Advertisement

Challenges ;ಪರಿಹಾರಗಳು: ಎದೆಹಾಲು ಉಣಿಸುವ ಹೊಸ ತಾಯಂದಿರು

03:26 PM Aug 25, 2024 | Team Udayavani |

ಚೊಚ್ಚಲ ತಾಯಂದಿರಿಗೆ ಎದೆಹಾಲೂಡಿಸುವುದು ಒಂದು ಅಪೂರ್ವ ಅನುಭವ. ಇದೇವೇಳೆ ಇದು ವಿಶೇಷವಾಗಿ ಮೊದಲ ಎರಡು ಅಥವಾ ಮೂರು ವಾರಗಳ ಅವಧಿಯಲ್ಲಿ ಕೆಲವು ಸವಾಲುಗಳನ್ನು ಕೂಡ ಒಡ್ಡಬಹುದಾಗಿದೆ. ಇಂತಹ ಕೆಲವು ಸಾಮಾನ್ಯ ಸವಾಲುಗಳು ಮತ್ತು ಅವುಗಳಿಗೆ ಪರಿಹಾರಗಳನ್ನು ಇಲ್ಲಿ ವಿವರಿಸಲಾಗಿದೆ.

Advertisement

1 ಮೊಲೆ ಚೀಪುವ ತೊಂದರೆ
ಹಾಗೆಂದರೇನು: ನವಜಾತ ಶಿಶು ಸರಿಯಾಗಿ ಮೊಲೆ ಚೀಪದೆ ಇರುವುದು, ವಿಶೇಷವಾಗಿ ಹೆರಿಗೆಯಾದ ಬಳಿಕ ಮೊದಲ ಮೂರು ದಿನಗಳ ಅವಧಿಯಲ್ಲಿ.
ಯಾಕೆ ಹೀಗಾಗುತ್ತದೆ: ಶಿಶು ಹೆಚ್ಚು ನಿದ್ದೆ ಮಾಡುತ್ತಿರಬಹುದು ಅಥವಾ ತಾಯಿಯು ಶಿಶುವನ್ನು ಸರಿಯಾಗಿ ಹಿಡಿದುಕೊಳ್ಳದೆ ಇರಬಹುದು.
ಪರಿಹಾರ
ಶಿಶುವನ್ನು ತಾಯಿ ದೇಹ ಸ್ಪರ್ಶಿಸಿ ಹಿಡಿದುಕೊಳ್ಳುವುದು: ಶಿಶು ಸಹಜವಾಗಿ ಮೊಲೆಯನ್ನು ಚೀಪಿ ಹಾಲು ಕುಡಿಯುವುದಕ್ಕೆ ಅನುವಾಗುವಂತೆ ಶಿಶುವನ್ನು ಎದೆಗೆ ಸ್ಪರ್ಶಿಸಿ ಹಿಡಿದುಕೊಳ್ಳಬೇಕು.
ಸರಿಯಾದ ಭಂಗಿ: ತೊಟ್ಟಿಲು ಹಿಡಿತ, ಫ‌ುಟ್‌ಬಾಲ್‌ ಹಿಡಿತ ಅಥವಾ ಬದಿಗೆ ಮಲಗಿಸಿ ಹಾಲೂಡಿಸುವಂತಹ ವಿವಿಧ ಭಂಗಿಗಳನ್ನು ಪ್ರಯತ್ನಿಸಿ ಯಾವುದು ನಿಮಗೆ ಮತ್ತು ನಿಮ್ಮ ಶಿಶುವಿಗೆ ಅನುಕೂಲಕರ ಎಂಬುದನ್ನು ಕಂಡುಕೊಳ್ಳಬೇಕು.
ಸ್ತನ್ಯಪಾನ ಸಲಹೆಗಾರರು: ಇಷ್ಟಾಗಿಯೂ ಸಮಸ್ಯೆ ಹಾಗೆಯೇ ಉಳಿದುಕೊಂಡಿದ್ದರೆ ನಿಮಗೆ ಸರಿಯಾದ ಮಾರ್ಗದರ್ಶನವನ್ನು ಒದಗಿಸಬಲ್ಲ ಸ್ತನ್ಯಪಾನ ಸಲಹೆಗಾರರನ್ನು ಸಂಪರ್ಕಿಸಿ.

