ಕೊಲ್ಲೂರು: ಕಟ್ಟಡ ಕೊರತೆಯಿಂದಾಗಿ ಬೈಂದೂರು ತಾಲೂಕಿನ ಪ್ರಮುಖ ಕೇಂದ್ರವಾದ ವಂಡ್ಸೆಯಲ್ಲಿ ಶುಕ್ರವಾರದಂದು ನಡೆಯುವ ಸಂತೆ ಟಾರ್ಪಾಲ್ ಅಡಿ ನಡೆಯುವಂತಾಗಿದೆ.
ವಿವಿಧ ಉಪ ಗ್ರಾಮಗಳ ಕೇಂದ್ರ
ವಂಡ್ಸೆಯು ಕರ್ಕುಂಜೆ, ಚಿತ್ತೂರು, ನೂಜಾಡಿ, ಕುಂದಬಾರಂದಾಡಿ, ಅಡಿಕೆಕೊಡ್ಲು, ಅಬ್ಬಿ, ಹರಾವರಿ, ಉದ್ದಿನ ಬೆಟ್ಟು, ನೆಂಪು, ಹೆರ್ಗಾಡಿ, ಕೆಂಚನೂರು, ನಂದ್ರೋಳಿ, ಬೆಳ್ಳಾಲ ಸಹಿತ ವಿವಿಧ ಗ್ರಾಮಗಳ ಸಂಪರ್ಕ ಪೇಟೆಯಾಗಿದೆ. ಇಲ್ಲಿನ ಸಂತೆ ವ್ಯಾಪಾರಕ್ಕೆ ಗ್ರಾಮೀಣರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಕಟ್ಟಡವಿಲ್ಲದ್ದರಿಂದ ವ್ಯಾಪಾರಿಗಳು ತಾತ್ಕಾಲಿಕ ಚಪ್ಪರದಡಿ ತರಕಾರಿ, ಹಣ್ಣು ಹಂಪಲು, ಬಟ್ಟೆ ವ್ಯಾಪಾರ ಇತ್ಯಾದಿಗಳನ್ನು ಮಾರಾಟ ಮಾಡುತ್ತಾರೆ.
ಶಿಥಿಲಗೊಂಡ ಕಟ್ಟಡ
ಬಳಕೆಯಲ್ಲಿದ್ದ ಬಹಳಷ್ಟು ವರುಷಗಳ ಪುರಾತನ ಸಂತೆ ಮಾರ್ಕೆಟ್ ಕಟ್ಟಡವು ಶಿಥಿಲ ಗೊಂಡು ಬಿರುಕು ಬಿಟ್ಟು ಕುಸಿದಿದೆ. ಆದ್ದರಿಂದ ವ್ಯಾಪಾರಿಗಳು ಮುಖ್ಯ ರಸ್ತೆಯ ಪಕ್ಕದಲ್ಲಿರುವ ಜಾಗದಲ್ಲೇ ತಾತ್ಕಾಲಿಕ ಶೆಡ್ ನಿರ್ಮಿಸಿ ವ್ಯವಹಾರ ನಡೆಸುತ್ತಾರೆ.
ಸಂಚಾರಕ್ಕೂ ಸಮಸ್ಯೆ
ವಾಹನ ಸಂಚಾರದ ಮುಖ್ಯ ರಸ್ತೆಯಾಗಿರುವುದರಿಂದ ಆ ಮಾರ್ಗದ ಪಕ್ಕದಲ್ಲೇ ಅನಿವಾರ್ಯವಾಗಿ ವ್ಯವಹಾರ ನಡೆಸಬೇಕಾಗಿದೆ. ಕೆಲವೊಮ್ಮೆ ವಾಹನ ಸಂಚಾರಕ್ಕೂ ಇಲ್ಲಿ ಸಮಸ್ಯೆಯಾಗುತ್ತದೆ.
ಸಾರ್ವಜನಿಕ ಶೌಚಾಲಯವೂ ಅಗತ್ಯ
ಸಂತೆ ಮಾರುಕಟ್ಟೆಯೊಂದಿಗೆ ಪೇಟೆಗೆ ಬರುವವರಿಗೆ ಇಲ್ಲಿ ಉತ್ತಮವಾದ ಶೌಚಾಲಯವೂ ಇಲ್ಲ. ಇದರಿಂದ ಪ್ರಯಾಣಿಕರಿಗೆ, ಪೇಟೆಗೆ ಬರುವವರಿಗೂ ಸಮಸ್ಯೆಯಾಗುತ್ತಿದೆ. ಇದಕ್ಕೆ ಆಡಳಿತ ಶಾಶ್ವತ ಪರಿಹಾರ ನೀಡಬೇಕಾಗಿದೆ.