ಬಹ್ರೈನ್ :ಇಲ್ಲಿನ ಅನಿವಾಸಿ ಬಿಲ್ಲವ ಸಮುದಾಯದ ಸಂಘಟನೆಯಾದ “ಬಹ್ರೈನ್ ಬಿಲ್ಲವಾಸ್’ ಇದೀಗ ಇಪ್ಪತ್ತನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು ಈ ಸಂಭ್ರಮಾಚರಣೆಯ ಅಂಗವಾಗಿ ದ್ವೀಪದಲ್ಲಿ ಪ್ರಪ್ರಥಮ ಬಾರಿಗೆ ತುಳು ರಂಗಭೂಮಿಯಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿರುವ ಜನಪ್ರಿಯ ನಾಟಕ “ಶಿವದೂತ ಗುಳಿಗೆ ‘ ಇದೇ ಫೆಬ್ರವರಿ ತಿಂಗಳ ಒಂಬತ್ತನೇ ತಾರೀಖೀನಂದು ಸಗಯಾದಲ್ಲಿರುವ ಬಹ್ರೈನ್ ಕೇರಳೀಯ ಸಮಾಜದ ಸಭಾಂಗಣದಲ್ಲಿ ಸಂಜೆ 5:00 ಗಂಟೆಗೆ ಸರಿಯಾಗಿ ಪ್ರದರ್ಶನ ಕಾಣಲಿದೆ.
ಬಹ್ರೈನ್ ಪ್ರದರ್ಶನದ ಟಿಕೇಟ್‌ಗಳ ಬಿಡುಗಡೆ ಹಾಗೂ ಭಿತ್ತಿ ಪತ್ರದ ಅನಾವರಣ ಕಾರ್ಯಕ್ರಮವು ಇತ್ತೀಚೆಗೆ ಕನ್ನಡ ಭವನದ ಸಭಾಂಗಣದಲ್ಲಿ ಜರುಗಿತು. ಬ್ರಹ್ಮಶ್ರೀ ನಾರಾಯಣಗುರುಗಳಿಗೆ ಹಾಗೂ ಕೋಟಿ ಚೆನ್ನಯರಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. “ಶಿವದೂತ ಗುಳಿಗೆ’ ನಾಟಕದ ಭಿತ್ತಿಪತ್ರವನ್ನು ಬಹ್ರೈನ್ ಬಿಲ್ಲವಾಸ್‌ನ ಅಧ್ಯಕ್ಷರಾದ ಹರೀಶ್ ಪೂಜಾರಿಯವರು, ಕನ್ನಡ ಸಂಘದ ಪ್ರಭಾರ ಅಧ್ಯಕ್ಷರಾದ ಮಹೇಶ್ ಕುಮಾರ್ ಹಾಗೂ ಇತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ವಿಶಿಷ್ಟ ರೀತಿಯಲ್ಲಿ ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ, ಹರೀಶ್ ಪೂಜಾರಿಯವರು ಇದೊಂದು ದೊಡ್ಡ ಮಟ್ಟದ ಕಾರ್ಯಕ್ರಮವಾಗಿದ್ದು ಇದಕ್ಕೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು. ನೂರಾರು ಸಂಖ್ಯೆಯಲ್ಲಿ ಕಲಾಪ್ರೇಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನೆರೆದವರಿಗೆ ನಾಟಕದ ಟಿಕೇಟ್‌ಗಳನ್ನು ಹಸ್ತಾಂತರಿಸಲಾಯಿತು.
ತುಳು ರಂಗಭೂಮಿಯ ಖ್ಯಾತ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲಬೈಲ್ ಅವರ ನಿರ್ದೇಶನದಲ್ಲಿ “ಕಾಂತಾರ’ ಖ್ಯಾತಿಯ ಸ್ವರಾಜ್ ಶೆಟ್ಟಿ ಅವರು ಮುಖ್ಯ ಭೂಮಿಕೆಯಲ್ಲಿರುವ ಈ ನಾಟಕವನ್ನು ಕಲಾಸಂಗಮ ಕಲಾವಿದರು ದ್ವೀಪದಲ್ಲಿ ಆಡಿ ತೋರಿಸಲಿದ್ದು, ವಿಶೇಷ ರಂಗ ಸಜ್ಜಿಕೆ, ವಿಶೇಷವಾದ ಬೆಳಕುಗಳ ಬಳಕೆ ಹಾಗೂ ಹೊಸ ತಂತ್ರಜ್ಞಾನದಿಂದ ಮೈನವಿರೇಳಿಸುವ ಈ ನಾಟಕವು ನಾಡಿನಾದ್ಯಂತ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬಹ್ರೈನ್‌ನಲ್ಲಿ ಪ್ರದರ್ಶನವಾಗಲಿರುವ ಈ ನಾಟಕವು ಕಲಾಸಂಗಮ ತಂಡದ 579ನೇ ಯಶಸ್ವಿ ಪ್ರದರ್ಶನವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಶಿವದೂತ ಗುಳಿಗೆ ತಂಡವು ಇತ್ತೀಚೆಗಷ್ಟೇ 555ನೇ ಪ್ರದರ್ಶನದೊಂದಿಗೆ ಯಶಸ್ಸಿನ ಸಂಭ್ರಮಾಚರಣೆಯನ್ನು ಮಂಗಳೂರಿನಲ್ಲಿ ಆಚರಿಸಿತ್ತು. ಬಹ್ರೈನ್ ಬಿಲ್ಲವಾಸ್‌ನ ಪ್ರಧಾನ ಕಾರ್ಯದರ್ಶಿ ರೂಪೇಶ್ ಸುವರ್ಣ ಅವರು ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದ ಸಮರ್ಪಣೆ ಮಾಡಿದರು. ನಾಟಕದ ರಂಗಸಜ್ಜಿಕೆಗೆ ಬೇಕಾಗುವ ಎಲ್ಲ ಪರಿಕರಗಳು ಇದಾಗಲೇ ದ್ವೀಪವನ್ನು ತಲುಪಿದ್ದು ನಾಟಕಕ್ಕೆ ದಿನಗಣನೆ ಪ್ರಾರಂಭವಾಗಿದೆ. ಈ ನಾಟಕ ಪ್ರದರ್ಶನದ ಬಗೆಗಿನ ಹೆಚ್ಚಿನ ವಿವರಗಳಿಗೆ ಬಹ್ರೈನ್ ಬಿಲ್ಲವಾಸ್‌ನ ಅಧ್ಯಕ್ಷರಾದ ಹರೀಶ್ ಪೂಜಾರಿಯವರನ್ನು ದೂರವಾಣಿ ಸಂಖ್ಯೆ 973-39049132 ಮೂಲಕ ಸಂಪರ್ಕಿಸಬಹುದು.
ವರದಿ: ಕಮಲಾಕ್ಷ ಅಮೀನ್