Advertisement

ಗ್ರಾಮೀಣರಿಗೆ ಹೈನುಗಾರಿಕೆ ಸಂಜೀವಿನಿಯಿದ್ದಂತೆ

09:30 PM Sep 18, 2019 | Lakshmi GovindaRaju |

ದೇವನಹಳ್ಳಿ: ರಾಸು ಕರು ಹಾಕಿದ ಮೂರು ತಿಂಗಳಲ್ಲಿ ಕೃತಕ ಗರ್ಭಧಾರಣೆ ಮಾಡಿಸಬೇಕು. ಇದನ್ನು ತಡೆದು ತಿಂಗಳಗಟ್ಟಲೇ ಕಾಯಬಾರದು. ಹಾಲು ಬರುತ್ತದೆ ಎಂಬ ದೃಷ್ಟಿಯನ್ನಿಟ್ಟುಕೊಂಡು ತಡ ಮಾಡಬಾರದು ಎಂದು ಶಾಸಕ ಎಲ್‌.ಎನ್‌.ನಾರಾಯಣಸ್ವಾಮಿ ಹೇಳಿದರು.

Advertisement

ತಾಲೂಕಿನ ಕೊಯಿರಾ ಪಂಚಾಯಿತಿ ಆವರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಪಂ, ತಾಪಂ, ಪಶುಪಾಲನೆ ಮತ್ತು ಪಶುವೈದ್ಯ ಇಲಾಖೆ ಹಾಗೂ ಕೊಯಿರಾ ಹಾಲು ಉತ್ಪಾದಕರ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ವತಿಯಿಂದ ಹಮ್ಮಿಕೊಂಡಿದ್ದ 2019-20ರ ತಾತ್ಕಾಲಿಕ ಬರಡು, ರಾಸುಗಳ ಚಿಕಿತ್ಸೆ ಹಾಗೂ ಜಾನುವಾರು ಫಲೀಕರಣ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಆರ್ಥಿಕವಾಗಿ ಸ್ವಾವಲಂಬಿಗಳಾಗಿ: ರಾಸುಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವ ಮೂಲಕ ರೈತರು ತಮ್ಮ ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳಿ. ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕಾದರೆ ಗ್ರಾಮೀಣ ಜನರಿಗೆ ಹೈನು ಉದ್ಯಮದಿಂದ ಆರ್ಥಿಕ ಸುಧಾರಣೆಯಾಗುತ್ತದೆ. ರಾಸುಗಳು ಬರಡಾಗಲು ರೈತರ ನಿರ್ಲಕ್ಷ್ಯ ಕಾರಣವಾಗಬಾರದು ಎಂದರು.

ರಾಸುಗಳ ಆರೋಗ್ಯ ಕಾಪಾಡಿ: ಬರಡು ರಾಸುಗಳಿಗೆ ಗರ್ಭಧಾರಣೆ ಮಾಡಿಸಲು ಅಗತ್ಯ ಕ್ರಮಗಳನ್ನು ನುರಿತ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಅವರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು. ಕರು ಸಂತತಿ ಹೆಚ್ಚಾದರೆ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಅನುಕೂಲವಾಗುತ್ತದೆ. ತಜ್ಞ ವೈದ್ಯರಿಂದ ಬರಡು ರಾಸುಗಳಿಗೆ ಗರ್ಭಕಟ್ಟಲು ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರತಿ ರೈತರು ಪಶು ಇಲಾಖೆಯಲ್ಲಿ ದೊರೆಯುವಂತೆ ಚಿಕಿತ್ಸಾ ಸೌಲಭ್ಯಗಳು, ಔಷಧಿಗಳನ್ನು ಸಕಾಲದಲ್ಲಿ ಪಡೆದುಕೊಂಡು ರಾಸುಗಳ ಆರೋಗ್ಯ ಕಾಪಾಡಿ ಕೊಳ್ಳಬೇಕು. ರಾಸುಗಳ ಆರೋಗ್ಯ ಚೆನ್ನಾಗಿದ್ದರೆ ಗುಣಮಟ್ಟದ ಹಾಲು ದೊರೆಯುವಂತೆ ಆಗುತ್ತದೆ. ರೈತರ ಆರ್ಥಿಕಮಟ್ಟ ಹೆಚ್ಚುತ್ತದೆ ಎಂದು ರೈತರಿಗೆ ಸಲಹೆ ಮಾಡಿದರು.