2 ಮೊಲೆತೊಟ್ಟು ನೋವು
ಹಾಗೆಂದರೇನು: ಮೊಲೆತೊಟ್ಟು ನೋವಿನಿಂದ ಕೂಡಿರುವುದು, ಬಿರಿದಿರುವುದು ಅಥವಾ ರಕ್ತಸ್ರಾವವಾಗುತ್ತಿರುವುದು.
ಯಾಕೆ ಹೀಗಾಗುತ್ತದೆ: ಮೊಲೆ ತೊಟ್ಟನ್ನು ಶಿಶು ಚೀಪುವ ವಿಧಾನ ಸರಿಯಾಗಿಲ್ಲದಿರುವುದು.
ಪರಿಹಾರ
ಶಿಶು ಎರಡೂ ಸ್ತನಗಳ ತೊಟ್ಟುಗಳನ್ನು ಅರೋಲಾ (ತೊಟ್ಟಿನ ಸುತ್ತಲಿನ ಕಪ್ಪು ಭಾಗ)ದ ಬಹುಭಾಗ ಸಹಿತ ಬಾಯಿಯಲ್ಲಿರಿಸಿ ಚೀಪುವಂತೆ ಮಾಡಬೇಕು.
ಲ್ಯಾನೊಲಿನ್‌ ಕ್ರೀಮ್‌ ಬಳಕೆ: ನೋವಿನಿಂದ ಕೂಡಿದ ಮೊಲೆತೊಟ್ಟುಗಳು ಗುಣವಾಗುವುದಕ್ಕಾಗಿ ಲ್ಯಾನೊಲಿನ್‌ ಕೂಡಿರುವ ಕ್ರೀಮ್‌ ಹಚ್ಚಬೇಕು. ಪರ್ಯಾಯವಾಗಿ ತೆಂಗಿನೆಣ್ಣೆಯನ್ನು ಕೂಡ ಹಚ್ಚಬಹುದು.

3 ಮೊಲೆಗಳಲ್ಲಿ ಹಾಲು ತುಂಬುವುದು
ಹಾಗೆಂದರೇನು: ಮೊಲೆಗಳಲ್ಲಿ ಹಾಲು ಹೆಚ್ಚಿ ಊದಿಕೊಳ್ಳುವುದು.
ಯಾಕೆ ಹೀಗಾಗುತ್ತದೆ: ಎದೆಯಲ್ಲಿ ಹಾಲು ಉತ್ಪಾದನೆಯಾಗಲು ಆರಂಭವಾದಾಗ ನಿಮ್ಮ ಶಿಶುವಿನ ಅಗತ್ಯಕ್ಕಿಂತ ಹೆಚ್ಚು ಹಾಲು ಉತ್ಪಾದನೆಯಾಗುತ್ತಿರಬಹುದು.
ಪರಿಹಾರ
ಆಗಾಗ ಎದೆಹಾಲೂಡಿಸುವುದು: ಹಾಲು ಹೆಚ್ಚಳವನ್ನು ಕಡಿಮೆ ಮಾಡಿಕೊಳ್ಳಲು ಶಿಶುವಿಗೆ ಆಗಾಗ ಹಾಲು ಕುಡಿಸಿ.
ಕೈಗಳಿಂದ ಹಾಲು ಹಿಂಡುವುದು: ನಿಮ್ಮ ಶಿಶು ಹಸಿದಿಲ್ಲ ವಾದರೆ, ಹಾಲು ಹೆಚ್ಚಳವನ್ನು ಕಡಿಮೆ ಮಾಡಿಕೊಳ್ಳಲು ಕೈಗಳಿಂದ ಅಥವಾ ಅದಕ್ಕಾಗಿಯೇ ಇರುವ ಪಂಪ್‌ ಉಪಯೋಗಿಸಿ ಸ್ವಲ್ಪ ಹಾಲನ್ನು ಹಿಂಡಿಕೊಳ್ಳಬಹುದು.
ಸ್ತನಗಳಿಗೆ ಶಾಖ/ ಶೈತ್ಯೋಪಚಾರ: ಹಾಲು ಸರಿಯಾಗಿ ಸ್ರವಿಸುವುದಕ್ಕೆ ಅನುಕೂಲವಾಗುವಂತೆ ಎದೆಹಾಲೂಡಿಸುವುದಕ್ಕೆ ಮುನ್ನ ಸ್ತನಗಳ ಮೇಲೆ ಬಿಸಿನೀರಿನಲ್ಲಿ ನೆನೆಸಿದ ಬಟ್ಟೆಯನ್ನು ಇರಿಸಿಕೊಳ್ಳಬೇಕು ಅಥವಾ ಎದೆಹಾಲೂಡಿದ ಬಳಿಕ ಮಂಜುಗಡ್ಡೆ ಸುತ್ತಿದ/ ತಂಪಾದ ನೀರಿನಲ್ಲಿ ನೆನೆಸಿದ ಬಟ್ಟೆಯನ್ನು ಸ್ತನಗಳ ಮೇಲಿರಿಸಿಕೊಳ್ಳಬಹುದು.

