ಬಳ್ಳಾರಿ: ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡೋದು ಸಾಮಾನ್ಯ. ಆದರೆ, ಬಳ್ಳಾರಿಯಲ್ಲಿ ಗರ್ಭಧರಿಸಿದ ನಾಯಿಗಳಿಗೆ ಸೀಮಂತ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ. ಅಚ್ಚರಿ ಎನಿಸಿದರೂ ಇದು ಸತ್ಯ. ಇಲ್ಲಿನ ಡಾ| ರಾಜ್ ಕುಮಾರ್ ರಸ್ತೆಯಲ್ಲಿನ ವಂದನಾ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ವಿಮಲಾ
ತಮ್ಮ ಮುದ್ದಿನ ಸಾಕುನಾಯಿಗಳಿಗೆ ಸೀಮಂತ ಮಾಡಿ ಖುಷಿ ಅನುಭವಿಸಿದ್ದಾರೆ.
ಶಾಲೆಯ ಮಹಡಿ ಮೇಲೆ ಇರುವ ಮನೆಯಲ್ಲಿ ತಂಗಿರುವ ಅವರು, ಎರಡು ಹೆಣ್ಣು ನಾಯಿಗಳನ್ನು ಸಾಕಿದ್ದು, ಒಂದಕ್ಕೆ ಪಂಡು, ಇನ್ನೊಂದಕ್ಕೆ ಸೀಟಿ ಎಂದು ಹೆಸರಿಟ್ಟಿದ್ದಾರೆ. ಈ ಎರಡೂ ನಾಯಿಗಳು ಗರ್ಭಧರಿಸಿ ಬುಧವಾರಕ್ಕೆ ಐದು ತಿಂಗಳು ಗತಿಸಿವೆಯಂತೆ. ಈ ನಾಯಿಗಳಿಗೆ ಸೀಮಂತ ಮಾಡುವ ಮೂಲಕ ಎಲ್ಲರ ಹುಬೇºರುವಂತೆ ಮಾಡಿದ್ದಾರೆ.
ಗರ್ಭಿಣಿಯರಿಗೆ ಸೀಮಂತ ಮಾಡುವಂತೆ ಶಾಸ್ತ್ರೋಕ್ತವಾಗಿಯೇ ಶ್ವಾನಗಳಿಗೂ ಸೀಮಂತ ಮಾಡಲಾಗಿದೆ. ಸುಮಾರು ಒಂಭತ್ತು ಬಗೆಯ ಸಿಹಿಖಾದ್ಯಗಳು, ಹಾರ, ತುರಾಯಿ ಹಾಗೂ ವಿವಿಧ ಧಾರ್ಮಿಕ ಆಚರಣೆ ಮೂಲಕ ನಾಯಿಗಳಿಗೆ ಸೀಮಂತ ಮಾಡಲಾಗಿದೆ. ಅವುಗಳಿಗೆ ಆರತಿ, ದೃಷ್ಟಿ ಆರತಿಯನ್ನೂ ಬೆಳಗಿಸಲಾಯಿತು.
ಮಹಿಳೆಯರೇ ಕೇಂದ್ರ ಬಿಂದು: ಗರ್ಭಿಣಿಯರ ಸೀಮಂತ ಕಾರ್ಯಕ್ರಮದಂತೆ ಇಲ್ಲಿಯೂ ಸಹ ಹತ್ತಾರು ಮಹಿಳೆಯರು ಕೇಂದ್ರ ಬಿಂದುವಾಗಿದ್ದರು. ಸದಾ ಕಾಲ ನಮ್ಮೊಂದಿಗಿದ್ದು, ನಮ್ಮ ಆಗು, ಹೋಗುಗಳ ಕುರಿತು ನೋಡಿಕೊಳ್ಳುವ ಈ ಪ್ರಾಣಿಗಳಿಗೂ ಮಾನವೀಯತೆ ಇದೆ. ಕೇವಲ ಮಹಿಳೆಯರಿಗಷ್ಟೇ ಈ ಸೀಮಂತಕಾರ್ಯ ಸೀಮಿತ ಆಗಬಾರದು. ಅದು ಗರ್ಭ ಧರಿಸುವ ಪ್ರಾಣಿಗಳಿಗೂ ಅನ್ವಯ ಆಗಬೇಕೆಂಬ ಬಯಕೆಯಿಂದ ಈ ನಾಯಿಗಳಿಗೆ ಸೀಮಂತ ಕಾರ್ಯ ಮಾಡಲಾಗುತ್ತದೆ ಎಂದು ಶಿಕ್ಷಕಿ ವಿಮಲಾ ತಿಳಿಸಿದರು.