Advertisement

ನ್ಯಾಯ ವ್ಯವಸ್ಥೆಯ ತಕ್ಕಡಿಯಲ್ಲಿ

04:36 PM Apr 12, 2018 | Sharanya Alva |

ನೂರು ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ, ಆದರೆ ಓರ್ವ ನಿರಪರಾಧಿಗೆ ಮಾತ್ರ ಶಿಕ್ಷೆಯಾಗಬಾರದು ಎಂಬುದು ಭಾರತದ ಕಾನೂನು ವ್ಯವಸ್ಥೆಯ ಸಬ್‌ಟೈಟಲ್‌. ಹಾಗೇನೆ ನ್ಯಾಯ – ಅನ್ಯಾಯಗಳನ್ನು ಅಳೆದು ತೂಗುವಾಗ ಯಾವುದೇ ರೀತಿಯ ಪಕ್ಷಪಾತವಾಗಬಾರದು, ಬಡವ ಶ್ರೀಮಂತನೆಂಬ ಪರಿಗಣನೆ ನಡೆಯಬಾರದು ಎಂಬ ಕಾರಣ  ಕ್ಕಾಗಿಯೇ ನಮ್ಮಲ್ಲಿ ನ್ಯಾಯ ದೇವತೆಯ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿರುವ ಲಾಂಛನವಿರುವುದು. ಕಾನೂನಿನ ಈ ರೀತಿಯ ಪರಿಭಾಷೆ ನಿಜಕ್ಕೂ ಶ್ರೇಷ್ಠವೇ. ಆದರೆ ದೇಶದ ಇಂದಿನ ಕಾನೂನು ನಡೆಗಳನ್ನು ಮತ್ತು ನ್ಯಾಯಾಲಯಗಳ ಮೂಲಕ ದಕ್ಕುವ ನ್ಯಾಯವನ್ನು ಗಮನಿಸಿದರೆ ನಿರಪರಾಧಿಗೆ ಶಿಕ್ಷೆಯಾಗುವುದು ಬಿಡಿ ಸ್ವತಃ ಅಪರಾಧಿಗಳನ್ನೇ ಇಲ್ಲಿ ಅಪರಾಧಿಗಳೆಂದು ಗುರುತಿಸಿ ಶಿಕ್ಷಿಸುವಲ್ಲಿ ಸೋತಿದ್ದೇವೆಯೇನೋ ಅನ್ನಿಸುತ್ತಿದೆ.

Advertisement

ನಾವು ಕೊಲೆ ಪ್ರಕರಣಗಳು ನಡೆದರೆ, ಅಪರಾಧಗಳು ನಡೆದರೆ ಆ ಕೂಡಲೇ ರಸ್ತೆ ತಡೆ ನಡೆಸಿ ಅಪರಾಧಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಡ ಹಾಕುತ್ತೇವೆ. ಒಂದಷ್ಟು ವಿಳಂಬವಾದರೂ ಪೊಲೀಸ್‌ ವ್ಯವಸ್ಥೆಯ ಮೇಲೆಯೇ ಗೂಬೆ ಕೂರಿಸುತ್ತೇವೆ. ಆದರೆ ಪೊಲೀಸರು ಕಷ್ಟಪಟ್ಟು ಹಿಡಿದು ಜೈಲು ಸೇರಿಸುವ ಅದೆಷ್ಟು ಆರೋಪಿಗಳಿಗೆ ಶಿಕ್ಷೆಯಾಗುತ್ತಿದೆ ಎಂಬ ಬಗ್ಗೆ ನಾವುಗಳೆಲ್ಲಾ ಯೋಚಿಸುವುದೇ ಇಲ್ಲ. ನಿಜ ಹೇಳುವುದಾದರೆ ಪೋಲೀಸರು ಹಿಡಿದು ಕೊಡುವ ಬಹುತೇಕ ಆರೋಪಿಗಳು ಒಂದೆರಡು ದಿನ ಜೈಲಿನೊಳಗೆ (ಪ್ರಭಾವಿಗಳಾದರೆ ಒಂದೆರಡು ಕ್ಷಣ) ಇದ್ದು ಸಲೀಸಾಗಿ ಹೊರಗೆ ಬರುತ್ತಿರುತ್ತಾರೆ. ಒಂದು ವೇಳೆ ಕೆಳಗಿನ ನ್ಯಾಯಾಲಯ ಅಪರಾಧ ಸಾಬೀತಾಯಿತು ಎಂದು ತೀರ್ಪು
ನೀಡಿದರೂ ಮೇಲಿನ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ಕ್ಲೀನ್‌ ಚಿಟ್‌ ಪಡೆಯುವುದು ಮಾಮೂಲು ವಿಚಾರ. ಆದ್ದರಿಂದಲೇ ಇಂದು ಪೊಲೀಸರು ಹಿಡಿಯುವ ಬಹುತೇಕ ಆರೋಪಿಗಳು ಅಪರಾಧ ಲೋಕಕ್ಕೆ ತೀರಾ ಪರಿಚಿತರು. 

