ಉಡುಪಿ: ಕೊಂಕಣ ರೈಲ್ವೇ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ರೈಲು ಸೇವೆ ಉಡುಪಿ ರೈಲ್ವೇ ನಿಲ್ದಾಣಕ್ಕೆ ತಲುಪಿ, ಉಡುಪಿಯಿಂದಲೇ ಹಿಂದಿರುಗಲಿದೆ.
ಹೋಳಿ ಹಬ್ಬದ ಪ್ರಯುಕ್ತ ಪ್ರತಿವರ್ಷ ಪಶ್ಚಿಮ ರೈಲ್ವೇ ಬಾಂದ್ರಾದಿಂದ ಮಂಗಳೂರು ಜಂಕ್ಷನ್‌ವರೆಗೆ ವಿಶೇಷ ರೈಲುಗಳನ್ನು ಕೊಂಕಣ ರೈಲ್ವೇ ಸಹಕಾರದಲ್ಲಿ ಓಡಿಸುತ್ತಿತ್ತು. ಚಳಿಗಾಲದಲ್ಲಿಯೂ, ಬೇಸಗೆಯಲ್ಲಿಯೂ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ. ಈ ಬಾರಿ ಪಶ್ಚಿಮ ರೈಲ್ವೇ ಮುಖ್ಯ ಪ್ರಯಾಣಿಕ ಸಾರಿಗೆ ವ್ಯವಸ್ಥಾಪಕರು (ಸಿಪಿಟಿಎಂ) ಕೇಳಿದಾಗ ಮಂಗಳೂರು ಜಂಕ್ಷನ್‌ನಲ್ಲಿ ಸ್ಥಳಾಭಾವ ತೋರಿಬಂತು. ರಾತ್ರಿ 9.40ರೊಳಗೆ ತೋಕೂರು ರೈಲ್ವೇ ನಿಲ್ದಾಣವನ್ನು ಬಿಟ್ಟು ಕೊಡಬೇಕು ಎಂಬ ಸಮಯ ನಿರ್ಬಂಧವನ್ನೂ ಹೇಳಿದರು ಎಂದು ತಿಳಿದುಬಂದಿದೆ. ಇದಕ್ಕೆ ಕಾರಣ ಪಣಂಬೂರು ಮತ್ತು ಜೋಕಟ್ಟೆ ನಡುವೆ ಹಳಿ ದ್ವಿಗುಣ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಬಾಂದ್ರಾದಿಂದ ಹೊರಡುವ ವಿಶೇಷ ರೈಲನ್ನು ಉಡುಪಿ ನಿಲ್ದಾಣದವರೆಗೆ ಓಡಿಸಿ ಅಲ್ಲಿಂದಲೇ ಬಾಂದ್ರಾಕ್ಕೆ ವಾಪಸಾಗುವ ಸೇವೆಯನ್ನು ಪಶ್ಚಿಮ ರೈಲ್ವೇ ನಿರ್ಧರಿಸಿ ಈಗ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಮುಂಬಯಿ ಬಾಂದ್ರಾದಿಂದ ಉಡುಪಿ, ಮಂಗಳೂರಿಗೆ ರೈಲು ಸೇವೆಯನ್ನು ಆರಂಭಿಸಬೇಕೆಂದು ರೈಲ್ವೇ ಯಾತ್ರಿ ಸಂಘದವರು ಆಗಾಗ ಮನವಿ ಮಾಡುತ್ತಲೇ ಇದ್ದರು. ಇದಕ್ಕೆ ಪೂರಕವೆಂಬಂತೆ ಉಡುಪಿಗೆ ಬಂದು ಉಡುಪಿಯಿಂದಲೇ ಹಿಂದಿರುಗುವ ಸೇವೆ ಒದಗಿಬಂದಿದೆ. ಪ್ರಯಾಣಿಕ ರಿಂದ ಉತ್ತಮ ಪ್ರತಿಕ್ರಿಯೆ ಬಂದಲ್ಲಿ ಮುಂದಿನ ದಿನಗಳಲ್ಲಿ ಉಡುಪಿಯಿಂದಲೇ ಖಾಯಂ ಆಗಿ ಓಡಾಡುವ ರೈಲುಗಳು ಆರಂಭವಾಗುವ ಸಾಧ್ಯತೆ ಇದೆ. ಎಪ್ರಿಲ್/ ಮೇಯಲ್ಲಿ ಬೇಸಗೆ ವಿಶೇಷ ರೈಲು ಬಾಂದ್ರಾದಿಂದ ಬರಲಿದೆ. ಆದರೆ ಇದು ಮಂಗಳೂರು ಜಂಕ್ಷನ್‌ವರೆಗೆ ಹೋಗಲಿದೆಯೋ? ಉಡುಪಿಗೆ ಬಂದು ವಾಪಸಾಗಲಿದೆಯೋ ಎಂಬುದನ್ನು ಈಗಲೇ ಹೇಳಲಾಗದು.
