ವಿಫಲನಾದೆ ಎರಡನೇ ಬಾರಿ! ಎದೆಯೊಳಗಿದ್ದ ಎಲ್ಲ ಮಾತುಗಳನ್ನು ಈ ಬಾರಿ ಹೇಳಿಯೇ ಬಿಡಬೇಕೆಂದು ಅವಳೆದುರು ನಿಂತು ಏನನ್ನೂ ಹೇಳಲಾರದೆ ಮೂಕನಾಗಿದ್ದು, ಬಾಯಿಪಾಠ ಮಾಡಿಕೊಂಡಿದ್ದ ಮಾತುಗಳನ್ನೆಲ್ಲ ಮರೆತು ಮೌನಿಯಾಗಿದ್ದು, ನನ್ನ ಕಥೆ. ಅವಳು, ತುಂಬು ತೆನೆ ಹೊತ್ತ ಗಿಡವೊಂದು ಬಾಗಿ ಭುವಿ ನೋಡುವಂತೆ, ಮೊಗದ ತುಂಬ ನಗು ಹೊತ್ತಾಕೆ ನೆಲ ದಿಟ್ಟಿಸಲು ಶುರು ಮಾಡಿದಳಲ್ಲ; ಅದಕ್ಕೆ ಕಾರಣ ನಾಚಿಕೆಯೇ? ಊಹ್ಞೂಂ ತಿಳಿಯದು.
ತುಸು ವಿರಾಮವನ್ನೂ ಪಡೆಯದೆ ಅದಾವುದೋ ಕಾಣದ ಮಾಯೆಗಾಗಿ ಹುಡುಕಾಟ ನಡೆಸುವ ಅವಳ ಕಂಗಳ ಹುಡುಗಾಟಿಕೆಗೆ ಮರುಳಾದ ನನಗೆ ಜೀವನ ಪರ್ಯಂತ ಮರುಳನಾಗಿಯೇ ಇರುವ ಆಸೆ ಹುಟ್ಟುವುದಕ್ಕೆ ಕಾರಣ ಇದೇ ಎಂದು ಹೇಗೆ ಹೇಳಲಿ? ಅವಳ ಕಂಗಳ ಹೊಳಪಿಗೆ ಸೂರ್ಯನೂ ನಾಚುತ್ತಾನೆ, ಅವನ ನಾಚಿಕೆಯ ಕಂಡು ಬೆಳ್ಳಿ ಮೋಡಗಳೂ ನಸುನಗುತ್ತವೆ.
ಮೊಗದಲ್ಲಿ ನಗುವಿದ್ದರೂ ಒಳಗೊಳಗೇ ಕಂಪಿಸುವ ಮೋಡಗಳಿಗೆ ಸೂರ್ಯನನ್ನೇ ಸೋಲಿಸಿದ ಹುಡುಗಿಯ ಮನದ ಬಿಳುಪಿನೆಡೆಗೆ ಕೊಂಚ ಅಸೂಯೆ ಇರಬಹುದೆಂದು ನನಗೆ ಅನ್ನಿಸುವುದಾದರೂ ಏಕೆ? ನಗು, ಕಂಪನ, ಅಸೂಯೆಗಳ ಘರ್ಷಣೆಗೆ ಸಿಕ್ಕು ಜನ್ಮ ತಳೆದ ಸಹಸ್ರ ಸಹಸ್ರ ಹನಿಗಳು ಭುವಿಗೆ ಮುತ್ತಿಕ್ಕುವ ಭರದಲ್ಲಿ, ಮೌನಿಯಾಗಿ ನಿಂತಿದ್ದ ನನ್ನನ್ನು ಸೋಕಿದಾಗಲೇ ವಾಸ್ತವದ ಅರಿವಾಗಿದ್ದು.
ತುಸು ವಿರಾಮವನ್ನೂ ಪಡೆಯದ ಅವಳ ಕಂಗಳೆರಡು ನನ್ನೆಡೆಗೆ ಹುಡುಕಾಟದ – ಹುಡುಗಾಟದ ನೋಟ ಬೀರುತ್ತಿವೆಯೆಂಬ ಅರಿವಾದದ್ದು. ಅಷ್ಟೇ… ಅಲ್ಲಿಗೆ ಮತ್ತೂಂದು ಪ್ರಯತ್ನ ನಿರಾಯಾಸವಾಗಿ ಸೋತು ಹೋಗಿತ್ತು, ಯಥಾಪ್ರಕಾರ ಈ ಬಾರಿಯೂ ವಿಫಲನಾದೆ. ಹಾಗಂತ ಸೋಲೊಪ್ಪಿಕೊಳ್ಳಲಾರೆ. ಮತ್ತಷ್ಟು ಸಿದ್ಧತೆ ಮಾಡಿಕೊಂಡೇ ಮೂರನೇ ಬಾರಿಯೂ ಹಾಜರಾಗುತ್ತೇನೆ- ಪ್ರೇಮ ಪರೀಕ್ಷೆಗೆ! ಅಕಸ್ಮಾತ್ ಆಗಲೂ ಫೇಲಾದರೆ, ನಾಲ್ಕು, ಐದು ಹಾಗೂ ಆರನೇ ಪ್ರಯತ್ನಗಳೂ ಜಾರಿಯಲ್ಲಿರುತ್ತವೆ!
ಇಂತಿ
ಮರುಳನಾದವ
* ಶಶಾಂಕ್ ಜಿ.ಎಂ