ಅಂದರೆ ಒಮ್ಮೆ ಬಂದವರೇ ಮತ್ತೆ ಮತ್ತೆ ಅಪರಾಧಗಳಲ್ಲಿ ಭಾಗಿಯಾಗುತ್ತಾ ವಿಚಾರಣೆಗೆ ಬರುತ್ತಾರೆ ಮತ್ತು ನಿರಪರಾಧಿ ಎಂದು ಘೋಷಿಸಿಕೊಂಡು ಹೊರಬರುವವರು ಆಗಿರುತ್ತಾರೆ! ಕಳ್ಳತನ, ದರೋಡೆ ಮಾಡಿ ಸಿಕ್ಕಿ ಬಿದ್ದವನ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿದಾಗ ನಾಲ್ಕು ಪ್ರಕರಣದಲ್ಲಿ ಬೇಕಿದ್ದವ, ಇಲ್ಲಿ ಎರಡು ಪ್ರಕರಣದಲ್ಲಿ ಬೇಕಿದ್ದವ, ಆ ಊರಲ್ಲಿ ಪೊಲೀಸರಿಗೆ ಬೇಕಾಗಿದ್ದವ ಈ ಊರಲ್ಲಿ ಇಂತಿಷ್ಟು ಕೇಸ್‌ನಲ್ಲಿ
ಬೇಕಾಗಿದ್ದವ ಎಂಬ ದಾಖಲೆಗಳೇ ತುಂಬಿರುತ್ತವೆ. ಅಂದರೆ ಅಷ್ಟೊಂದು ಪ್ರಕರಣಗಳಲ್ಲೂ ಆತನಿಗೆ ಶಿಕ್ಷೆಯಾಗಿರಲ್ಲ. ಬರೀ
ಆರೋಪಿಯಷ್ಟೇ. ಕೋರ್ಟ್‌ ಕರೆದಾಗಲೆಲ್ಲಾ ಹೋಗಿ ಬಂದು ಮಾಡಿದರೆ ಅಲ್ಲಿಗೆ ಮುಗಿಯಿತು. ಒಂದು ವೇಳೆ ಅಪರಾಧಿಗಳನ್ನು ಮೊದಲ ಪ್ರಕರಣದಲ್ಲೇ ಹಣ್ಣು ಗಾಯಿ ನೀರುಗಾಯಿ ಮಾಡುವ ಹಾಗೆ ನ್ಯಾಯಾಲಯಗಳು ಶಿಕ್ಷೆ ವಿಧಿಸಿದ್ದೇ ಆಗಿದ್ದರೆ ಬಹುತೇಕ ಅಪರಾಧ ಕೃತ್ಯಗಳು ನಡೆಯುತ್ತಲೇ ಇರಲಿಲ್ಲ. ಹಾಗಂತ ಇಲ್ಲಿ ನಮ್ಮ ನ್ಯಾಯಾಲಗಳನ್ನು ದೂಷಿಸುವುದು ತರವಲ್ಲ. ಏಕೆಂದರೆ ನ್ಯಾಯಾಲಯಗಳು ಕಾನೂನಿನ ಚೌಕಟ್ಟಿನಲ್ಲೇ ವ್ಯವಹರಿಸಬೇಕಿದೆ.

