Advertisement

ಮಾಹಿತಿಗಾಗಿ ಪಿರಿಯಾಪಟ್ಟಣ ಪುರಸಭೆ ಎದುರು ಟಿವಿ ಅಳವಡಿಕೆ

12:43 PM Apr 07, 2017 | Team Udayavani |

ಪಿರಿಯಾಪಟ್ಟಣ: ಏ.30ರ ಒಳಗೆ ಕಂದಾಯ ಪಾವತಿಸಿದರೆ ಶೇ.5 ಹಾಗೂ ಮಾಜಿ ಯೋಧರಿಗೆ ಶೇ.10ರಷ್ಟು ರಿಯಾಯಿತಿ ನೀಡಲಾಗಿದೆ. ಕಂದಾಯ ಪಾವತಿಸಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಪುರಸಭೆ ಅಧ್ಯಕ್ಷ ವೇಣುಗೋಪಾಲ್‌ ಮನವಿ ಮಾಡಿದರು.

Advertisement

ಅಧ್ಯಕ್ಷರಾಗಿ 200 ದಿನಗಳು ಪೂರೈಸಿದ ಹಿನ್ನೆಲೆಯಲ್ಲಿ ಪಟ್ಟಣದ ಪುರಸಭೆ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ತಮ್ಮ ಅವಧಿಯಲ್ಲಿ ಪಕ್ಷ ಭೇದವಿಲ್ಲದೆ ಪಟ್ಟಣದ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ. ಪುರಸಭೆ ವ್ಯಾಪ್ತಿಯಲ್ಲಿನ ಮಾಹಿತಿಯನ್ನು ತಿಳಿಯಲು ವೆಬ್‌ಸೈಟ್‌ ತೆರೆಯಲಾಗಿದ್ದು, ಕಚೇರಿಯ ಮುಂಭಾಗ ಟೀವಿ ಮೂಲಕ ಮಾಹಿತಿ ವೀಕ್ಷಿಸಬಹುದಾಗಿದೆ ಎಂದರು.

ಮುಕ್ತ ಸಮಾಜ ನಿರ್ಮಿಸಲು ಪುರಸಭೆ ವತಿಯಿಂದ 9 ಸಾವಿರ ಹಾಗೂ ಸ್ವತ್ಛ ಭಾರತ ಅಭಿಯಾನದಡಿ 5 ಸಾವಿರ ರೂ.ಗಳನ್ನು ಶೌಚಾಲಯದ ನಿರ್ಮಾಣಕ್ಕೆ ನೀಡುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಕೋರಿದರು.

ಇ-ಸ್ವತ್ತಿನಲ್ಲಿ ಆಸ್ತಿ ಮಾಹಿತಿ: ಪುರಸಭಾ ವ್ಯಾಪ್ತಿಯ ಮೂಲಭೂತ ಸೌಲಭ್ಯ ತಲುಪಿಸಲು ಜನಮುಖೀ ಮತ್ತು ಪಾರದರ್ಶಕ ಆಡಳಿತ ನೀಡಿದ್ದು, ಪುರಸಭೆಯ ಆದಾಯದ ಮೂಲಗಳನ್ನು ಹೆಚ್ಚಿಸಿ ಆರ್ಥಿಕ ಸದೃಢತೆಗೆ ಕಾರ್ಯಕ್ರಮ ರೂಪಿಸಲಾಗಿದೆ. ಇ ಸ್ವತ್ತು ಘೋಷಣೆ ಮಾಡುವುದರ ಮೂಲಕ ಆಸ್ತಿಯ ಸಂಪೂರ್ಣ ಮಾಹಿತಿ ಸಿಗುತ್ತದೆ. ಇದರಿಂದಾಗಿ ಆಸ್ತಿಗಳಿಗೆ ಭದ್ರತೆ ಇರುತ್ತದೆ ಮತ್ತು ಕಾನೂನು ಬಾಹಿರವಾಗಿ ಪರಭಾರೆ ಮಾಡಲು ಸಾಧ್ಯವಾಗುವುದಿಲ್ಲ. ಈ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲೆಯಲ್ಲಿ ಪಟ್ಟಣವು 2ನೇ ಸ್ಥಾನದಲ್ಲಿದೆ ಎಂದರು.

