Advertisement

ನೆರೆ ಪೀಡಿತ ಗ್ರಾಮ ಪುನರ್‌ ನಿರ್ಮಾಣಕ್ಕೆ ಕ್ರಮ

10:25 AM Sep 21, 2019 | Suhan S |

ಗದಗ: ಜಿಲ್ಲೆಯ ನೆರೆ ಪೀಡಿತ ಗ್ರಾಮಗಳ ಸಂಪರ್ಕ ರಸ್ತೆ, ಸೇತುವೆಗಳ ಪುನರ್‌ ನಿರ್ಮಾಣಕ್ಕೆ ಅಗತ್ಯವಿರುವ 40.45 ಕೋಟಿ ರೂ. ಅನುದಾನವನ್ನು ಶೀಘ್ರ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ಲೋಕೋಪಯೋಗಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭರವಸೆ ನೀಡಿದರು.

Advertisement

ಇಲ್ಲಿನ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ನೆರೆ ಪರಿಸ್ಥಿತಿ ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ನೆರೆ ಪೀಡಿತ ಗ್ರಾಮಗಳಿಗೆ ರಸ್ತೆ, ಕೊಚ್ಚಿ ಹೋದ ಸೇತುವೆಗಳನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಲು ಲೋಕೋಪಯೋಗಿ ಇಲಾಖೆ ಕ್ರಮ ಜರುಗಿಸಬೇಕು ಎಂದರು.

ಡಾ| ಬಿ.ಆರ್‌. ಅಂಬೇಡ್ಕರ, ವಾಲ್ಮೀಕಿ, ಡಾ| ಜಗಜೀವನರಾಂ ನಿಗಮಗಳ ಪ್ರಸಕ್ತ ಸಾಲಿನ ಫಲಾನುಭವಿಗಳ ಆಯ್ಕೆಯನ್ನು ಅಂತಿಮಗೊಳಿಸಿ, ಶೀಘ್ರಗತಿಯಲ್ಲಿ ಸೌಲಭ್ಯ ಒದಗಿಸಬೇಕು. ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಲ್ಲಿ ಸ್ವತ್ಛತೆ ಹಾಗೂ ನಿರ್ವಹಣೆಯಲ್ಲಿ ಲೋಪದೋಷಗಳಿದ್ದಲ್ಲಿ ಸಂಬಂಧಿತ ಅಧಿಕಾರಿಗಳನ್ನು ಅಮಾನತುಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಜಿಲ್ಲೆಯು ಮಲಪ್ರಬಾ ಹಾಗೂ ತುಂಗಭದ್ರಾ ನದಿಗಳ ಹೊರ ಹರಿವಿನ ಹೆಚ್ಚಳದ ಪ್ರವಾಹದಿಂದ ರಸ್ತೆ, ಸೇತುವೆ, ಮನೆಗಳ ಬೆಳೆ ಹಾನಿ ಕುರಿತಂತೆ ಮಾಹಿತಿ ನೀಡಿ ಈವರೆಗೆ 9,937 ಕುಟುಂಬಗಳಿಗೆ ತಲಾ 10 ಸಾವಿರ ರೂ. ಪರಿಹಾರ ನೀಡಲಾಗಿದೆ ಎಂದರು.

ನರಗುಂದ ತಾಲೂಕಿನಲ್ಲಿ 2292, ರೋಣದಲ್ಲಿ 858 ಹಾಗೂ ಶಿರಹಟ್ಟಿಯಲ್ಲಿ 48, ಮನೆಗಳ ಹಾನಿಯಾಗಿದೆ. ಕೊಣ್ಣೂರಿನಲ್ಲಿ ನೆರೆ ಸಂತ್ರಸ್ತರಿಗೆ 120 ಶೆಡ್‌ಗಳನ್ನು ನಿರ್ಮಿಸಿದ್ದು, 51 ಶಾಲಾ ಶೆಡ್‌ಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮನೆ ಹಾನಿ ಕುರಿತ ಸಮಗ್ರ ದತ್ತಾಂಶ ಒದಗಿಸುವ ಕಾರ್ಯ ಶೀಘ್ರವೇ ಪೂರ್ಣಗೊಳಿಸಲಾಗುವುದು.

Advertisement

ಜಿಲ್ಲೆಯಲ್ಲಿ ಇತ್ತೀಚಿನ ಮಲಪ್ರಭಾ ಹಾಗೂ ತುಂಗಭದ್ರಾ ನದಿ ಪ್ರವಾಹಗಳಿಂದಾಗಿ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳ ಹಾಗೂ ಹಾನಿ ಕುರಿತಂತೆ ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಅಭಿಯಂತರ ಶಿವಪ್ರಕಾಶ ಮಾಹಿತಿ ನೀಡಿ, ನೆರೆ ಹಾನಿಗೊಳಗಾದ ರಸ್ತೆ, ಸೇತುವೆಗಳ ತಾತ್ಕಾಲಿಕ ದುರಸ್ತಿಗಾಗಿ 2.10 ಕೋಟಿ ರೂ. ಬಿಡುಗಡೆ ಆಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ

ರಸ್ತೆ, ಸೇತುವೆಗಳ ಪುನರ್‌ ನಿರ್ಮಾಣಕ್ಕೆ ಒಟ್ಟು 40.45 ಕೋಟಿ ರೂ.ಗಳ ಅಗತ್ಯವಿದೆ. ಜಿಲ್ಲೆಯಲ್ಲಿ ರಾಜ್ಯ ಹೆದ್ದಾಯ 54.56 ಕಿ.ಮೀ ರಸ್ತೆ ಹಾಗೂ 7 ಸೇತುವೆ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ 38.80 ಕಿ.ಮೀ. ಹಾಗೂ 17 ಸೇತುವೆಗಳು 4 ಸರ್ಕಾರಿ ಕಟ್ಟಡಗಳು ಹಾನಿಗೊಳಗಾಗಿವೆ ಎಂದರು. ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ, ಜಿ.ಪಂ. ಸಿಇಒ ಡಾ| ಆನಂದ್‌ ಕೆ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತರರಾದ

ಶಿವಯೋಗಿ ಹಿರೇಮಠ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಖಾಜಾ ಹುಸೇನ ಮುಧೋಳ, ಲೋಕೋಪಯೋಗಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next