ದೃಢವಾದ ಸಾಕ್ಷಿಯಿಲ್ಲದೇ ಹೋದರೆ ಆರೋಪಿಗೆ ಶಿಕ್ಷೆ ನೀಡುವುದಾದರೂ ಹೇಗೆ? ನ್ಯಾಯಾಲಯಗಳು ಸೋತಿರುವುದು ಇಲ್ಲೇ. ನಡು ರಸ್ತೆಯಲ್ಲಿ ಸಾರ್ವಜನಿಕರ ಮುಂದೆಯೇ ಕೊಲೆಯೊಂದು ನಡೆದರೂ ಅಪರಾಧಿಗಳ ವಿರುದ್ಧ ಸಾಕ್ಷಿ ಹೇಳಲು ನಮ್ಮಲ್ಲಿ ಜನರು ಮುಂದೆ ಬರುವುದಿಲ್ಲ. ಇಲ್ಲದ ಉಸಾಬರಿ ನಮಗ್ಯಾಕೆ ಎಂಬುದು ಒಂದಾದರೆ, ಸಾಕ್ಷಿ ಹೇಳಲು ಒಪ್ಪಿಕೊಂಡರೆ ವರ್ಷಾನುಗಟ್ಟಲೆ ನ್ಯಾಯಲಯಗಳು ಕರೆದಾಗಲೆಲ್ಲಾ ಹಾಜರಾಗುತ್ತಿರಬೇಕು. 

ಎಷ್ಟಾದರೂ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯದಾನವೆಂದರೆ ಗಜಪ್ರಸವವೇ ಅಲ್ಲವೇ? ಕೋರ್ಟ್‌ ಮೆಟ್ಟಿಲೇರಿದ ಪ್ರಕರಣ ಅಂತ್ಯಗೊಳ್ಳಬೇಕಾದರೆ ಕನಿಷ್ಠ ಹತ್ತು ವರ್ಷವಾದರೂ ಬೇಕಾಗುತ್ತದೆ. ಹೀಗಿರುವಾಗ ತಮ್ಮ ಕೆಲಸಗಳನ್ನು ಬದಿಗಿಟ್ಟು ಅದ್ಯಾ ವುದೋ ಕೇಸ್‌ನ ಸಾಕ್ಷಿ ಹೇಳಲು ಅಷ್ಟೊಂದು ವರ್ಷ ಕೋರ್ಟ್‌ಗೆ ಅಲೆಯಲು ಯಾರು ತಯಾರಿದ್ದಾರೆ? ಇನ್ನು ಅಪರಾಧವನ್ನು ಸಾಬೀತು ಪಡಿಸಬೇಕಾದ ವಕೀಲರ ಪಾತ್ರವೂ ಇಲ್ಲಿ ಉಲ್ಲೇಖನೀಯವೇ. ನಮ್ಮಲ್ಲಿ ದುಡ್ಡು ಚೆಲ್ಲಲು ರೆಡಿ ಎಂದಾದರೆ ಅದ್ಯಾವ ಅಪರಾಧಿಗೂ ವಕೀಲರುಗಳು ದೊರೆಯುತ್ತಾರೆ. ನಿರ್ಭಯಳಂತಹ ಬರ್ಬರ ಅತ್ಯಾಚಾರವನ್ನು ದೇಶಕ್ಕೆ ದೇಶವೇ ಖಂಡಿಸುತ್ತಿದ್ದಾಗ, ಅಪರಾಧಿಗಳನ್ನು ಗಲ್ಲಿಗೇರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾಗ ವಕೀಲರೋರ್ವರು ಅಪರಾಧಿಗಳನ್ನು ಹೇಗೆ ಪಾರು ಮಾಡಬಹುದು, ಶಿಕ್ಷೆಯ ಪ್ರಮಾಣವನ್ನು ಹೇಗೆ ಕಡಿಮೆ ಮಾಡಬಹುದು ಎಂಬುದರ ಬಗ್ಗೆ ಯೋಚನೆ ಮಾಡಿರುವ ಉದಾಹರಣೆಯಿದೆ. ಇಲ್ಲಿ ಬಾಂಬು ಸ್ಫೋಟಿಸಿ ಜನರನ್ನು ಕೊಲ್ಲುವ ಭಯೋತ್ಪದಕರುಗಳಿಗೂ ವಕೀಲರುಗಳು ಸಿಗಬಲ್ಲರು, ಸರಣಿ ಅತ್ಯಾಚಾರಗೈದ ಆರೋಪಿಗಳಿಗೂ ವಕೀಲರುಗಳು ಸಿಗಬಲ್ಲರು. ಮಾಡಿದ್ದು ಅಕ್ಷ್ಯಮ್ಯ ಅಪರಾಧವೆಂದು ತಿಳಿದ ಬಳಿಕ ಅಂತಹ ಅಪರಾಧಿಗಳ ಪರ ಅದ್ಯಾವ ವಕೀಲರುಗಳೂವಾದ ಮಂಡಿಲಿಸಕ್ಕೆ ಮುಂದೆ ಬಾರದೇ ಹೋಗಿರುತ್ತಿದ್ದರೆ ಖಂಡಿತವಾಗಿಯೂ ಒಂದಷ್ಟು ಆರೋಪಿಗಳು ಅಪರಾಧಿಗಳಾಗಿ ಜೈಲು ಸೇರುತ್ತಿದ್ದರು.

