Advertisement

ಸಾರಿಗೆ ತೆರಿಗೆ ವಂಚಕರಿಗೆ ದಂಡದ ಬಿಸಿ!

10:34 PM Mar 06, 2020 | mahesh |

ಉಡುಪಿ: ಸಾರಿಗೆ ಇಲಾಖೆಯಲ್ಲಿ ತೆರಿಗೆ ವಂಚನೆ ಪ್ರಕರಣಗಳು ಹೆಚ್ಚಳವಾಗುತ್ತಿವೆ. ತೆರಿಗೆ ವಂಚಕರಿಗೆ ಬಿಸಿ ಮುಟ್ಟಿಸಲು ಸಾರಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 2019ರ ಎ.1 ರಿಂದ 2020ರ ಜ.31ರ ವರೆಗೆ 103.90 ಕೋ.ರೂ.ತೆರಿಗೆ (ರಾಜಸ್ವ) ಸಂಗ್ರಹ ಮಾಡಲಾಗಿದೆ.

Advertisement

2018-19ನೇ ಆರ್ಥಿಕ ವರ್ಷಕ್ಕೆ ಒಟ್ಟು 140.21 ಕೋ.ರೂ. ರಾಜಸ್ವ ಸಂಗ್ರಹವಾಗಿತ್ತು. 2017-18ನೇ ಆರ್ಥಿಕ ವರ್ಷದಲ್ಲಿ ಕಳೆದ ವರ್ಷ 136.5 ಕೋ.ರೂ. ರಾಜಸ್ವ ಸಂಗ್ರಹ ಮಾಡಲಾಗಿತ್ತು. ಈ ಬಾರಿ ಒಟ್ಟು 139.98 ಕೋ.ರೂ.ವಾರ್ಷಿಕ ಗುರಿ ಹೊಂದಲಾಗಿದೆ. ಮಾರ್ಚ್‌ ಅಂತ್ಯದ ವೇಳೆಗೆ 36.08 ಕೋ.ರೂ.ಮೊತ್ತ ಸಂಗ್ರಹವಾಗುವ ನಿರೀಕ್ಷೆಯನ್ನು ಹೊಂದಲಾಗಿದೆ.

ಕಾನೂನು ಉಲ್ಲಂಘಿಸಿದರೆ ಕ್ರಮ
ಪರವಾನಿಗೆ ನಿಬಂಧನೆ ಉಲ್ಲಂಘಿಸಿ ಸಂಚರಿಸುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ದಂಡ ಮತ್ತು ತೆರಿಗೆ ವಸೂಲಿ ಮಾಡಲಾಗುತ್ತಿದೆ. ಮೋಟಾರು ವಾಹನ ಕಾಯಿದೆ ಮತ್ತು ನಿಯಮಗಳ ಪ್ರಕಾರ ಇತರ ಕಠಿನ ಕ್ರಮಗಳನ್ನು ಕೂಡ ತೆಗೆದುಕೊಳ್ಳಲಾಗುತ್ತಿದೆ. ಈ ಮೂಲಕ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಒತ್ತು ನೀಡಲಾಗುತ್ತಿದೆ.

211 ವಾಹನಗಳು ಜಪ್ತಿ
ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ ಸಾರಿಗೆ ನಿಯಮ ಉಲ್ಲಂಘನೆಯ 1,103 ಪ್ರಕರಣಗಳು ದಾಖಲಾಗಿದ್ದು, 211 ವಾಹನಗಳನ್ನು ಈಗಾಗಲೇ ಜಪ್ತಿಮಾಡಲಾಗಿದೆ. ಕಳೆದ ಬಾರಿ 181 ಪ್ರಕರ ಣಗಳು ದಾಖಲಾಗಿದ್ದು, 250 ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

