Advertisement

ಭದ್ರತೆಗೂ ಸೈ, ರೋಗಿಗಳ ಜೀವ ರಕ್ಷಣೆಗೂ ಸೈ

01:59 AM May 06, 2020 | Sriram |

ಬೆಂಗಳೂರು: ಗಡಿ ಭದ್ರತೆ ಮಾತ್ರವಲ್ಲ; ಸಾವು-ಬದುಕಿನ ನಡುವೆ ಹೋರಾಡುವ ನೂರಾರು ರೋಗಿಗಳ ರಕ್ಷಣೆಗೂ ಧಾವಿಸುತ್ತಿರುವ ಯೋಧರ ಮಾನವೀಯತೆ ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ.

Advertisement

ಸುದೀರ್ಘ‌ ಲಾಕ್‌ಡೌನ್‌ನಿಂದ ರಕ್ತದ ತೀವ್ರ ಕೊರತೆ ಉಂಟಾಗಿದೆ. ಇದು ನಿಯಮಿತವಾಗಿ ಕಿಮೋ ಥೆರಪಿಗೆ ಒಳಗಾಗುವ ಕ್ಯಾನ್ಸರ್‌ ರೋಗಿಗಳಿಗೆ ತುಸು ತೀವ್ರವಾಗಿಯೇ ತಟ್ಟಿದೆ. ಇಂಥ ಸಂದರ್ಭದಲ್ಲಿ ಬೆಂಗಳೂರು ನಗರದ ಕಿದ್ವಾಯಿ ಸ್ಮಾರಕ ಕ್ಯಾನ್ಸರ್‌ ಆಸ್ಪತ್ರೆಯ ವೈದ್ಯರು ಹೆಬ್ಟಾಳ ಮತ್ತು ಹಲಸೂರು ಕೆರೆ ಬಳಿ ಇರುವ ಸೈನಿಕರ ಕ್ಯಾಂಪ್‌ಗಳು ಮೊರೆಹೊಕ್ಕಿದ್ದಾರೆ. ನೂರಾರು ಸೈನಿಕರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದ್ದು, ರೋಗಿಗಳ ಚಿಕಿತ್ಸೆ ಸುಸೂತ್ರವಾಗಿದೆ.

ಕಿದ್ವಾಯಿ ಆಸ್ಪತ್ರೆಗೆ ಸಾಮಾನ್ಯ ದಿನಗಳಲ್ಲಿ ನಿತ್ಯ 150-200 ರೋಗಿಗಳು ಭೇಟಿ ನೀಡುತ್ತಾರೆ. ಇವರಲ್ಲಿ 45ರಿಂದ 50 ರೋಗಿಗಳು ದಾಖಲಾಗುತ್ತಾರೆ. ಇದರಲ್ಲಿ ಶೇ. 55ರಷ್ಟು ಎಳೆಯ ಮಕ್ಕಳು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತುರ್ತು ಇದ್ದವರು ಮಾತ್ರ ಬರುವಂತೆ ವೈದ್ಯರು ಸೂಚಿಸಿದ್ದಾರೆ. ಹೀಗೆ ತುರ್ತು ಭೇಟಿ ನೀಡುವವರ ಸಂಖ್ಯೆ ತುಂಬಾ ಕಡಿಮೆ ಆಗಿದ್ದು, ಅಂತಹವರ ಚಿಕಿತ್ಸೆಗೂ ರಕ್ತದ ಕೊರತೆ ಉಂಟಾಗಿತ್ತು. ಇದರಿಂದ ಕಿಮೋಥೆರಪಿ ಆರಂಭಿಸಲು ಮತ್ತು ಮುಂದುವರಿಸಲು ಕಷ್ಟವಾಗಿತ್ತು.

ಕಿದ್ವಾಯಿ ಆಸ್ಪತ್ರೆಯು ರಕ್ಷಣಾ ಇಲಾಖೆಗೆ ರಕ್ತ ದಾನಕ್ಕಾಗಿ ಬೇಡಿಕೆ ಮಂಡಿಸಿತ್ತು. ಇದಕ್ಕೆ ಸ್ಪಂದಿಸಿ ಸುಮಾರು 200 ಯೋಧರು ರಕ್ತದಾನ ಮಾಡಿದ್ದಾರೆ. ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌ (ಎಂಇಜಿ) ಮತ್ತು ಪ್ಯಾರಾ ರೆಜಿಮೆಂಟಲ್‌ ಸೆಂಟರ್‌ನ ಯೋಧರು ಇದರಲ್ಲಿದ್ದಾರೆ. ಅಗತ್ಯ ಬಿದ್ದರೆ ಮತ್ತಷ್ಟು ಯೋಧರು ಸಿದ್ಧರಿದ್ದಾರೆ ಎಂದು ರಕ್ಷಣಾ ಇಲಾಖೆ ಹೇಳಿದೆ.

ಥೆರಪಿಗೆ
ಲಕ್ಷ ಪ್ಲೇಟ್‌ಲೆಟ್‌ ಅಗತ್ಯ
ಕ್ಯಾನ್ಸರ್‌ ರೋಗಿಗೆ ಕಿಮೋಥೆರಪಿ ಮಾಡ ಬೇಕಾದರೆ 1 ಲಕ್ಷದವರೆಗೂ ಪ್ಲೇಟ್‌ಲೆಟ್‌ ಇರಬೇಕಾಗುತ್ತದೆ. ಸ್ವಲ್ಪ ವ್ಯತ್ಯಾಸವಾದರೂ ಥೆರಪಿ ಕಷ್ಟವಾಗುತ್ತದೆ. ಹೀಗಾಗಿ ರಕ್ತದ ಅಗತ್ಯ ಹೆಚ್ಚಿರುತ್ತದೆ. ಸಾಮಾನ್ಯವಾಗಿ ತಿಂಗಳಿಗೆ ನಮ್ಮ ಆಸ್ಪತ್ರೆಗೆ ಸುಮಾರು ಒಂದು ಸಾವಿರ ಯೂನಿಟ್‌ ರಕ್ತ ಪೂರೈಕೆ ಆಗುತ್ತಿತ್ತು. ಈಗ 280 ಯೂನಿಟ್‌ ಕೂಡ ಆಗುತ್ತಿಲ್ಲ. ಯೋಧರು ಸಾಮಾನ್ಯವಾಗಿ ಆರೋಗ್ಯವಂತರಾಗಿ ಇರುವುದರಿಂದ ಅವರಲ್ಲಿ ಬೇಡಿಕೆ ಮಂಡಿಸಿದೆವು ಎಂದು ಕಿದ್ವಾಯಿ ಆಸ್ಪತ್ರೆಯ ರಕ್ತನಿಧಿ ಅಧಿಕಾರಿ ಡಾ| ಸ್ಪೃಹಾ ಅವರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

Advertisement

- ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next