ಪ್ರೋತ್ಸಾಹಧನ ಹೆಚ್ಚಿಸಬೇಕು: ತಾಪಂ ಸದಸ್ಯ ಕಾರಹಳ್ಳಿ ಶ್ರೀನಿವಾಸ್‌ ಮಾತನಾಡಿ, ಗ್ರಾಮೀಣ ಭಾಗದಲ್ಲಿ ರೈತರು ರೇಷ್ಮೆ ಮತ್ತು ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪ್ರತಿ ರೈತರು ಹೆಚ್ಚು ಶ್ರಮಜೀವಿಗಳು ಇದನ್ನು ಅರಿತು ಸರಕಾರದ ಮಟ್ಟದಲ್ಲಿ ಗ್ರಾಮೀಣ ಭಾಗದ ರೈತರಿಗೆ ರೇಷ್ಮೆ ಮತ್ತು ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಬೇಕು. ರೈತರಿಗೆ ಪ್ರೋತ್ಸಾಹಧನ ಹೆಚ್ಚಿಸುವ ನಿಟ್ಟಿನಲ್ಲಿ ಹಾಲು ಉತ್ಪಾದನೆಯಲ್ಲಿ ಹೆಚ್ಚಳ ಮಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

Advertisement

ಮಾಹಿತಿ ಪಡೆದು ಸೌಲಭ್ಯ ಪಡೆಯಿರಿ: ಈ ಭಾಗದಲ್ಲಿ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಗತ್ಯ ಸೌಲಭ್ಯಗಳನ್ನು ಸರಕಾರದ ಮಟ್ಟದಲ್ಲಿ ಮಾಡುವಂತಾಗಬೇಕು. ರೈತರು ಸಹ ಸರಕಾರದ ಯೋಜನೆಗಳ ಸದುಪಯೋಗವನ್ನು ಪ್ರತಿ ಇಲಾಖೆಯಲ್ಲಿ ಮಾಹಿತಿ ಪಡೆದುಕೊಂಡು ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಉತ್ತಮ ಬಾಂಧವ್ಯ ಹೊಂದಿ: ತಾಪಂ ಅಧ್ಯಕ್ಷೆ ಚೈತ್ರಾ ಮಾತನಾಡಿ, ರೈತರು ರಾಸುಗಳಿಗೆ ಎಲ್ಲಾ ರೀತಿಯ ಮೇವಿನ ಪದಾರ್ಥಗಳನ್ನು ಒದಗಿಸಬೇಕು. ರೈತರು ಒಂದೇ ರೀತಿಯ ಮೇವನ್ನು ಬೆಳೆಯದೆ ವಿವಿಧ ತಳಿಯ ಬೆಳೆಗಳನ್ನು ಬೆಳೆದು ರಾಸುಗಳಿಗೆ ಉಣಿಸಿದರೆ ಉತ್ತಮ ಪೌಷ್ಟಿಕಾಂಶ ಸಿಗುತ್ತದೆ. ಇದರಿಂದ ಬರಡು(ಬಂಜೆ)ತನ ಮುಕ್ತವನ್ನಾಗಿಸಬಹುದು. ಪಶು ಇಲಾಖೆ ವೈದ್ಯರುಗಳಲ್ಲಿ ಉತ್ತಮ ಬಾಂಧವ್ಯ ಇಟ್ಟುಕೊಳ್ಳಿ ಎಂದರು.

ತಾಪಂ ಸದಸ್ಯೆ ಶೈಲಜಾ ಜಗದೀಶ್‌, ಸಹಾಯಕ ನಿರ್ದೇಶಕ ಪಶುಪಾಲನಾ ಇಲಾಖೆ ರಮೇಶ್‌.ಬಿ.ಕೆ, ವಿಸ್ತರಣಾಧಿಕಾರಿ ಡಾ.ಮಧುಸೂದನ್‌, ಉಪ ನಿರ್ದೇಶಕ ಕಚೇರಿ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್‌, ವಿಜಯಪುರ ಮುಖ್ಯ ಪಶು ವೈದ್ಯಾಧಿಕಾರಿ ಡಾ.ನಾರಾಯಣಸ್ವಾಮಿ, ಕೊಯಿರಾ ಪಶುಪಾಲನಾ ಆಸ್ಪತ್ರೆ ವೈದ್ಯ ಡಾ.ಕಾಂತರಾಜು, ಗ್ರಾಪಂ ಮಾಜಿ ಅಧ್ಯಕ್ಷ ನಂಜೇಗೌಡ, ಗ್ರಾಪಂ ಸಿಬ್ಬಂದಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next