4 ಹಾಲು ಸ್ರವಿಸಲು ತಡೆ ಹಾಗೆಂದರೇನು: ಸ್ತನಗಳ ಒಳಗೆ ಹಾಲು ಹರಿದುಬರುವ ನಾಳಗಳಲ್ಲಿ ಹಾಲು ಶೇಖರಗೊಂಡು ಗಟ್ಟಿಯಾಗಿ ಹಾಲು ಸ್ರಾವಕ್ಕೆ ತಡೆಯಾಗುವುದು.
ಯಾಕೆ ಹೀಗಾಗುತ್ತದೆ: ಹಾಲೂಡಿಸದೆ ಇರುವುದು, ಚೀಪುವಿಕೆ ಸರಿಯಾಗದೆ ಇರುವುದು ಅಥವಾ ಬಿಗಿಯಾದ ಉಡುಪು ಧರಿಸಿರುವುದು.
ಪರಿಹಾರ
ಶೈತ್ಯೋಪಚಾರ: ಮಂಜುಗಡ್ಡೆಯನ್ನು ಬಟ್ಟೆಯಲ್ಲಿ ಸುತ್ತಿ ಅಥವಾ ಮಂಜುಗಡ್ಡೆಯನ್ನು ಸ್ತನಗಳ ಮೇಲೆ ಪ್ರತೀ ಒಂದು ತಾಸಿಗೆ ಒಮ್ಮೆ 10 ನಿಮಿಷಗಳ ಕಾಲ ಇರಿಸಿಕೊಳ್ಳಬೇಕು. ಸ್ತನಗಳಿಂದ ಕಂಕುಳಗಳತ್ತ ಸ್ತನಗಳನ್ನು ನವಿರಾಗಿ ಮಸಾಜ್‌ ಮಾಡುವುದರಿಂದಲೂ ಹೆಚ್ಚುವರಿ ಹಾಲು ಸ್ರಾವವಾಗಲು ಸಹಾಯವಾಗುತ್ತದೆ. ಆದರೆ ಗಟ್ಟಿಯಾಗಿ ಒತ್ತಬಾರದು, ಹಾಗೆ ಮಾಡಿದರೆ ಊತ ಹೆಚ್ಚಬಹುದು.
ಆಗಾಗ ಹಾಲೂಡುವಿಕೆ: ಸಮಸ್ಯೆ ಇರುವ ಸ್ತನದಿಂದ ಹೆಚ್ಚು ಬಾರಿ ಹಾಲು ಕುಡಿಸಿದರೆ ತಡೆ ನಿವಾರಣೆಯಾಗಲು ಸಹಾಯವಾಗುತ್ತದೆ.

