Advertisement

ಅರ್ಜಿ ಇತ್ಯರ್ಥಕ್ಕೆ ಮಾ. 31ರ ಗಡುವು

07:20 AM Dec 07, 2017 | Team Udayavani |

ಬೆಂಗಳೂರು: ಗ್ರಾಮೀಣ ಅಕ್ರಮ-ಸಕ್ರಮ (94ಸಿ), ಬಗರ್‌ಹುಕುಂ ಸಾಗುವಳಿ ಚೀಟಿ, ವಾಸಿಸುವವನೇ ಮನೆಯೊಡೆಯ ಅರ್ಜಿಗಳನ್ನು ಇತ್ಯರ್ಥಗೊಳಿಸಲು ಅಧಿಕಾರಿಗಳಿಗೆ 2018ರ ಮಾ. 31ರ ಗಡುವು ವಿಧಿಸಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು, ಈ ನಿಟ್ಟಿನಲ್ಲಿ ಜಿಲ್ಲಾವಾರು ಸಭೆಗಳನ್ನು ನಡೆಸಲು ಡಿ. 15ರ ಬಳಿಕ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಗೋಡು ತಿಮ್ಮಪ್ಪ, ಗ್ರಾಮೀಣ ಅಕ್ರಮ-ಸಕ್ರಮ, ಬಗರ್‌ಹುಕುಂ ಸಾಗುವಳಿ ಚೀಟಿ ಅರ್ಜಿಗಳನ್ನು ಇತ್ಯರ್ಥಗೊಳಿಸಲು ಈಗಾಗಲೇ ಸಾಕಷ್ಟು ಗಡುವು ವಿಧಿಸಲಾಗಿತ್ತಾದರೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಮಾ. 31ರ ಗಡುವು ವಿಧಿಸಲಾಗಿದೆ. ಇದರ ಜತೆಗೆ ವಾಸಿಸುವವೇ ಮನೆಯೊಡೆಯ ಯೋಜನೆ ಅರ್ಜಿಗಳ ಇತ್ಯರ್ಥಕ್ಕೂ ಇದೇ ಗಡುವು ವಿಧಿಸಲಾಗಿದೆ. ಈ ಪ್ರಕ್ರಿಯೆಗಳನ್ನು ಚುರುಕುಗೊಳಿಸಲು ಏನೇನು ಕ್ರಮಗಳನ್ನು ಕೈಗೊಳ್ಳ ಬೇಕು ಎಂಬ ಬಗ್ಗೆ ಸುತ್ತೋಲೆ ಹೊರಡಿಸಲಾಗುವುದು ಎಂದು ತಿಳಿಸಿದರು.

ತ್ವರಿತಕ್ಕೆ ಮತ್ತೂಮ್ಮೆ ಸುತ್ತೋಲೆ: ಗ್ರಾಮೀಣ ಅಕ್ರಮ-ಸಕ್ರಮ ಯೋಜನೆ 2012ರ ಮುಂಚಿನ ನಿರ್ಮಾಣಕ್ಕೆ ಮಾತ್ರ ಅನ್ವಯವಾಗುತ್ತದೆ ಎಂದು ಈ ಹಿಂದಿನ ಆದೇಶದಲ್ಲಿ ತಿಳಿಸಲಾಗಿತ್ತು. ಇದೀಗ 2015 ರವರೆಗೆ ಅವಧಿ ವಿಸ್ತರಿಸಲಾಗಿದೆ. ಜತೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಮುಂದಿನ ಫೆಬ್ರವರಿವರೆಗೆ ವಿಸ್ತರಿಸಲಾಗಿದೆ. ಪ್ರಸ್ತುತ 6-7 ಲಕ್ಷ ಅರ್ಜಿಗಳು ಬಂದಿದ್ದು, ಇನ್ನೂ ಸಾಕಷ್ಟು ಮಂದಿ ಅರ್ಜಿ ಸಲ್ಲಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಿಗರು
ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ನಕ್ಷೆಯೊಂದಿಗೆ ಸುತ್ತಾಡಿ ಅರ್ಜಿ ಸಲ್ಲಿಸದವರಿಂದ ಅರ್ಜಿ ಪಡೆಯಬೇಕು. ರಾಜ್ಯಾದ್ಯಂತ ಈ ಪ್ರಕ್ರಿಯೆ ಚುರುಕುಗೊಳಿಸಿ ಮಾರ್ಚ್‌ ಅಂತ್ಯದೊಳಗೆ ಅರ್ಜಿ ಇತ್ಯರ್ಥಗೊಳಿಸಬೇಕು. ಅದಕ್ಕಾಗಿ ಮತ್ತೂಮ್ಮೆ ಸುತ್ತೋಲೆ ಹೊರಡಿಸಲಾಗುವುದು ಎಂದರು. 

ಸಭೆ ಕರೆದು ಸೂಕ್ತ ಕ್ರಮ: ಇದರ ಜತೆಗೆ ಬಗರ್‌ ಹುಕುಂ ಸಾಗುವಳಿ ಚೀಟಿ ವಿತರಣೆ ಮತ್ತು ವಾಸಿಸುವವನೇ ಮನೆಯೊಡೆಯ ಯೋಜನೆ ಅರ್ಜಿಗಳನ್ನೂ ಕಾಲಮಿತಿಯೊಳಗೆ ಇತ್ಯರ್ಥ ಪಡಿಸಬೇಕಾಗಿದೆ. ಅದಕ್ಕಾಗಿ ಡಿ. 15ರ ಬಳಿಕ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next