8 ಕೋಟಿ ರೂ.ವೆಚ್ಚದಲ್ಲಿ ಮಳಿಗೆ: ಪುರಸಭೆ ಮಳಿಗೆಗಳ ಹರಾಜಿನಿಂದ 35 ಲಕ್ಷಕ್ಕೂ ಹೆಚ್ಚು ಆದಾಯ ಸಂಗ್ರಹಿಸಲಾಗಿದ್ದು, ಪುರಸಭೆಗೆ ತಿಂಗಳ ಬಾಡಿಗೆ ಆದಾಯವಾಗಿ 1.50 ಲಕ್ಷ ರೂ. ಬರುತ್ತಿದೆ. ಶಾಸಕರ ವಿಶೇಷ ಅನುದಾನದ  8 ಕೋಟಿ ರೂ.ಗಳನ್ನು ಮಳಿಗೆಗಳ ನಿರ್ಮಾಣಕ್ಕೆ ಬಳಸುತ್ತಿದ್ದು, ಬಸ್‌ನಿಲ್ದಾಣ, ಕೆ.ವೆಂಕಟೇಶ್‌ ಮಾರುಕಟ್ಟಗಳಲ್ಲಿ ತಲಾ 30 ಲಕ್ಷ ರೂ. ವೆಚ್ಚದಲ್ಲಿ  ಮಳಿಗೆ ನಿರ್ಮಿಸಲು ಕ್ರಿಯಾಯೋಜನೆ ಸಿದ್ಧಪಡಿಸ ಲಾಗಿದೆ ಎಂದು ತಿಳಿಸಿದರು.

Advertisement

ಸಾರ್ವಜನಿಕ ಸ್ಮಶಾನಕ್ಕಾಗಿ ಜಿಲ್ಲಾಡಳಿತಕ್ಕೆ ಪುರಸಭೆ ವತಿಯಿಂದ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತವು 20 ಗುಂಟೆ ಜಾಗವನ್ನು ಗುರುತಿಸಿ ಪುರಸಬಾ ವ್ಯಾಪ್ತಿಯ ಸಾರ್ವಜನಿಕ ಸ್ಮಶಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಪುರಸಭೆ ವತಿಯಿಂದ ಮೂಲಭೂತ ಸೌಲಭ್ಯ ಕಲ್ಪಿಸಿ ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಒಳಚರಂಡಿ ವ್ಯವಸ್ಥೆಗೆ 57 ಕೋಟಿ ರೂ.: ಪಟ್ಟಣದ ವ್ಯಾಪ್ತಿಯಲ್ಲಿ ಒಳ ಚರಂಡಿ ವ್ಯವಸ್ಥೆ ನಿರ್ಮಿಸಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು, 57 ಕೋಟಿ ರೂ.ಗಳ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ತ್ವರಿತಗತಿಯಲ್ಲಿ ಕಾಮಗಾರಿ ಪ್ರಾರಂಭಿಸ ಲಾಗುವುದು ಎಂದು ತಿಳಿಸಿದರು.

ನೀರಿನ ಸಮಸ್ಯೆ ಬಗೆಹರಿಸಲು 14. 52 ಲಕ್ಷ ರೂ.ಗಳ ವೆಚ್ಚದಲ್ಲಿ ಕೊಳವೆಬಾವಿಗಳನ್ನು ಕೊರೆಸಲಾಗಿದ್ದು, ಹರವೆಮಲ್ಲರಾಜ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗುವುದು. ಕಾವೇರಿ ನೀರು ದುರಸ್ತಿಗೆ 1 ಕೋಟಿ ರೂ. ಮೀಸಲಿಟ್ಟಿದ್ದು, ಪುರಸಬೆ ವ್ಯಾಪ್ತಿಗೆ ಬರುವ ನೂತನ ಗ್ರಾಮಗಳಿಗೂ ಮೂಲಭೂತ ಸೌಕರ್ಯ ಒದಗಿಸಲು ಶ್ರಮಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ನಂಜುಂಡಸ್ವಾಮಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next