Advertisement

 ಮಂಗಳೂರಿನಲ್ಲಿ ಮೊದಲ ಬಾರಿಗೆ

10:02 AM Dec 28, 2017 | Team Udayavani |

ಮಹಾನಗರ: ಇದೇ ಮೊದಲ ಬಾರಿಗೆ ರಾಷ್ಟ್ರ ಮಟ್ಟದ ರೋವರ್ಸ್‌ – ರೇಂಜರ್ ಸಮಾವೇಶಕ್ಕೆ ಕಡಲನಗರಿ ಸಜ್ಜಾಗಿದ್ದು, ಡಿ. 28ರಿಂದ ಜ. 1ರ ವರೆಗೆ ನಗರದ ಸಂತ ಅಲೋಶಿಯಸ್‌ ಕಾಲೇಜು ಆವರಣದಲ್ಲಿ ನಡೆಯಲಿದೆ. ದೇಶದೆಲ್ಲೆಡೆಯಿಂದ ಸಾವಿರಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

Advertisement

ವಿದ್ಯಾರ್ಥಿ ಜೀವನದಲ್ಲಿ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಯುವ ಜನಾಂಗವನ್ನು ರಾಷ್ಟ್ರ ನಿರ್ಮಾಣದತ್ತ ಕೊಂಡೊಯ್ಯುವುದೇ ಈ ರೋವರ್ಸ್‌- ರೇಂಜರ್ ಘಟಕದ ಧ್ಯೇಯ. ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಸ್ಕೌಟ್ಸ್‌-ಗೈಡ್ಸ್‌ 1907ರಲ್ಲಿ ಲಂಡನ್‌ನಲ್ಲಿ ಆರಂಭಗೊಂಡು ಅದು 1909ರಲ್ಲಿ ಭಾರತಕ್ಕೂ ವಿಸ್ತರಣೆಗೊಂಡಿತ್ತು.

ಆರಂಭದಲ್ಲಿ 11ರಿಂದ 17 ವರ್ಷದ ಹುಡುಗರಿಗಾಗಿ ರೂಪಿಸಲ್ಪಟ್ಟ ಚಟುವಟಿಕೆಗಳಲ್ಲಿ ಹುಡುಗಿಯರು ಕೂಡ ಆಕರ್ಷಿತರಾಗಿ ಗೈಡ್‌ ವಿಭಾಗ 1909 ರಲ್ಲಿ ಪ್ರಾರಂಭಗೊಂಡಿತು. ಸ್ಕೌಟ್ಸ್‌ – ಗೈಡ್ಸ್‌ ಚಟುವಟಿಕೆಗಳಿಂದ ಆಕರ್ಷಿತರಾಗಿ ಹಿರಿಯ ಯುವಕರೂ ಈ ಚಟುವಟಿಕೆಯತ್ತ ಬರತೊಡಗಿದಾಗ ವಯೋಮಾನಕ್ಕನುಗುಣವಾಗಿ ವಿವಿಧ ವಿಭಾಗಗಳನ್ನು ಮಾಡಲಾಯಿತು.

6ರಿಂದ 10 ವರ್ಷದ ಹುಡುಗರ ಕಬ್‌ ವಿಭಾಗ; ಹುಡುಗಿಯರ ಬುಲ್‌ಬುಲ್‌ ವಿಭಾಗ, 11ರಿಂದ 17 ವರ್ಷದ ಹುಡುಗರ ಸ್ಕೌಟ್ಸ್‌ ವಿಭಾಗ, ಹುಡುಗಿಯರ ಗೈಡ್‌ ವಿಭಾಗ, 17ರಿಂದ 24ರ ವಯೋಮಾನದ ಹುಡುಗರ ರೋವರ್ಸ್‌ವಿಭಾಗ, ಹುಡುಗಿಯರ ರೇಂಜರ್ ವಿಭಾಗಗಳಲ್ಲದೆ ಈಗ 4ರಿಂದ 6 ವರ್ಷದ ಪುಟಾಣಿಗಳಿಗಾಗಿ ಬನ್ನಿ ಎಂಬ ವಿಭಾಗವೂ ಇದೆ. ಈ ಪೈಕಿ 17ರಿಂದ 24 ವರ್ಷದೊಳಗಿನವರು ಭಾಗವಹಿಸುವ ರೋವರ್ಸ್‌ ಮತ್ತು ರೇಂಜರ್ ವಿಭಾಗದವರ ರಾಷ್ಟ್ರ ಮಟ್ಟದ ಸಮ್ಮೇಳನ ಪ್ರಥಮ ಬಾರಿ ಮಂಗಳೂರು ನಗರದಲ್ಲಿ ಆಗಲಿದೆ ಎನ್ನುವುದು ವಿಶೇಷ.

