ಮಣಿಪಾಲ: ಶತಮಾನದ ಅನಂತರ ಬಂದು ಅಪ್ಪಳಿಸಿರುವ ಕೋವಿಡ್ ಎಂಬ ಸಾಂಕ್ರಾಮಿಕ ರೋಗವನ್ನು ಸಮರ್ಥವಾಗಿ ಇಲ್ಲಿಯವರೆಗೂ ಎದುರಿಸಲು ಯಾವ ದೇಶದಿಂದಲೂ ಸಾಧ್ಯವಾಗಿಲ್ಲ. ಬಡ ದೇಶಗಳಲ್ಲಂತೂ ಸೋಂಕಿನ ವಿರುದ್ಧ ಹೋರಾಡುತ್ತಿರುವ ವೈದ್ಯ ಸಿಬಂದಿಗಳಿಗೆ ಪಿಪಿಇ ಕಿಟ್‌ಗಳ ಕೊರತೆ ಎದುರಾಗಿದ್ದು, ಜೀವ ಪಣಕ್ಕಿಟ್ಟು ಸೇವೆಗೈಯುತ್ತಿದ್ದಾರೆ. ಈ ಸಮಸ್ಯೆಯ ತೀವ್ರತೆಯನ್ನು ಅರಿತ ಮಲೇಷ್ಯಾದ 9ರ ಹರೆಯದ ಪೋರಿಯೊಬ್ಬಳು ಮಾದರಿಯಾಗುವಂತಹ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾಳೆ. ವೈದ್ಯರಿಗೆ ಅಗತ್ಯವಿರುವ ಪಿಪಿಇ ಕಿಟ್‌ಗಳನ್ನು ಸಿದ್ಧಪಡಿಸುತ್ತಿದ್ದಾಳೆ ಈ ಬಾಲೆ.
ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಅದೆಷ್ಟೋ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು ಸೂಕ್ತ ಪಿಪಿಇ ಕಿಟ್ (ಸ್ವಯಂ ಸಂರಕ್ಷಣಾ ಕಿಟ್)ಗಳು ಇಲ್ಲದೆ ಕಷ್ಟಪಡುತ್ತಿದ್ದಾರೆ. ಇದನ್ನು ಮನಗಂಡ ಮಲೇಷ್ಯಾದ ನೈರುತ್ಯಕ್ಕಿರುವ ನೆಗೆರಿ ಸೆಂಬಿಲಾನ್‌ನ 9 ವರ್ಷದ ಬಾಲಕಿ ನೂರ್‌ಅಫಿಯಾ ಕಿಸ್ಟಿನಾ ಜಮುjರಿ ಪಿಪಿಇ ಕಿಟ್‌ಗಳ ತಯಾರಿಕೆಗೆ ಮುಂದಾಗಿದ್ದಾಳೆ.
ಮಲೇಷ್ಯಾದ ಆಸ್ಪತ್ರೆಗಳಲ್ಲೂ ಸಹ ಪಿಪಿಇ ಕಿಟ್‌ಗಳ ಕೊರತೆ ಇದ್ದು, ಆರೋಗ್ಯ ಸಿಬಂದಿ ಸುರಕ್ಷತಾ ಸಾಧನಗಳಿಲ್ಲದೆ ತಮ್ಮ ಜೀವವನ್ನು ಅಪಾಯಕ್ಕೆ ಒಡ್ಡಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ವಿಚಾರ ತಿಳಿದ ನೂರ್‌ಅಫಿಯಾ ತತ್‌ಕ್ಷಣ ತಾಯಿಯ ಬಳಿ ಅಮ್ಮ ಕೋವಿಡ್-19 ಅಪಾಯಕಾರಿ ಎಂಬುದು ನನಗೆ ಗೊತ್ತು. ಆದರೆ ಆಸ್ಪತ್ರೆಗಳಲ್ಲಿ ಪಿಪಿಇ ಗೌನ್‌ಗಳಿಲ್ಲದೆ ಚಿಕಿತ್ಸೆ ನೀಡುತ್ತಿದ್ದಾರೆ. ಆದೂ ಮತ್ತೂ ಅಪಾಯ ಎಂಬ ಭಾವ ಕಾಡುತ್ತಿದೆ. ಹಾಗಾಗಿ ಅಂಥವರಿಗೆ ಗೌನ್ ಹೊಲಿದು ಕೊಡುವ ಮೂಲಕ ಸಹಾಯ ಹಸ್ತ ನೀಡುವ ಎಂದು ಕೇಳಿಕೊಂಡಿದ್ದಾಳೆ. ವೃತ್ತಿಯಲ್ಲಿ ಟೈಲರ್ ಆಗಿರುವ ನೂರ್‌ನ ತಾಯಿಯೂ ಬೆಂಬಲ ಸೂಚಿಸಿದ್ದು, ನೂರ್‌ಅಫಿಯಾ ಸ್ವತಃ ಪಿಪಿಇ ಕಿಟ್‌ಗಳನ್ನು ತಯಾರಿಸಿ ಆರೋಗ್ಯ ಕಾರ್ಯಕರ್ತರ ಆರೋಗ್ಯ ರಕ್ಷಣೆಗೆ ಮುಂದಾಗಿದ್ದಾಳೆ.
ಈವರೆಗೆ ಸುಮಾರು 250 ಪಿಪಿಇ ಗೌನ್‌ಗಳನ್ನು ಹೊಲಿದು ನೂರ್ ಸ್ಥಳೀಯ ಆಸ್ಪತ್ರೆಗಳಿಗೆ ನೀಡಿದ್ದು, ಇನ್ನು ನೂರಾರು ಪೀಸ್‌ಗಳನ್ನು ಹೊಲಿಯುವ ಸಿದ್ಧಪಡಿಸುತ್ತಿದ್ದಾಳೆ. ಅಗತ್ಯ ವಸ್ತುಗಳನ್ನೆಲ್ಲ ತಂದ ಪುಟಾಣಿ, ದಿನವೊಂದಕ್ಕೆ ನಾಲ್ಕು ಪಿಪಿಇ ಗೌನ್‌ಗಳನ್ನು ಹೊಲಿಯುತ್ತಿದ್ದಾಳೆ.