ನಕಲಿ ನಂಬರ್‌ ಪ್ಲೇಟ್‌ಗಳ ಮೇಲೆ ನಿಗಾ
ಲಕ್ಷಾಂತರ ರೂ.ಮೌಲ್ಯದ ಐಷಾರಾಮಿ ಕಾರುಗಳನ್ನು ಖರೀದಿಸಿ ಮೋಟಾರು ವಾಹನ ತೆರಿಗೆಯಿಂದ ಪಾರಾಗಲು ನಕಲಿ ನಂಬರ್‌ ಪ್ಲೇಟ್‌ಗಳನ್ನು ಅಳವಡಿಸುವವರ ಸಂಖ್ಯೆಯೂ ತ್ತೀಚೆಗೆ ಹೆಚ್ಚಾಗುತ್ತಿದೆ. ತಾತ್ಕಾಲಿಕ ನೋಂದಣಿ ಸಂಖ್ಯೆ ಮತ್ತು ನಕಲಿ ನಂಬರ್‌ ಪ್ಲೇಟ್‌ಗಳನ್ನು ಹಾಕಿಕೊಂಡು ಓಡಾಡುವ ವಾಹನಗಳ ಮೇಲೂ ಸಾರಿಗೆ ಇಲಾಖೆ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.

Advertisement

ರಾಜ್ಯದ ವಾರ್ಷಿಕ ಗುರಿ 7100 ಕೋ.ರೂ.!
ರಾಜ್ಯದ ಸಾರಿಗೆ ಇಲಾಖೆಯಲ್ಲಿ 2019-20ನೇ ಸಾಲಿನಲ್ಲಿ 7100 ಕೋ.ರೂ.ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ. ಸಾರಿಗೆ ಇಲಾಖೆಯಿಂದ 6601.96 ಕೋ.ರೂ. ಹಾಗೂ ಸಾರಿಗೆ ಸಂಸ್ಥೆಗಳಿಂದ 498.04 ಕೋ.ರೂ.ಆದಾಯದ ಗುರಿ ಹೊಂದಲಾಗಿದೆ. 2018-19ನೇ ಸಾಲಿಗೆ ರಾಜಸ್ವ ಸಂಗ್ರಹಣೆಯ ವಾರ್ಷಿಕ ಗುರಿ 6656.42 ಕೋ. ರೂ. (ಸಾರಿಗೆ ಸಂಸ್ಥೆಗಳು ಸೇರಿದಂತೆ) ನಿಗದಿಪಡಿಸಲಾಗಿತ್ತು. ಮಾ. 2019ರ ಅಂತ್ಯಕ್ಕೆ ರೂ.6548.57 ಕೋ.ರೂ.ರಾಜಸ್ವ ಸಂಗ್ರಹಣೆ ಮಾಡಲಾಗಿದ್ದು, ಶೇ. 98.38 ಗುರಿ ಸಾಧಿಸಲಾಗಿತ್ತು.

ಕಾನೂನು ಕ್ರಮ
2019-20ನೇ ಸಾಲಿನಲ್ಲಿ ಒಟ್ಟು 139.98 ಕೋ.ರೂ.ವಾರ್ಷಿಕ ಗುರಿ ಹೊಂದಲಾಗಿದೆ. ಮಾರ್ಚ್‌ ಅಂತ್ಯದ ವೇಳೆಗೆ ಇನ್ನೂ 36.08ಕೋ.ರೂ.ಮೊತ್ತ ಸಂಗ್ರಹವಾಗುವ ನಿರೀಕ್ಷೆಯನ್ನು ಹೊಂದಲಾಗಿದೆ. ಶೇ.100ರಷ್ಟು ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಲಾಗಿದೆ. ತೆರಿಗೆ ಪಾವತಿಸದವರ ವಾಹನಗಳನ್ನು ಕಾನೂನಿನಂತೆ ಮುಟ್ಟುಗೋಲು ಹಾಕಲಾಗುವುದು.
-ರಾಮಕೃಷ್ಣ ರೈ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ

-  ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next