ಪ್ರಸ್ತುತ ಮಾ. 8 ಮತ್ತು ಮಾ. 10ರ ರಾತ್ರಿ 11.55ಕ್ಕೆ ಬಾಂದ್ರಾದಿಂದ ಹೊರಡುವ ರೈಲು (09009/11) ಮರುದಿನ ಸಂಜೆ 6ಕ್ಕೆ ಉಡುಪಿ ನಿಲ್ದಾಣವನ್ನು ತಲುಪುತ್ತದೆ. ಉಡುಪಿಯಿಂದ ಮಾ. 9 ಮತ್ತು 11ರ ರಾತ್ರಿ 7 ಗಂಟೆಗೆ ಹೊರಡುವ ವಿಶೇಷ ರೈಲು (09012/10) ಮರುದಿನ ಅಪರಾಹ್ನ 3ಕ್ಕೆ / 2.35ಕ್ಕೆ ಬಾಂದ್ರಾ ತಲುಪುತ್ತದೆ.
ಒಂದು ರೈಲಿನಲ್ಲಿ (09011/12) ಎರಡು ಟಯರು ಹವಾನಿಯಂತ್ರಿತ 4 ಕೋಚ್, ಮೂರು ಟಯರುಗಳ ಹವಾನಿಯಂತ್ರಿತ 8 ಕೋಚ್, ಹವಾನಿಯಂತ್ರಿತ ಚೆಯರ್ ಕಾರ್ 5 ಕೋಚ್, ಜನರೇಟರ್ ಕಾರು 2 ಕೋಚುಗಳಿರುತ್ತವೆ. ಇನ್ನೊಂದು ರೈಲಿನಲ್ಲಿ (09009/10) ಎರಡು ಟಯರುಗಳ ಹವಾನಿಯಂತ್ರಿತ 1 ಕೋಚ್, ಮೂರು ಟಯರುಗಳ ಹವಾನಿಯಂತ್ರಿತ 5 ಕೋಚ್, ಸ್ಲಿàಪರ್ 10 ಕೋಚ್, ಜನರಲ್ 3 ಕೋಚ್, ಪಾಂಟ್ರಿ ಕಾರ್ 1, ಜನರೇಟರ್ ಕಾರು 2 ಕೋಚುಗಳಿರುತ್ತವೆ.
ಕುಂದಾಪುರ, ಬೈಂದೂರು, ಭಟ್ಕಳ, ಮುಡೇìಶ್ವರ, ಕುಮಟಾ, ಕಾರವಾರ, ಮಡಗಾಂವ್ ನಿಲ್ದಾಣಗಳಲ್ಲಿ ನಿಲುಗಡೆ ಇದೆ. ಕೊಂಕಣ ರೈಲ್ವೇ ಕೊನೆಯಾಗುವ ರೋಹಾದಿಂದ ಪನ್ವೇಲ್, ವಸಾಯಿರೋಡ್, ಬೊರಿವಿಲಿ ಮೂಲಕ ಬಾಂದ್ರಾವನ್ನು ರೈಲು ತಲುಪಲಿದೆ. ಬಾಂದ್ರಾ ಮುಂಬಯಿನ ಒಂದು ಪ್ರಮುಖ ಪ್ರದೇಶವಾಗಿದೆ. ಇಲ್ಲಿಂದ ಕರಾವಳಿಗೆ ಬರುವ ಪ್ರಯಾಣಿಕರು ಇದ್ದಾರೆ. ಬಾಂದ್ರಾ ನಿಲ್ದಾಣ ಕೊಂಕಣ ರೈಲ್ವೇ ಮಾರ್ಗವಾಗಿ ದಿಲ್ಲಿಗೆ ಸಂಚರಿಸುವ ಮಾರ್ಗದಲ್ಲಿದೆ.