ನವದೆಹಲಿ: ಇಂಗ್ಲೆಂಡ್ ರಾಣಿ 2ನೇ ಎಲಿಜಬೆತ್ ನಿಧನ ಹೊಂದಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 11(ಭಾನುವಾರ) ರಂದು ದೇಶಾದ್ಯಂತ ಒಂದು ದಿನದ ಶೋಕಾಚರಣೆ ನಡೆಸುವುದಾಗಿ ಕೇಂದ್ರ ಸರಕಾರ ಘೋಷಿಸಿದೆ.
ಶೋಕಾಚರಣೆ ಹಿನ್ನಲೆಯಲ್ಲಿ ದೇಶಾದ್ಯಂತ ರಾಷ್ಟ್ರಧ್ವಜಗಳನ್ನು ಅರ್ಧಕ್ಕೆ ಹಾರಿಸಲು ಸೂಚಿಸಲಾಗಿದೆ.
ಬರೋಬ್ಬರಿ 70 ವರ್ಷಗಳ ಕಾಲ ಇಂಗ್ಲೆಂಡ್ ಅನ್ನು ಆಳಿದ್ದ ರಾಣಿ 2ನೇ ಎಲಿಜಬೆತ್(96) ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದರು.
2015 ಮತ್ತು 2018 ರಲ್ಲಿ ನನ್ನ ಇಂಗ್ಲೆಂಡ್ ಭೇಟಿಗಳ ಸಮಯದಲ್ಲಿ ನಾನು ಕ್ವೀನ್ ಎಲಿಜಬೆತ್ II ಅವರೊಂದಿಗೆ ಸ್ಮರಣೀಯ ಸಭೆಗಳನ್ನು ನಡೆಸಿದ್ದೇನೆ. ನಾನು ಅವರ ಪ್ರೀತಿ ಮತ್ತು ದಯೆಯನ್ನು ಎಂದಿಗೂ ಮರೆಯುವುದಿಲ್ಲ. ಸಭೆಯೊಂದರಲ್ಲಿ ಅವರು ಮಹಾತ್ಮ ಗಾಂಧಿಯವರು ತಮ್ಮ ಮದುವೆಗೆ ಉಡುಗೊರೆಯಾಗಿ ನೀಡಿದ ಕರವಸ್ತ್ರವನ್ನು ನನಗೆ ತೋರಿಸಿದರು. ನಾನು ಯಾವಾಗಲೂ ಆ ಸೂಚಕವನ್ನು ಗೌರವಿಸುತ್ತೇನೆ ಎಂದು ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ಹರ್ ಮೆಜೆಸ್ಟಿ ಕ್ವೀನ್ ಎಲಿಜಬೆತ್ II ರ ನಿಧನದ ಸಂದರ್ಭದಲ್ಲಿ, ಅವರ ಕುಟುಂಬ ಮತ್ತು ಯುನೈಟೆಡ್ ಕಿಂಗ್‌ಡಂನ ಜನರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ.ಕ್ವೀನ್ ಎಲಿಜಬೆತ್ II ಅವರು ತಮ್ಮ ರಾಷ್ಟ್ರವನ್ನು ಸಮಕಾಲೀನ ಕಾಲಕ್ಕೆ ಮಾರ್ಗದರ್ಶನ ಮಾಡಿದರು ಮತ್ತು ಅವರ ಪ್ರೀತಿ ಮತ್ತು ಸಹಾನುಭೂತಿಗಾಗಿ ನೆನಪಿಸಿಕೊಳ್ಳುತ್ತೇನೆ ಎಂದು ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಟ್ವೀಟ್ ಮಾಡಿದ್ದಾರೆ.