Advertisement

ಮುರ ರೈಲ್ವೇ ಮೇಲ್ಸೇತುವೆಗಾಗಿ ಬ್ಯಾರಿಕೇಡ್‌ ಮಾಯ!

02:25 PM Apr 16, 2018 | |

ನಗರ: ಮಾಣಿ- ಮೈಸೂರು ರಾಜ್ಯ ಹೆದ್ದಾರಿ ಈಗ ರಾಷ್ಟ್ರೀಯ ಹೆದ್ದಾರಿಗೆ ಹಸ್ತಾಂತರವಾಗಿದೆ. ಈ ಪ್ರಕ್ರಿಯೆ ನಡೆಯುತ್ತಿರುವ ನಡುವೆ ಮುರ ಜಂಕ್ಷನ್‌ ನಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳು ಮಾಯವಾಗಿವೆ.

Advertisement

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ರಸ್ತೆ ಹಸ್ತಾಂತರ ಆಗಿರುವುದಕ್ಕೂ ಬ್ಯಾರಿಕೇಡ್‌ ಮಾಯವಾಗಿರುವುದಕ್ಕೂ ಸಂಬಂಧ ಇದೆಯೇ ಎನ್ನುವುದು ಗೊತ್ತಿಲ್ಲ. ಆದರೆ ಬ್ಯಾರಿಕೇಡ್‌ ಇಲ್ಲದೇ ಇರುವುದರಿಂದ ಒಂದಷ್ಟು ಸಮಸ್ಯೆ ಉಲ್ಬಣಿಸಿದ್ದು ಸುಳ್ಳಲ್ಲ. ತಕ್ಕಮಟ್ಟಿಗೆ ಪೇಟೆಯ ರೂಪು ಪಡೆಯುತ್ತಿರುವ ಮುರದಂತಹ ಸ್ಥಳಗಳಲ್ಲಿ ಬ್ಯಾರಿಕೇಡ್‌ನ‌ ಪ್ರಸ್ತುತತೆ ತುಂಬಾ ಇದೆ. ಏಕಾಏಕಿ ನುಗ್ಗಿ ಬರುವ ವಾಹನಗಳನ್ನು ತಪ್ಪಿಸಿಕೊಂಡು ರಸ್ತೆ ದಾಟುವುದೇ ಇಲ್ಲಿ ಹರಸಾಹಸ. ವಾಹನಗಳ ವೇಗಕ್ಕೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಬ್ಯಾರಿಕೇಡ್‌ಗಳು ಬೇಕೇ ಬೇಕು. ಇದನ್ನು ಗಮನಿಸಿಯೇ ಪೊಲೀಸ್‌ ಇಲಾಖೆ ಬ್ಯಾರಿಕೇಡ್‌ ಹಾಕಿತ್ತು. ಆದರೆ ಅವು ಈಗ ಮಾಯವಾಗಿವೆ.

ಇನ್ನೊಂದೆಡೆ ಮುರ ರೈಲ್ವೇ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ರೈಲ್ವೇ ಇಲಾಖೆ ಮುತುವರ್ಜಿಯಲ್ಲಿ ಮೇಲ್ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಸದ್ಯಕ್ಕೆ ಕಾಮಗಾರಿ ನಿಂತಿದೆ. ಆದರೆ ಈ ಕಾಮಗಾರಿಗಾಗಿ ರಸ್ತೆಯ ದಿಕ್ಕನ್ನೇ ಬದಲಾಯಿಸಲಾಗಿದೆ. ಹಿಂದೆ ಮುರ ಜಂಕ್ಷನ್‌ನಿಂದಲೇ ಕೆದಿಲ ಮಾರ್ಗ ಸಾಗುತ್ತಿತ್ತು. ಇದೀಗ ಈ ರಸ್ತೆಯನ್ನು ಸ್ವಲ್ಪ ಹಿಂದಕ್ಕೆ ಅಂದರೆ ಮೇಲ್ಸೇತುವೆಗೆ ಅನುಗುಣವಾಗಿ ನಿರ್ಮಿಸಲಾಗಿದೆ. ಇದಕ್ಕೆ ಪೂರಕವಾಗಿ ಬ್ಯಾರಿಕೇಡ್‌ ಇಡಬೇಕು ಎಂಬ ಹಿನ್ನೆಲೆ ಯಲ್ಲಿ ತೆಗೆದಿರಬಹುದೇ ಎಂಬ ನಿಟ್ಟಿನಲ್ಲಿ ಸಾರ್ವಜನಿಕರ ಗೊಂದಲ ಮುಂದುವರಿದಿದೆ.

ಈ ಮೊದಲು ಮುರ ರೈಲ್ವೇ ಹಳಿ ದಾಟಲು ಗೇಟ್‌ ಇಡಲಾಗಿತ್ತು. ಆದರೆ ಮುಂದೆ ಇದರ ಆವಶ್ಯಕತೆ ಇಲ್ಲ. ನೇರವಾಗಿ ಮೇಲ್ಸೇತುವೆ ಮೂಲಕ ವಾಹನಗಳು ಸಂಚರಿಸಬಹುದು. ಕೆದಿಲ ರಸ್ತೆಯಾಗಿ ಸಾಗಿದರೆ ಮಾಣಿಗೆ ಸುಲಭ ಹಾಗೂ ಹತ್ತಿರದ ಹಾದಿ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚುವ ಸಾಧ್ಯತೆಯೂ ಇದೆ. ಆದ್ದರಿಂದ ವಾಹನ ದಟ್ಟಣೆ ನಿಯಂತ್ರಿಸುವ ದೃಷ್ಟಿಯಿಂದ ಇಲ್ಲಿ ಬ್ಯಾರಿಕೇಡ್‌ಗಳು ತುಂಬಾ ಅಗತ್ಯ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅಪಘಾತ ವಲಯ
ಪುತ್ತೂರಿನಲ್ಲಿ ದರ್ಬೆ ಹಾಗೂ ನೆಹರೂ ನಗರ ವೇಗವಾಗಿ ಬೆಳೆಯುತ್ತಿರುವ ಪಟ್ಟಣಗಳು. ನೆಹರೂನಗರಕ್ಕೆ ಒತ್ತಿಕೊಂಡೇ ಇರುವ ಮುರ ಸಾಕಷ್ಟು ಅಭಿವೃದ್ಧಿಗೆ ತೆರೆದುಕೊಂಡಿದೆ. ಆದ್ದರಿಂದ ಜನಜಂಗುಳಿ ಹೆಚ್ಚುತ್ತಿದೆ. ಸಾಲದೆಂಬಂತೆ ಹಿಂದೆ ರಾಜ್ಯ ಹೆದ್ದಾರಿ, ಈಗ ರಾಷ್ಟ್ರೀಯ ಹೆದ್ದಾರಿ ಸವರಿ ಕೊಂಡೇ ಹೋಗುತ್ತದೆ. ಇವಿಷ್ಟು ಕಾರಣ ಸಾಕು, ಅಪಘಾತಗಳ ಸಂಖ್ಯೆ ಹೆಚ್ಚಲು. ರಸ್ತೆ ದಾಟಲು ಸಾಧ್ಯವಿಲ್ಲ ಎನ್ನುವಷ್ಟು ವಾಹನ ದಟ್ಟಣೆ. ವೇಗವಾಗಿ ಬರುವ ವಾಹನಗಳಿಗೆ ಬ್ರೇಕ್‌ ಹಾಕುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ನಾಗರಿಕರದ್ದು.

Advertisement

ಪರ್ಯಾಯ ಮಾರ್ಗ ಹುಡುಕುತ್ತಿದ್ದೇವೆ
ಮುರದಲ್ಲಿ ಈ ಮೊದಲು ಬ್ಯಾರಿಕೇಡ್‌ ಹಾಕಲಾಗಿತ್ತು. ರಾಜ್ಯ ಹೆದ್ದಾರಿ ಅಥವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ ಇಡಬಾರದು ಎಂಬ ಸೂಚನೆ ಹಿನ್ನೆಲೆಯಲ್ಲಿ ಬ್ಯಾರಿಕೇಡನ್ನು ತೆರವು ಮಾಡಲಾಗಿತ್ತು. ಆದರೆ ಇದರ ಬಗ್ಗೆ ನಿಖರ ಮಾಹಿತಿ ತಿಳಿದಿಲ್ಲ. ಒಟ್ಟಿನಲ್ಲಿ ಮುರದಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಹಾಕುವ ಆವಶ್ಯಕತೆ ಇದೆ. ಆದ್ದರಿಂದ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದೇವೆ. 
– ನಾರಾಯಣ ರೈ, ಎಸ್‌ಐ, ನಗರ ಸಂಚಾರಿ ಪೊಲೀಸ್‌ ಠಾಣೆ

ಹಂಪ್‌ ಹಾಕುವಂತಿಲ್ಲ
ಬ್ಯಾರಿಕೇಡ್‌ಗಳನ್ನು ಅವೈಜ್ಞಾನಿಕವಾಗಿ ಇಡುವುದರಿಂದ ಅಪಘಾತ ಸಂಭವಿಸಿದ ಉದಾಹರಣೆ ಸಾಕಷ್ಟಿದೆ. ಆದರೆ ಸೂಕ್ತ ಸ್ಥಳದಲ್ಲಿ, ಸಮರ್ಪಕವಾಗಿ ಬ್ಯಾರಿಕೇಡ್‌ಗಳನ್ನು ಇಟ್ಟರೆ ಅಪಘಾತಗಳನ್ನು ತಪ್ಪಿಸಬಹುದು. ಇದೀಗ ಬ್ಯಾರಿಕೇಡ್‌ಗಳನ್ನೇ ತೆರವು ಮಾಡಿದರೆ ಪರ್ಯಾಯ ಏನು? ಹೆದ್ದಾರಿಯಲ್ಲಿ ಹಂಪ್ಸ್‌ ಹಾಕುವಂತಿಲ್ಲ. ಸ್ಟಿಕ್ಕರ್‌ ಗಳಿಗೆ ವಾಹನ ಚಾಲಕರು ಕ್ಯಾರೇ ಎನ್ನುತ್ತಿಲ್ಲ. ಇದೀಗ ಚುನಾವಣೆಯೂ ಸಮೀಪ ಬರುತ್ತಿರುವ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರ ಪೊಲೀಸ್‌ ಹಾಗೂ ನಗರಸಭೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಆವಶ್ಯಕತೆ ಇದೆ.

ಗಣೇಶ್‌ ಎನ್‌. ಕಲ್ಲರ್ಪೆ

Advertisement

Udayavani is now on Telegram. Click here to join our channel and stay updated with the latest news.

Next