ಈ ರಾಷ್ಟ್ರಮಟ್ಟದ ರೋವರ್-ರೇಂಜರ್ ಸಮಾವೇಶದಲ್ಲಿ ಪ್ರತಿನಿಧಿಗಳನ್ನು ಮೂರು ತಂಡಗಳಾಗಿ ವಿಂಗಡಿಸಿ ಮೂರು
ದಿನಗಳ ಕಾಲ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ದೈಹಿಕ ಶ್ರಮದ ಸಾಹಸಮಯ ಆಟಗಳು, ಬೌದ್ಧಿಕ ಶಕ್ತಿಗೆ ಪಂಥಾಹ್ವಾನ ನೀಡುವ ರಸಪ್ರಶ್ನೆ ವಿಚಾರ ಸಂಕಿರಣ ಗಳು, ಕರಾವಳಿಯಲ್ಲಿ ಚಾರಣ, ಕರಾವಳಿಯ ಪ್ರಕೃತಿ ಅಧ್ಯಯನ ಮುಂತಾದ ಚಟುವಟಿಕೆಗಳಲ್ಲಿ ಅವರು ಪಾಲ್ಗೊಳ್ಳುತ್ತಾರೆ.

Advertisement

ವಿವಿಧ ಚಟುವಟಿಕೆಗಳು
ಮೊದಲನೇ ದಿನ ನೋಂದಣಿ, ಉದ್ಘಾಟನ ಸಮಾರಂಭ ನಡೆದರೆ, ಎರಡನೇ ದಿನ ಬೆಳಗ್ಗೆ ಮೊದಲ ತಂಡ ಕೋಸ್ಟಲ್‌ ಟ್ರೆಕ್ಕಿಂಗ್‌ ಮಾಡಲಿದೆ. ಇದರಲ್ಲಿ ಸುಲ್ತಾನ್‌ ಬತ್ತೇರಿಗೆ ತೆರಳಿ ಹೋವರ್‌ ಕ್ರಾಫ್ಟ್‌ ಮೂಲಕ ಸಮುದ್ರದಲ್ಲಿ ತಿರುಗಾಟ ಮಾಡಲಿದೆ. ಇನ್ನೊಂದು ತಂಡ ಪಿಲಿಕುಳದಲ್ಲಿ ನ್ಯಾಚುರಲ್‌ ಸ್ಟಡಿ ಮಾಡಲಿದೆ. ಇಲ್ಲಿ ಆಯುರ್ವೇದ ವನ ಮೊದಲಾದೆಡೆ ಸುತ್ತಾಡಲಿದೆ. ಮೂರನೇ ತಂಡ ಕ್ಯಾಂಪಸ್‌ ಗಳಲ್ಲಿ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲಿದೆ.

ಹೀಗೆ ಮೂರು ತಂಡಗಳು ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮೂರು ದಿನ ನೋಡಿಕೊಳ್ಳಲಾಗುತ್ತದೆ. ಪ್ರತಿ ದಿನ ಸಂಜೆ ಹೊರ ರಾಜ್ಯಗಳಿಂದ ಬಂದಿರುವ ತಂಡಗಳು ತಮ್ಮ ರಾಜ್ಯದ ಜಾನಪದ ಕಲೆಗಳನ್ನು ಪ್ರದರ್ಶಿಸಲಿವೆ. ಜಿಲ್ಲಾ ಘಟಕದ ಮುಖ್ಯ ಆಯುಕ್ತ ಎನ್‌.ಜಿ. ಮೋಹನ್‌, ಎಂ.ಎ. ಚೇಳಯ್ಯ, ಜಿಲ್ಲಾ ಕೋಶಾಧಿಕಾರಿ ವಾಸುದೇವ ಬೋಳೂರು, ಅನಲೇಂದ್ರ ಶರ್ಮಾ, ಪ್ರಭಾಕರ ಭಟ್‌ ಉಪಸ್ಥಿತರಿದ್ದರು. 

