Advertisement

ಲಿಂಗಾಯತರಿಗೆ ಸಿಂಹಪಾಲು, ಉ.ಕ.ಭಾಗಕ್ಕೆ ಇಬ್ಬರು ಡಿಸಿಎಂ

11:26 PM Aug 26, 2019 | Team Udayavani |

ಬೆಂಗಳೂರು: ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ಏಳು ಮಂದಿ ಲಿಂಗಾಯತ ಸಮುದಾಯದ ಶಾಸಕರಿಗೆ ಸಚಿವಸ್ಥಾನ ನೀಡಲಾಗಿತ್ತು. ಖಾತೆ ಹಂಚಿಕೆಯಲ್ಲೂ ಲಿಂಗಾಯತರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿರುವ ಜತೆಗೆ ಒಂದು ಉಪಮುಖ್ಯಮಂತ್ರಿ ಹುದ್ದೆಯನ್ನು ಈ ಸಮುದಾಯಕ್ಕೆ ನೀಡಲಾಗಿದೆ.

Advertisement

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಸಂಪುಟದ 17 ಸಚಿವರಲ್ಲಿ 8 ಮಂದಿ ಲಿಂಗಾಯತರಿದ್ದಾರೆ. ಮುಖ್ಯಮಂತ್ರಿ ಕೂಡ ಇದೇ ಸಮುದಾಯದವರಾಗಿದ್ದು, ಕೃಷಿ, ಗುಪ್ತಚರ ಸಹಿತವಾಗಿ ಹಲವು ಖಾತೆಗಳು ಅವರ ಬಳಿಯೇ ಇದೆ. ಇನ್ನು ಲಕ್ಷ್ಮಣ ಸವದಿ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಜತೆಗೆ ಸಾರಿಗೆ ಖಾತೆ ನೀಡಲಾಗಿದೆ.

ಮಾಜಿ ಡಿಸಿಎಂ ಜಗದೀಶ್‌ ಶೆಟ್ಟರ್‌ ಅವರಿಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ, ಬೆಂಗ ಳೂರಿನ ಪ್ರಭಾವಿ ಶಾಸಕರಲ್ಲಿ ಒಬ್ಬರಾದ ವಿ. ಸೋಮಣ್ಣ ಅವರಿಗೆ ನಿರೀಕ್ಷೆಯಂತೆ ವಸತಿ, ಬಸವರಾಜ ಬೊಮ್ಮಾಯಿ ಅವರಿಗೆ ಗುಪ್ತಚರ ರಹಿತವಾಗಿ ಗೃಹ ಇಲಾಖೆ ವಹಿಸಲಾಗಿದೆ.

ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ವಾಮಿಗೆ ಕಾನೂನು, ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಖಾತೆ, ಸಿ.ಸಿ.ಪಾಟೀಲ್‌ಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ಶಶಿಕಲಾ ಜೊಲ್ಲೆ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಖಾತೆ ವಹಿಸಲಾಗಿದೆ.

ಉತ್ತರ ಕರ್ನಾಟಕಕ್ಕೆ ಆದ್ಯತೆ: ಮುಧೋಳ ಶಾಸಕ ಗೋವಿಂದ ಕಾರಜೋಳ ಹಾಗೂ ಅಥಣಿ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಲಕ್ಷ್ಮಣ ಸವದಿ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಜತೆಗೆ ಉತ್ತಮ ಖಾತೆಗಳನ್ನೂ ನೀಡಲಾಗಿದೆ.

Advertisement

ಸವದಿಗೆ ಡಿಸಿಎಂ ಹುದ್ದೆ – ಪಕ್ಷದಲ್ಲಿ ಅಸಮಾಧಾನ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಲಕ್ಷ್ಮಣ ಸವದಿ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಿರುವುದು ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ರೇಣುಕಾಚಾರ್ಯ ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನವೂ ನೀಡಿರುವುದು ಕೆಲವು ಶಾಸಕರಲ್ಲಿ ಆಕ್ರೋಶ ಮೂಡಿಸಿದೆ ಎಂದು ಹೇಳಲಾಗಿದೆ.

ಬೆಳಗಾವಿ ಭಾಗದ ಹಿರಿಯ ಶಾಸಕ ಉಮೇಶ್‌ ಕತ್ತಿಯವರಿಗೆ ಸಚಿವ ಸ್ಥಾನ ನೀಡದೆ, ಶಾಸಕರಲ್ಲದ ಸವದಿಯವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಉಮೇಶ್‌ ಕತ್ತಿ ಸಹಿತ ಅನೇಕರು ಅಸಮಾಧಾನ ಹೊರ ಹಾಕಿದ್ದರು. ಶಾಸಕ ಬಾಲಚಂದ್ರ ಜಾರಕಿಹೋಳಿ ಕೂಡ ಅತೃಪ್ತಿ ವ್ಯಕ್ತಪಡಿಸಿದ್ದರು. ಅವರಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನದ ಭರವಸೆ ನೀಡಿ ಸುಮ್ಮನಾಗಿಸಲಾಯಿತು.

ಇದೀಗ ಉಮೇಶ್‌ ಕತ್ತಿಯವರಿಗೆ ಸಚಿವ ಸ್ಥಾನದ ಭರವಸೆ ನೀಡಲಾಗಿದೆಯಾದರೂ ಲಕ್ಷ್ಮಣ ಸವದಿಗೆ ಡಿಸಿಎಂ ಸ್ಥಾನ ನೀಡಿರುವುದು ಕತ್ತಿ ಅವರಲ್ಲೂ ಬೇಸರ ತರಿಸಿದೆ ಎಂದು ಹೇಳಲಾಗಿದೆ. ಜತೆಗೆ ಮೈಸೂರಿನ ಹಿರಿಯ ಶಾಸಕ ರಾಮದಾಸ್‌ ಅವರು ಸಚಿವ ಸ್ಥಾನ ನೀಡದಿರುವುದಕ್ಕೆ ಸೋಮವಾರ ಅಸಮಾಧಾನ ಹೊರಹಾಕಿ, ಮೈಸೂರು ದಸರಾ ಉತ್ಸವದ ಚಾಲನಾ ಕಾರ್ಯಕ್ರಮಗಳಿಗೂ ಗೈರಾಗಿದ್ದರು.

ಇನ್ನು ಬೆಂಗಳೂರಿನ ಶಾಸಕ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ ಅವರಿಗೆ ಉಪ ಮುಖ್ಯಮಂತ್ರಿ ನೀಡಿರುವ ಬಗ್ಗೆ ಹಿರಿಯ ಶಾಸಕ ಆರ್‌.ಅಶೋಕ್‌ ಕೂಡ ತಮ್ಮ ಆಪ್ತರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಚಿತ್ರದುರ್ಗದ ಗೂಳಿಹಟ್ಟಿ ಶೇಖರ್‌ ಅವರು ಮಂತ್ರಿ ಸ್ಥಾನ ಸಿಗದ ಕಾರಣ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next