Advertisement

5 ಹಾಲು ಕಡಿಮೆ ಇರುವಂತೆ ಭಾಸವಾಗುವುದು ಹಾಗೆಂದರೇನು: ನಿಮ್ಮ ಶಿಶುವಿನ ಹೊಟ್ಟೆ ತುಂಬುವಷ್ಟು ಹಾಲು ಉಂಟಾಗದೆ ಇರುವುದು.
ಯಾಕೆ ಹೀಗಾಗುತ್ತದೆ: ಒತ್ತಡ, ಆಗಾಗ ಹಾಲೂಡಿಸದೆ ಇರುವುದು ಅಥವಾ ಇತರ ಆರೋಗ್ಯ ಸಮಸ್ಯೆಗಳು.
ಪರಿಹಾರ ಆಗಾಗ ಹಾಲು ಕುಡಿಸುವುದು: ಹಾಲು ಉತ್ಪಾದನೆಯಾಗುವಂತೆ ಪ್ರೇರೇಪಿಸಲು ಆಗಾಗ, ಕನಿಷ್ಠ 2-3 ತಾಸಿಗೆ ಒಮ್ಮೆಯಾದರೂ ಹಾಲು ಕುಡಿಸಬೇಕು.
ಸಾಕಷ್ಟು ದ್ರವಾಹಾರ ಸೇವನೆ ಮತ್ತು ಪೌಷ್ಟಿಕ ಆಹಾರ ಸೇವನೆ: ಎದೆಹಾಲು ಚೆನ್ನಾಗಿ ಉಂಟಾಗಲು ಸಾಕಷ್ಟು ನೀರು, ದ್ರವಾಹಾರ ಸೇವಿಸಬೇಕು ಮತ್ತು ಸಮತೋಲಿತ ಪೌಷ್ಟಿಕ ಆಹಾರವನ್ನು ಸೇವಿಸಬೇಕು.
ಸಪ್ಲಿಮೆಂಟ್‌ಗಳು ಬೇಡ: ವೈದ್ಯರು ಶಿಫಾರಸು ಮಾಡದೆ ಇದ್ದರೆ, ಶಿಶುವಿನ ಎದೆಹಾಲು ಕುಡಿಯುವ ಅಗತ್ಯವನ್ನು ಕಡಿಮೆ ಮಾಡಬಹುದಾದ ಫಾರ್ಮುಲಾ ಸಪ್ಲಿಮೆಂಟ್‌ ಗಳನ್ನು ಶಿಶುವಿಗೆ ನೀಡಬಾರದು.

6 ಒಳಕ್ಕೆ ಸರಿದ ಅಥವಾ ಚಪ್ಪಟೆ ಮೊಲೆತೊಟ್ಟುಗಳು ಹಾಗೆಂದರೇನು: ಮೊಲೆತೊಟ್ಟುಗಳು ಉಬ್ಬಿಕೊಂಡಿಲ್ಲದೆ ಅಥವಾ ಒಳಕ್ಕೆ ಸರಿದಿದ್ದರೆ ಶಿಶುವಿಗೆ ಚೀಪಲು ಕಷ್ಟವಾಗುತ್ತದೆ.
ಯಾಕೆ ಹೀಗಾಗುತ್ತದೆ: ಸ್ತನದ ಸಂರಚನೆಯ ವೈವಿಧ್ಯದಿಂದ ಇದು ಸಹಜ ರಚನೆಯಾಗಿರಬಹುದು.
ಪರಿಹಾರ ನಿಪ್ಪಲ್‌ ಶೀಲ್ಡ್‌: ಸ್ತನ್ಯಪಾನ ಸಲಹೆಗಾರರ ಸುಪರ್ದಿಯಲ್ಲಿ ಚಪ್ಪಟೆಯಾದ ಅಥವಾ ಒಳಕ್ಕೆ ಸರಿದಿರುವ ತೊಟ್ಟನ್ನು ಚೀಪುವುದಕ್ಕೆ ಅನುಕೂಲವಾಗುವಂತೆ ನಿಪ್ಪಲ್‌ ಶೀಲ್ಡ್‌ ಉಪಯೋಗಿಸಬೇಕು.
ಬ್ರೆಸ್ಟ್‌ ಶೆಲ್‌: ಮೊಲೆತೊಟ್ಟುಗಳು ಹೊರಕ್ಕೆ ಚಾಚಿಕೊಳ್ಳಲು ಸಹಾಯವಾಗುವಂತೆ ಎದೆಹಾಲೂಡುವಿಕೆಗಳ ನಡುವೆ ಬ್ರಾದ ಒಳಗೆ ಬ್ರೆಸ್ಟ್‌ ಶೀಲ್ಡ್‌ ಧರಿಸಬಹುದು.
ಎದೆಹಾಲೂಡುವುದಕ್ಕೆ ಮುನ್ನ ಹಾಲು ಹಿಂಡುವುದು: ಮೊಲೆತೊಟ್ಟು ಸ್ವಲ್ಪ ನಿಮಿರಿಕೊಳ್ಳುವುದಕ್ಕೆ ಸಹಾಯವಾಗಲು ಶಿಶುವಿಗೆ ಎದೆ ಹಾಲು ಕುಡಿಸುವುದಕ್ಕೆ ಮುನ್ನ ಕೈಗಳಿಂದ ಸ್ವಲ್ಪ ಹಾಲನ್ನು ಹಿಂಡಿಕೊಳ್ಳಬೇಕು.