ಇಂದು ಸಮಾವೇಶಕ್ಕೆ ಚಾಲನೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಜಿಲ್ಲಾ ಕಾರ್ಯದರ್ಶಿ ಯು. ಗೋಪಾಲಕೃಷ್ಣ ಭಟ್‌ ಅವರು ಈ ಸಮಾವೇಶವನ್ನು ಡಿ. 28ರಂದು ಸಂಜೆ 4.30ಕ್ಕೆ ಸಚಿವ ಬಿ. ರಮಾನಾಥ ರೈ ಅವರು ಉದ್ಘಾಟಿಸುವರು. ಈ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಸ್ಥಳೀಯ ಜಾನಪದ ಕಲೆಯ ಪ್ರದರ್ಶನದ ಅಂಗವಾಗಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಡಿ. 31ರಂದು ಸಂಜೆ 4.30ಕ್ಕೆ ಸಚಿವ ಯು.ಟಿ. ಖಾದರ್‌ ಸಮಾರೋಪದ ಅಧ್ಯಕ್ಷತೆ ವಹಿಸುವರು. ಸಮ್ಮೇಳನದಲ್ಲಿ ಏರ್‌ ರೋವರಿಂಗ್‌, ಏರ್‌ ರೇಂಜರ್‌, ಓಪನ್‌ ಗೈಡ್‌ ಯುನಿಟ್‌ ಹಾಗೂ ಅಲೋಶಿಯಸ್‌ ಐಟಿಐಯ ರೋವರ್‌ ಯುನಿಟ್‌ -ಈ ಹೊಸ ಘಟಕಗಳ ಉದ್ಘಾಟನೆ ನಡೆಯಲಿದೆ. ಜ. 1ರಂದು 9 ಗಂಟೆಗೆ ಪಥಸಂಚಲನ ನಡೆಯಲಿದೆ ಎಂದರು. 

ಸಮಾವೇಶಕ್ಕಾಗಿ ಸಕಲ ಸಿದ್ಧತೆ
ವಿ.ಪಿ. ದೀನ ದಯಾಳ ನಾಯ್ಡು ಅವರು ಬಹುದೀರ್ಘ‌ ಕಾಲ ರಾಜ್ಯ ಸ್ಕೌಟ್ಸ್‌-ಗೈಡ್ಸ್‌ ಸಂಸ್ಥೆಯೊಂದಿಗಿದ್ದು, ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದವರು. ರಾಜ್ಯ, ರಾಷ್ಟ್ರ ಗಳ ಸಂಸ್ಥೆಯಲ್ಲಿ ಸ್ಕೌಟ್ಸ್‌ ಪ್ರಧಾನ ಆಯುಕ್ತರಾಗಿ ಸೇವೆ ಸಲ್ಲಿಸಿದವರು. ಇವರ ಜನ್ಮ ಶತಾಬ್ದ ವರ್ಷವನ್ನು ರಾಷ್ಟ್ರಮಟ್ಟದ ಈ ಕಾರ್ಯಕ್ರಮದಲ್ಲಿ ಆಚರಿಸಲಾಗುವುದು. ಸಮಾವೇಶಕ್ಕೆ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ಸರ್ವಸಿದ್ಧತೆ ಮಾಡಲಾಗಿದೆ. ಇಲ್ಲಿಯೇ ವಸತಿ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಲಾಗಿದೆ. ವಿವಿಧ ರಾಜ್ಯಗಳ ಹಲವು ಜನಪ್ರತಿನಿಧಿಗಳು ಈಗಾಗಲೇ ಮಂಗಳೂರಿಗೆ ತಲುಪಿದ್ದಾರೆ.
–  ಯು. ಗೋಪಾಲಕೃಷ್ಣ ಭಟ್‌,
   ಜಿಲ್ಲಾ ಕಾರ್ಯದರ್ಶಿ,
   ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ನ 

Advertisement

Udayavani is now on Telegram. Click here to join our channel and stay updated with the latest news.

Next