Advertisement

ಇನ್ನು ನಮ್ಮ ನ್ಯಾಯಾಂಗ ವ್ಯವಸ್ಥೆಯು ನೀಡುವ ಕೆಲವೊಂದು ಶಿಕ್ಷೆಯನ್ನು ಗಮನಿಸಿದರೆ ಅದು ಕೂಡ ಅದೆಷ್ಟೋ ಬಾರಿ ಸೋಜಿಗದ ಸಂಗತಿಯಾಗಿರುತ್ತದೆ. ಏಕೆ ಹೀಗೆ ಎಂಬುದು ಅರ್ಥವೇ ಆಗದಷ್ಟು ವಿಸ್ಮಯವಾಗಿರುತ್ತದೆ. ತೀರಾ ಇತ್ತೀಚೆಗೆ ಐಸಿಸ್‌ ಉಗ್ರಗಾಮಿ ಸಂಘಟನೆಯ ಕೇರಳ ಮೂಲದ ಕಾರ್ಯಕರ್ತೆ ಯೋರ್ವಳಿಗೆ ಎನ್‌ಐಎ ವಿಶೇಷ ನ್ಯಾಯಾಲಯವು ಬರೀ 7 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ರೂಪಾಯಿಗಳ ಜುಜುಬಿ ಮೊತ್ತದ ದಂಡ ವಿಧಿಸಿದೆ. ದೇಶವನ್ನೇ ಉಡಾಯಿಸಲು ಹೊರಟ ಈ ಉಗ್ರಗಾಮಿ ಉಗ್ರಳಿಗೆ ಇಷ್ಟೇನಾ ಶಿಕ್ಷೆ ಎಂದು ಎಲ್ಲರೂ ಹುಬ್ಬೇರಿಸುವಂತಾಯಿತು.

