ಒಂದು ಕಡೆ ಅಪ್ಪ-ಅಮ್ಮ, ಮತ್ತೂಂದು ಕಡೆ ಕಂಪೆನಿ, ಇನ್ನೊಂದು ಕಡೆ ಪ್ರೀತಿಸಿದ ಹುಡುಗಿ… ಈ ಮೂವರ ಮಧ್ಯೆಯೇ ಆತನ ಜೀವನ. ಎಲ್ಲವೂ ಜಾಲಿಯಾಗಿ ಸಾಗುತ್ತಿರುವಾಗ ಅಲ್ಲೊಂದು ಘಟನೆ ನಡೆಯುತ್ತದೆ. ನೋಡ ನೋಡುತ್ತಿದ್ದಂತೆ ಕುಟುಂಬದ ಸಂತೋಷ ಮಾಯವಾಗುತ್ತದೆ, ಮನಸ್ತಾಪ ಮನೆ ಮಾಡುತ್ತದೆ… ಜೋಡಿ ಹಕ್ಕಿಗಳ ನಗು ಬಾಡಿ ಹೋಗುತ್ತದೆ… ಅಷ್ಟಕ್ಕೂ ಅಂತಹ ಘಟನೆಯಾದರೂ ಏನು ಎಂಬ ಕುತೂಹಲ ನಿಮಗಿದ್ದರೆ ನೀವು “ಫಾರ್ ರಿಜಿಸ್ಟ್ರೇಶನ್’ನತ್ತ ಮುಖ ಮಾಡಬಹುದು.
ಈ ವಾರ ತೆರೆಗೆ ಬಂದಿರುವ “ಫಾರ್ ರಿಜಿಸ್ಟ್ರೇಶನ್’ ಒಂದು ಫ್ಯಾಮಿಲಿ ಡ್ರಾಮಾ. ಪ್ರೀತಿಸಿ ಮದುವೆ ಯಾಗಿರುವ ಜೋಡಿ, ಅವರ ಕುಟುಂಬ ಸದಸ್ಯರು, ಜೊತೆಗೊಂದು ಸಮಸ್ಯೆ ಈ 3 ಅಂಶಗಳನ್ನಿಟ್ಟುಕೊಂಡು ಇಡೀ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಆರಂಭದಲ್ಲಿ ಲವಲವಿಕೆಯಿಂದ ಸಾಗುವ ಕಥೆ ಇನ್ನೇನು ಸಿನಿಮಾ ಮುಗಿ ಯುವ ಹೊತ್ತಿಗೆ ಚಿತ್ರ ಗಂಭೀರವಾಗುತ್ತಾ ಹೋಗುತ್ತದೆ. ನಿರ್ದೇಶಕರ ಮುಖ್ಯ ಉದ್ದೇಶ ಇಡೀ ಸಿನಿಮಾವನ್ನು ಯೂತ್‌ಫುಲ್ ಆಗಿ ಕಟ್ಟಿಕೊಡೋದು.
ಜೊತೆಗೆ ಅಲ್ಲಲ್ಲಿ ಕಾಮಿಡಿ ಅಂಶಗಳೊಂದಿಗೆ ಪ್ರೇಕ್ಷಕರನ್ನು ನಗಿಸುವುದು. ಆ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅನವಶ್ಯಕವಾದ ಫೈಟ್, ಬಿಲ್ಡಪ್ ದೃಶ್ಯಗಳಿಂದ ಈ ಚಿತ್ರ ಮುಕ್ತವಾಗಿರು ವುದು ಚಿತ್ರದ ಮತ್ತೂಂದು ಪ್ಲಸ್. ನಾಯಕ ಪೃಥ್ವಿ ಅಂಬರ್ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಫ್ಯಾಮಿಲಿ ಡ್ರಾಮಾ ದಲ್ಲಿ ಹೆಚ್ಚು ಗಮನ ಸೆಳೆಯುವ ಪೃಥ್ವಿ ಇಲ್ಲಿನ ಪಾತ್ರವನ್ನು ಅಚ್ಚು ಕಟ್ಟಾಗಿ ನಿಭಾಯಿಸಿದ್ದಾರೆ.
ಉಳಿದಂತೆ ನಾಯಕಿ ಮಿಲನಾ, ಸುಧಾ ಬೆಳವಾಡಿ, ತಬಲ ನಾಣಿ ತಮ್ಮ ತಮ್ಮ ಪಾತ್ರದಲ್ಲಿ ಮಿಂಚಿ ದ್ದಾರೆ. ಒಂದು “ಕೂಲ್’ ಸಿನಿಮಾವನ್ನು ಕಣ್ತುಂಬಿ ಕೊಳ್ಳುವವರು ರಿಜಿಸ್ಟ್ರೇಶನ್‌ನತ್ತ ಮುಖ ಮಾಡ ಬಹುದು.
–ರವಿಪ್ರಕಾಶ್ ರೈ