ಧೋರಣೆ ಇರುತ್ತಿತ್ತು. ವಿದ್ಯಾವಂತನಾದವನು ಡಾಕ್ಟರೋ, ಎಂಜಿನಿಯರೋ ಆಗಿ ರೋಗವಾಸಿ ಮಾಡುತ್ತ, ಸೇತುವೆ ಕಟ್ಟುವ ಕೆಲಸದಲ್ಲಿ ತೊಡಗಿದರೆ ದೇಶಕ್ಕೆ ಒಳ್ಳೆಯದಲ್ಲವೇ ಅನ್ನುವ ಸೂಚನೆ ಈ ಮಾತಿನಲ್ಲಿ ಇರುತ್ತಿತ್ತು. ಜೀನ್ ಪಾಲ್ ಸಾತ್ರೆ ಎಪ್ಪತ್ತರ ದಶಕದಲ್ಲಿ ಹೇಳಿದ ಮಾತು ಇಂಥ ಧೋರಣೆಗೆ ಬಲ ತಂದಿತ್ತು. ತಾನೇನಾದರೂ ಆಫ್ರಿಕದ ಅತ್ಯಂತ ಬಡತನದ, ಹಿಂದುಳಿದ ಪುಟ್ಟ ದೇಶ ಬಯಾಫದ ಬುದ್ಧಿಜೀವಿಯಾಗಿದ್ದಿದ್ದರೆ ಕಾದಂಬರಿ ಬರೆಯುವ ಕೆಲಸಕ್ಕೇ ಕೈ ಇಕ್ಕುತ್ತಿರಲಿಲ್ಲ ಎಂದಿದ್ದ.
Related Articles
Advertisement
ಕಾದಂಬರಿ ಲೋಕದಲ್ಲಾದ ಬದಲಾವಣೆಇವತ್ತು ಕಾದಂಬರಿ ಬರೆಯುವುದಕ್ಕೂ ಓದುವುದಕ್ಕೂ ತೀರ ಬೇರೆಯದೇ ಅರ್ಥ ಬಂದಿದೆ. ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಇಂಥ ಬದಲಾವಣೆ ಮೊದಲು ಸಂಭವಿಸಿತು. ಸಾಹಿತ್ಯಕ ಕಾದಂಬರಿಯು ಆಧುನೀಕತೆಯ ಪ್ರಶ್ನೆಗೆ ಮುಖಾಮುಖಿಯಾಯಿತು, ಆ ಮೂಲಕ ಕಾದಂಬರಿಗೆ “ಉನ್ನತವಾದ ಕಲೆ’ ಎಂಬ ಸ್ಥಾನ ದೊರೆಯಿತು. ಕಳೆದ ಮೂವತ್ತು ವರ್ಷಗಳಲ್ಲಿ ಆಗಿರುವ ಸಂವಹನ ಕ್ಷೇತ್ರದ ಬದಲಾವಣೆಗಳೂ ಮುಖ್ಯವಾಗಿವೆ. ಈಗಿನ ವರ್ತಮಾನ ವಿಶ್ವವ್ಯಾಪಿಯಾಗಿರುವ ಮಾಧ್ಯಮದ ಕಾಲ. ಈಗಿನ ಸಾಹಿತಿಗಳು ತಮ್ಮ ತಮ್ಮ ದೇಶದ ಮಧ್ಯಮವರ್ಗವನ್ನಷ್ಟೇ ಉದ್ದೇಶಿಸಿ ಮಾತನಾಡುವವರಲ್ಲ; ಬದಲಾಗಿ ಜಗತ್ತಿನಾದ್ಯಂತ ಇರುವ ಸಾಹಿತ್ಯಕ ಕಾದಂಬರಿಗಳ ಓದುಗರೊಂದಿಗೆ ಮಾತಾಡಬಲ್ಲವರು, ತತ್‌ಕ್ಷಣದಲ್ಲೇ ಮಾತಾಡಬಲ್ಲವರು. ಇಂದಿನ ಸಾಹಿತ್ಯಕ ಓದುಗರು ಗಾರ್ಸಿಯ ಮಾಕ್ವೆಜ್, ಕೋಟ್ಸೆ ಅಥವಾ ಪಾಲ್ ಆಸ್ಟರ್ ಕೃತಿಗಳಿಗಾಗಿ ಕಾಯುತ್ತಾರೆ-ಹಿಂದಿನ ಕಾಲದ ಜನ ಡಿಕಿನ್ಸ್‌ನ ಹೊಸ ಕಾದಂಬರಿಗೆ ಕಾಯುತ್ತಿದ್ದ ಹಾಗೆಯೇ. ಇಂಥ “ವಾಚಕ ದಳ’ದ ಸಂಖ್ಯೆ ಲೇಖಕರ ತಾಯಿನಾಡಿನ ಒಟ್ಟು ಓದುಗರ ಸಂಖ್ಯೆಗಿಂತ ಮಿಗಿಲಾಗಿರುತ್ತದೆ. ಲೇಖಕರು ಯಾರಿಗಾಗಿ ಬರೆಯುತ್ತಾರೆ ಎಂದು ಈ ಪ್ರಶ್ನೆಯನ್ನು ತೀರ ಸರಳ, ವ್ಯಾಪಕ ಅರ್ಥದಲ್ಲಿ ತೆಗೆದುಕೊಂಡರೆ-ಆದರ್ಶ ಓದುಗನಿಗಾಗಿ, ತಮ್ಮ ಆಪ್ತ, ಪ್ರೀತಿಪಾತ್ರರಿಗಾಗಿ, ತಮಗಾಗಿ, ಯಾರಿಗಾಗಿಯೂ ಅಲ್ಲ ಎಂಬ ಉತ್ತರಗಳನ್ನು ಕೊಡಬಹುದು. ಇದು ಸತ್ಯ, ಆದರೆ ಪೂರ್ಣ ಸತ್ಯವಲ್ಲ. ಇಂದಿನ ಸಾಹಿತಿಗಳು ತಮ್ಮನ್ನು ಯಾರು ಓದುತ್ತಾರೋ ಅವರಿಗಾಗಿ ಬರೆಯುತ್ತಾರೆ. ಅಂದರೆ ಇಂದಿನ ಸಾಹಿತ್ಯಕ ಲೇಖಕರು ಏನನ್ನೂ ಓದದ ತಮ್ಮ ಬಹುಸಂಖ್ಯಾತ ರಾಷ್ಟ್ರೀಯರಿಗಾಗಿ ಬರೆಯುವ ಬದಲಾಗಿ ಜಗತ್ತಿನಲ್ಲಿರುವ ಅಲ್ಪಸಂಖ್ಯಾತ ಸಾಹಿತ್ಯಕ ಓದುಗರಿಗಾಗಿ ಬರೆಯುತ್ತಾರೆ. ಅಂದರೆ ಈ ಸಾಮಾನ್ಯರೂಪದ ಪ್ರಶ್ನೆಗೆ ವಿವರಣೆ ಇದು: ಲೇಖಕರ ಉದ್ದೇಶದ ಬಗ್ಗೆ ತೋರುವ ಸಂಶಯವು ಕಳೆದ ಹತ್ತು ವರ್ಷಗಳಲ್ಲಿ ಅಸ್ತಿತ್ವಕ್ಕೆ ಬಂದಿರುವ ಹೊಸ ಸಾಂಸ್ಕೃತಿಕ ವ್ಯವಸ್ಥೆಯನ್ನು ಕುರಿತ ಕಸಿವಿಸಿಯೇ ಆಗಿದೆ. ಅಧಿಕೃತವಾಗಿರಬೇಕು, ಅಥೆಂಟಿಕ್ ಆಗಿರಬೇಕು ಎಂಬ ಆಸೆ ಎಲ್ಲ ಲೇಖಕರಿಗೂ ಇರುತ್ತದೆ. ಹಾಗಾಗಿ ಇಷ್ಟೆಲ್ಲ ವರ್ಷ ಕಳೆದ ಮೇಲು ನಾನು ಯಾರಿಗಾಗಿ ಬರೆಯುತ್ತೇನೆ ಅನ್ನುವ ಪ್ರಶ್ನೆಗೆ ಎದುರಾಗುವುದು ನನಗೆ ಇಷ್ಟ. ತಾನು ಬದುಕಿರುವ ಲೋಕಕ್ಕೆ ಮುಖಾಮುಖೀಯಾಗುವ ಸಾಮರ್ಥ್ಯವನ್ನು ಅವಲಂಬಿಸಿ ಲೇಖಕನ ಅಧಿಕೃತತೆ ನಿರ್ಧಾರವಾಗುತ್ತದೆ. ಹಾಗೆಯೇ ಜಗತ್ತಿನಲ್ಲಿ ಬದಲಾಗುತ್ತಿರುವ ತನ್ನ ಸ್ಥಾನ ಕುರಿತ ತಿಳಿವಳಿಕೆಯೂ ಅಧಿಕೃತತೆಗೆ ಅಗತ್ಯವಾದ ಇನ್ನೊಂದು ಅಂಶ. ಸಾಮಾಜಿಕ ವಿಧಿನಿಷೇಧ-ಗಳಿಂದ, ರಾಷ್ಟ್ರೀಯ “ಪುರಾಣ’ಗಳಿಂದ ಬಾಧಿತನಾಗದ ಆದರ್ಶ ಓದುಗನೆಂಬಾತ ಇಲ್ಲ. ಹಾಗೆಯೇ ರಾಷ್ಟ್ರೀಯವಾಗಿರಲಿ, ಅಂತಾರಾಷ್ಟ್ರೀಯವಾಗಿರಲಿ ಆದರ್ಶ ಕಾದಂಬರಿಕಾರನೂ ಇಲ್ಲ. ಆದರೂ ಎಲ್ಲ ಕಾದಂಬರಿಕಾರರೂ ಆದರ್ಶ ಓದುಗನನ್ನು ಉದ್ದೇಶಿಸಿಯೇ ಬರೆಯುತ್ತಾನೆ-ಮೊದಲು ಅವನನ್ನು ಕಲ್ಪಿಸಿಕೊಳ್ಳುತ್ತಾರೆ, ಆನಂತರ ಅವನನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆಯುತ್ತಾರೆ. (ಒರ್ಹಾನ್ ಪಮುಕ್ ಟರ್ಕಿಯ ಇಸ್ತಾಂಬುಲ್ ನಗರದಲ್ಲಿ ಹುಟ್ಟಿದವರು. ಮೈ ನೇಮ್ ಈಸ್ ರೆಡ್ (1998) ಕಾದಂಬರಿಯಿಂದ ಪಮುಕ್‌ಗೆ ಅಂತರರಾಷ್ಟ್ರೀಯ ಖ್ಯಾತಿ ದೊರೆಯಿತು. 2006ರಲ್ಲಿ ನೊಬೆಲ್ ಪ್ರಶಸ್ತಿ ಪಡೆ ದ ರು. ಇಂಗ್ಲಿಷಿನಲ್ಲಿ ಲಭ್ಯವಿರುವ ಪಮುಕ್ ಅವರ ಕೆಲವು ಕೃತಿಗಳು: ದಿ ವೈಟ್ ಕ್ಯಾಸಲ್ (1991), ದಿ ಬ್ಲಾಕ್ ಬುಕ್ (1994) ದಿ ನ್ಯೂ ಲೈಫ್ (1997), ಮೈ ನೇಮ್ ಈಸ್ ರೆಡ್ (2001), ಸ್ನೋ (2004), ಇಸ್ತಾಂಬುಲ್: ಮೆಮೊರೀಸ್ ಅಂಡ್ ದಿ ಸಿಟಿ (2005), ಓ. ಎಲ್. ನಾಗಭೂಷಣಸ್ವಾಮಿ ಅವರು ಅನುವಾದಿಸಿರುವ ನೊಬೆಲ್ ಪಡೆದ ಲೇಖಕ ಒರ್ಹಾನ್ ಪಮುಕ್‌ನ ಮುಗ್ಧ ಪ್ರಬುದ್ಧ : ಕಾದಂಬರಿ ಬರೆಯುವಾಗ ಮತ್ತು ಓದುವಾಗ ನಮಗೇನಾಗುತ್ತದೆ ಕೃತಿಯನ್ನು ಬೆಂಗ ಳೂ ರಿನ ಅಭಿನವ ಪ್ರಕಾ ಶನ ತನ್ನ 25ರ ಸಂಭ್ರಮದ ನೆನಪಿಗೆ ಪ್ರಕಟಿಸುತ್ತಿದೆ) ಮೂಲ : ಒರ್ಹಾನ್ ಪಮುಕ್ ನೊಬೆಲ್ ಪುರಸ್ಕೃತ ಲೇಖಕ
ಅನುವಾದ : ಓ. ಎಲ್. ನಾಗಭೂಷಣಸ್ವಾಮಿ