ವಿಚಿತ್ರವೆಂದರೆ ಅದೇ ದಿನ ಸಿಬಿಐನ ವಿಶೇಷ ನ್ಯಾಯಲಯವೊಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ಗೆ ಓಬಿರಾಯನ ಕಾಲದ ಮೇವು ಹಗರಣಕ್ಕೆ ಸಂಬಂಧ ಪಟ್ಟಂತೆ 14 ವರ್ಷಗಳ ಜೈಲು ಶಿಕ್ಷೆ ಹಾಗೂ 60 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿತ್ತು. ಕೋಟಿ ಕೋಟಿ ಗುಳುಂ ಮಾಡಿದ ಅಪರಾಧಿಗೆ 60 ಲಕ್ಷ ಜುಜುಬಿಯೇ ಇರಬಹುದು. ಆದರೂ ಐಸಿಸ್‌ ಕಾರ್ಯಕರ್ತೆಯ 25 ಸಾವಿರಕ್ಕಿಂತ ಇದು ಎಷ್ಟೋ ಪಾಲು ದೊಡ್ಡದಲ್ಲವೇ? ಮಾತ್ರವಲ್ಲದೆ ಇಲ್ಲಿ ಜೈಲು ಶಿಕ್ಷೆಯ ಪ್ರಮಾಣ ಕೂಡ ಸರಿಯಾಗಿ ದುಪ್ಪಟ್ಟು. ಹಾಗಾದರೆ ಭಯೋತ್ಪದಾನೆಗಿಂತ ದೇಶದೊಳಗಿನ ಹಗರಣವೇ ದೊಡ್ಡದಾಯಿತೇ? ರಸ್ತೆ ಬದಿಯಲ್ಲಿ ಮಲಗಿದ್ದ ಅಮಾಯಕರ ಮೇಲೆ ನಶೆಯಲ್ಲಿ ಐಷರಾಮಿ ವಾಹನ ಓಡಿಸಿ ಅವರ ಸಾವಿಗೆ ಕಾರಣನಾಗಿರುವ ಸಲ್ಮಾನ್‌ ಖಾನ್‌ಗೆ ಅದರಿಂದ ಅದೆಂದೋ ಖುಲಾಸೆ ನೀಡಿಯಾಗಿದೆ. ಯಾಕೆಂದರೆ ಸಾಕ್ಷಿಗಳ
ಕೊರತೆಯಂತೆ. ಆದರೆ ತಮಾಷೆಯೆಂದರೆ ಅದೇ ಸಲ್ಮಾನ್‌ಖಾನ್‌ ಗೆ ಅಡವಿಯಲ್ಲಿ ಬೇಟೆಯಾಡಿ ಕೃಷ್ಣಮೃಗವನ್ನು ಕೊಂದ ಅಪರಾಧಕ್ಕೆ ಇಪ್ಪತ್ತು ವರುಷಗಳ ಬಳಿಕ ಐದು ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಿದೆ. ನಂತರ ಆತನಿಗೆ ಜಾಮೀನೂ ದೊರಕಿದೆ.