7 ಹಾಲು ಕುಡಿಯುತ್ತಲೇ ಶಿಶು ನಿದ್ದೆ ಹೋಗುವುದು ಹಾಗೆಂದರೇನು: ಎದೆಹಾಲು ಕುಡಿದು ಮುಗಿಸುವುದಕ್ಕೆ ಮುನ್ನವೇ ಶಿಶು ನಿದ್ದೆ ಮಾಡಿಬಿಡುವುದು.
ಯಾಕೆ ಹೀಗಾಗುತ್ತದೆ: ನವಜಾತ ಶಿಶು, ಅದರಲ್ಲೂ ಮೊದಲ ಕೆಲವು ವಾರಗಳಲ್ಲಿ ತುಂಬಾ ನಿದ್ದೆ ಮಾಡಬಹುದು.
ಪರಿಹಾರ ಶಿಶುವನ್ನು ಎಚ್ಚರವಾಗಿಡಿ: ಶಿಶು ಹಾಲು ಕುಡಿಯುವಾಗ ಎಚ್ಚರವಾಗಿರಲು ಸಹಾಯವಾಗುವಂತೆ ಪಾದದಡಿ ಮೃದುವಾಗಿ ತುರಿಸಿ, ಡಯಾಪರ್‌ ಬದಲಾಯಿಸಿ ಅಥವಾ ಹೊದಿಕೆ/ ಬಟ್ಟೆಯನ್ನು ಬಿಚ್ಚಿ.
ಹಾಲು ಕುಡಿಯುವ ಮೊಲೆಯನ್ನು ಬದಲಾಯಿಸಿ: ಶಿಶು ನಿದ್ದೆ ತೂಗಲು ಆರಂಭಿಸುತ್ತಿದ್ದಂತೆ ಎಚ್ಚರಗೊಳಿಸುವುದಕ್ಕಾಗಿ ಹಾಲು ಕುಡಿಯುವ ಮೊಲೆಯನ್ನು ಬದಲಾಯಿಸಿ.
ಮೊಲೆಯನ್ನು ಹಿಂಡುವುದು: ಶಿಶು ಮೊಲೆಯನ್ನು ಚೀಪುತ್ತಿರುವಾಗಲೇ ಮೊಲೆಯನ್ನು ಸ್ವಲ್ಪ ಹಿಂಡುತ್ತಿದ್ದರೆ ಹಾಲು ಹರಿಯುವುದಕ್ಕೆ ಅನುಕೂಲವಾಗುತ್ತದೆ. ಕೊನೆಯದಾಗಿ ನವಜಾತ ಶಿಶುವಿಗೆ ಎದೆಹಾಲು ಕುಡಿಸುವುದು ಸವಾಲು; ಆದರೆ ತಾಳ್ಮೆ ಮತ್ತು ಸರಿಯಾದ ಸಹಾಯದಿಂದ ಎದುರಾಗಬಲ್ಲ ಅಡೆತಡೆಗಳನ್ನು ನೀವು ದಾಟಬಹುದು. ಸ್ತನ್ಯಪಾನ ಸಲಹೆಗಾರರು, ಆರೋಗ್ಯಸೇವಾ ಪೂರೈಕೆದಾರರು ಅಥವಾ ನೆರವು ಗುಂಪುಗಳಿಂದ ಸಹಾಯ ಪಡೆಯಲು ಹಿಂಜರಿಯದಿರಿ. ನೆನಪಿಡಿ, ಪ್ರತೀ ತಾಯಿ ಮತ್ತು ಪ್ರತೀ ಶಿಶುವೂ ವಿಭಿನ್ನ; ಹಾಗಾಗಿ ನೀವು ಮತ್ತು ನಿಮ್ಮ ಶಿಶುವಿಗೆ ಯಾವುದು ಸರಿ ಎಂಬುದನ್ನು ಕಂಡುಕೊಳ್ಳುವುದೇ ಮುಖ್ಯ.

ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ:ಮುಖ್ಯಸ್ಥರು, ಒಬಿಜಿ ಮತ್ತು ಪೀಡಿಯಾಟ್ರಿಕ್ಸ್‌ ವಿಭಾಗ,ಕೆಎಂಸಿ, ಮಂಗಳೂರು

– ಮೈನಾ ಶೇಟ್‌ ಲ್ಯಾಕ್ಟೇಶನ್‌ ಕೌನ್ಸೆಲರ್‌ ಕೆಎಂಸಿ ಆಸ್ಪತ್ರೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next