ಸಾರ್ವಜನಿಕ ಸ್ಥಳದಲ್ಲಿ ನಡೆದ ಮಾನವರ ಹತ್ಯೆಗೆ ಸಾಕ್ಷಿಗಳ ಕೊರತೆ. ಆದರೆ ಅದೆಲ್ಲೋ ದೂರದಲ್ಲಿ ನಡೆದ ಪ್ರಾಣಿ ಬೇಟೆಗೆ ಕಠಿಣ ಶಿಕ್ಷೆ. ಸಲ್ಮಾನ್‌ಗೆ ಸಾಥ್‌ ನೀಡಿದ್ದ ಬೇಟೆಯ ಜೊತೆಗಾರರೆಲ್ಲರೂ ಖುಲಾಸೆ. ಇದು ಕೆಲವೊಂದು ಉದಾಹರಣೆಗಳಷ್ಟೇ. ವ್ಯವಸ್ಥೆಯ ಲೋಪಗಳನ್ನು ಎತ್ತಿ ಹಿಡಿಯಲು ಇಂತಾಹ ನೂರಾರು ಪ್ರಕರಣಗಳನ್ನು ಗುರುತಿಸಬಹುದು. ಈ ಪರಿಯ ನ್ಯಾಯದಾನ ವ್ಯವಸ್ಥೆ ಬದಲಾಗದೆ ದೇಶದ ಬದಲಾವಣೆಯನ್ನು ಅದೇಗೆ ನಿರೀಕ್ಷಿಸುವುದು? ಹೌದು ನ್ಯಾಯಾಲಯಕ್ಕೆ, ಅದು ನೀಡುವ ತೀರ್ಪಿಗೆ ಗೌರವ ಕೊಡಲೇಬೇಕು. ಕೊಟ್ಟ ತೀರ್ಪು
ಅಪಥ್ಯವಾಯಿತು ಎಂದಾದರೆ ಮುಂದಿನ ಹಂತದ ಕೋರ್ಟ್‌ನಲ್ಲಿ ಪ್ರಶ್ನಿಸಬಹುದು. ಆದರೆ ಅದ್ಯಾವ ಕಾರಣಕ್ಕೂ ಕೋರ್ಟ್‌ ತೀರ್ಪನ್ನು ಅಲ್ಲಗಳೆಯುವ ಹಾಗಿಲ್ಲ. ತಮಾಷೆ ಮಾಡುವ ಹಾಗಿಲ್ಲ. 

ಸಾರ್ವಜನಿಕವಾಗಿ ವಿರೋಧಿಸುವ ಹಾಗಿಲ್ಲ. ಹಾಗೇನಾದರೂ ಆದರೆ ಅದು ನ್ಯಾಯಾಂಗ ನಿಂದನೆಯ ಪರಿಧಿಗೆ ಸಿಲುಕುತ್ತದೆ. ಇದು ಕೂಡ ಒಳ್ಳೆಯದೇ. ಆದರೆ ಅದೇ ಸುಪ್ರೀಂಕೋರ್ಟ್‌ ನೀಡಿದ ತೀರ್ಪು ಸರಿಯಾಗಿಲ್ಲ, ನಮ್ಮ ಹಿತಾಸಕ್ತಿಗೆ ವಿರೋಧವಾಗಿದೆ ಎಂದು ಇತ್ತೀಚೆಗೆ ಸಮುದಾಯವೊಂದು ದೇಶಾದ್ಯಂತ ಬಂದ್‌ಗೆ ಕರೆ ನೀಡಿತ್ತು. ಸಾರ್ವಜನಿಕ ಆಸ್ತಿಪಾಸ್ತಿಗಳ ನಷ್ಟಕ್ಕೂ ಕಾರಣವಾಯಿತು. ಆದರೆ ಇಲ್ಲಿ ಮಾತ್ರ ಅದ್ಯಾವ ನ್ಯಾಯಾಂಗ ನಿಂದನೆಯ ವಿಚಾರವೂ ಪ್ರಸ್ತಾಪವಾಗಲೇ ಇಲ್ಲ. ಬದಲಾಗಿ ತೀರ್ಪಿನ ಮರು ಪರಿಶೀಲನೆ ಯಾಯಿತಷ್ಟೇ. ಇದು ವೈರುಧ್ಯವಲ್ಲದೆ ಇನ್ನೇನು? ವ್ಯವಸ್ಥೆಯೊಂದನ್ನು ಈ ರೀತಿ ದುರ್ಬಲಗೊಳಿಸಿದರೆ, ಅಪಮಾನ ಗೊಳಿಸಿದರೆ ಅಪಾಯ ಯಾರಿಗೆ?

ನಿಜಕ್ಕೂ ಬದಲಾವಣೆಗಳು ನಡೆಯಬೇಕಿರುವುದು ವ್ಯವಸ್ಥೆಯ ಮೂಲದಲ್ಲಿ. ಅಪರಾಧವೊಂದು ನಡೆದಿದೆಯೆಂದಾದರೆ ಅಪರಾಧಿ ಗಳನ್ನು ಹಿಡಿದು ಕಠಿಣ ಶಿಕ್ಷೆ ನೀಡುವ ಬದಲಾವಣೆ ಆಗಬೇಕಿದೆ.

ತೀರಾ ಅಪಾಯಕಾರಿಯಾದ, ಅಮಾನುಷವಾದ ಕೃತ್ಯವೆಂದಾದರೆ ಅಪರಾಧಿಯನ್ನು ರಕ್ಷಿಸಲು ಮುಂದೆ ಬರುವ ಎಲ್ಲರಿಗೂ ದಂಡನೆಯನ್ನು ವಿಧಿಸಬೇಕು. ಒಂದು ಬಾರಿ ಅಪರಾಧಿ ಎಂದು ಘೋಷಿಸಲ್ಪಟ್ಟ ವ್ಯಕ್ತಿ ಮತ್ತೂಮ್ಮೆ ಅಪರಾಧಿಯಾಗಿ ಸಿಕ್ಕರೆ ಅಂತಹ ವ್ಯಕ್ತಿಗೆ ಈ ಮೊದಲಿನ ಶಿಕ್ಷೆಯ ದುಪ್ಪಟ್ಟು ಶಿಕ್ಷೆಯನ್ನೇ ನೀಡಬೇಕು. ದಂಡ ವಿಧಿಸಬೇಕಾದ ಸಂದರ್ಭದಲ್ಲೂ ಹಳೆಯ ಕಾಲದ ಐದು ಹತ್ತು ಸಾವಿರ ರೂಪಾಯಿಗಳಿಂದ ಹೊರ ಬಂದು ಆತನ ದರೋಡೆ ಕೃತ್ಯಕ್ಕೆ ಅನುಗುಣವಾಗಿ ಹಾಗೂ ಇಂದಿನ ಮೌಲ್ಯಕ್ಕೆ ಅನುಗುಣವಾಗಿ ದಂಡವನ್ನು ವಿಧಿಸಬೇಕು. ಸಾವಿರ ಕೋಟಿಯ ಒಡೆಯನಿಗೆ ಅಥವಾ ಸಾವಿರಾರು ಕೋಟಿ ರೂಪಾಯಿಗಳನ್ನು ದರೋಡೆ ಮಾಡಿದವನಿಗೆ ಹತ್ತಿಪ್ಪತ್ತು ಸಾವಿರ ರೂಪಾಯಿ  ಗಳ ದಂಡ ವಿಧಿಸಿದರೆ ಅದು ನಗೆಪಾಟಲಿನ ವಿಚಾರವಾಗುತ್ತದೆಯಷ್ಟೇ. ಇವತ್ತು ಜೈಲು ಶಿಕ್ಷೆ ವಿಧಿಸುವುದು ನಾಳೆ ಜಾಮೀನು ನೀಡಿ ಬಿಡುಗಡೆ ಮಾಡುವುದು ಕೂಡ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮತ್ತೂಂದು ಹಾಸ್ಯಾಸ್ಪದ ವಿಚಾರ. ಕಾನೂನು ಪಂಡಿತರುಗಳು ಈ ನಿಟ್ಟಿನಲ್ಲೂ ಯೋಚಿಸಿ ಸೂಕ್ತ ಮಾರ್ಪಾಟುಗಳನ್ನು ತಂದರೆ ಖಂಡಿತವಾಗಿಯೂ ಅಪರಾಧ ಪ್ರಕರಣಗಳನ್ನು ಒಂದಷ್ಟು ಪ್ರಮಾಣದಲ್ಲಿ ಕಡಿಮೆಗೊಳಿಸಬಹುದು. 
*ಪ್ರಸಾದ್ ಕುಮಾರ್ ಮಾರ್ನಬೈಲ್

Advertisement

Udayavani is now on Telegram. Click here to join our channel and stay updated with the latest news.

Next