Advertisement

ಉತ್ತಮ ಸೇವೆಗೆ ಖಾಸಗಿ ಸಿಟಿ ಬಸ್‌ ಚಾಲಕ ನಿರ್ವಾಹಕರ ಮಾಹಿತಿ ಸಂಗ್ರಹ

09:48 AM Aug 23, 2018 | Team Udayavani |

ಮಹಾನಗರ: ನಗರದಲ್ಲಿ ಸಂಚರಿಸುತ್ತಿರುವ ಖಾಸಗಿ ಸಿಟಿ ಬಸ್‌ಗಳಲ್ಲಿ ಕೆಲವು ನಿರ್ವಾಹಕರು ಮತ್ತು ಚಾಲಕರು ಕಾನೂನು ನಿಯಮಗಳನ್ನು ಗಾಳಿಗೆ ತೂರುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಅವುಗಳಿಗೆ ಕಡಿವಾಣ ಹಾಕುವ ಸಲುವಾಗಿ ಸಂಚಾರಿ ಪೊಲೀಸರು ಮತ್ತು ಬಸ್‌ ಮಾಲಕರ ಸಂಘದವರು ಚಾಲಕ, ನಿರ್ವಾಹಕರ ಮಾಹಿತಿ ಸಂಗ್ರಹಿಸಲು ನಿರ್ಧರಿಸಿವೆ.

Advertisement

ನಗರದಲ್ಲಿ ದಿನಂಪ್ರತಿ ಓಡಾಡುವ 363 ಖಾಸಗಿ ಸಿಟಿ ಬಸ್‌ಗಳ ಚಾಲಕರು, ನಿರ್ವಾಹಕರ ಹೆಸರು, ವಿಳಾಸ, ಆಧಾರ್‌ ಸಂಖ್ಯೆ ಸಹಿತ ಸಮಗ್ರ ಮಾಹಿತಿ ದಾಖಲಾತಿ ಮಾಡಿಕೊಳ್ಳುವುದಕ್ಕೆ ತೀರ್ಮಾನಿಸ ಲಾಗಿದೆ. ದತ್ತಾಂಶ ಕಲೆ ಹಾಕುವ ಸಲುವಾಗಿ ಖಾಸಗಿ ಸಿಟಿ ಬಸ್‌ ಮಾಲಕರ ಸಂಘವು ಚಾಲಕರು ಮತ್ತು ಮಾಲಕರಿಗೆ ಈಗಾಗಲೇ ಅರ್ಜಿಗಳನ್ನು ನೀಡಿದ್ದು, ಚಾಲಕ ಮತ್ತು ನಿರ್ವಾಹಕರ ಆಧಾರ್‌ ಕಾರ್ಡ್‌ನ್ನು ಪರಿಶೀಲಿಸಿ, ಅದರಲ್ಲಿ ನಮೂದಾಗಿರುವ ಆತನ ಹೆಸರು, ವಿಳಾಸ, ಫೋನ್‌ ನಂಬರ್‌ ದಾಖಲಿಸಬೇಕಿದೆ. ಜತೆಗೆ ಬಸ್‌ ಹೆಸರು, ಬಸ್‌ ರೂಟ್‌, ಬಸ್‌ ನಂಬರ್‌ ಸಹಿತ ಇನ್ನಷ್ಟು ಮಾಹಿತಿಗಳನ್ನು ಭರ್ತಿ ಮಾಡಿ ನೀಡಬೇಕಿದೆ.

ಈ ವ್ಯವಸ್ಥೆಯನ್ನು ಬೆಂಗಳೂರಿನ ಆಟೋ ರಿಕ್ಷಾ ಸಂಘಟನೆ ಜಾರಿಗೊಳಿ ಸಿದ್ದು, ಇದರಿಂದಾಗಿ ಅಕ್ರಮಗಳು ಕಡಿಮೆಯಾಗಿವೆ. ಹಾಗಾಗಿ ಇಲ್ಲಿಯೂ ಜಾರಿಗೊಳಿಸಲು ಚಿಂತಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿದ ಬಸ್‌ಗಳನ್ನು ಮುಟ್ಟುಗೋಲು ಹಾಕಲಾಗುತ್ತಿತ್ತು. ಇದರ ಪೆಟ್ಟು ನೇರವಾಗಿ ಬಸ್‌ ಮಾಲಕರ ಮೇಲೆ ಬೀಳುತ್ತಿದೆ.  ಅಕ್ರಮವೆಸಗಿದ ಬಸ್‌ ಚಾಲಕರ ಅಥವಾ ನಿರ್ವಾಹಕರಿಗೆ ನೇರವಾಗಿ ದಂಡ ಹಾಕಲು ಈ ವಿವರಗಳು ಸಹಕಾರಿಯಾಗಲಿವೆ.

ನಿರ್ವಾಹಕರಿಗೆ ಬರಲಿದೆ ಬ್ಯಾಡ್ಜ್ ವ್ಯವಸ್ಥೆ
ನಗರದಲ್ಲಿ ಓಡಾಡುವ ಖಾಸಗಿ ಬಸ್‌ ನಿರ್ವಾಹಕರ ಅಂಗಿಗಳಿಗೆ ಅವರ ಹೆಸರಿನ ಬ್ಯಾಡ್ಜ್ ಅಳವಡಿಸಲು ಚಿಂತಿಸಲಾಗಿದ್ದು, ಕೆಲವೇ ದಿನಗಳಲ್ಲಿಯೇ ಈ ವ್ಯವಸ್ಥೆ ಜಾರಿಗೆ ಬರಲಿದೆ. ಈಗಾಗಲೇ ಎಲ್ಲ ಸಿಟಿ ಬಸ್‌ಗಳಲ್ಲಿ ಎಲೆಕ್ಟ್ರಾನಿಕ್‌ ಟಿಕೆಟ್‌ ಮೆಷಿನ್‌ ನಿಂದ ಟಿಕೆಟ್‌ ನೀಡಲೇಬೇಕೆಂದು ಸಾರಿಗೆ ಇಲಾಖೆಯು ಕಳೆದ ವರ್ಷ ಸೆ. 1ರಿಂದ ಜಾರಿಗೆ ತಂದಿದೆ. ಆದರೂ ನಿಯಮಗಳನ್ನು ಗಾಳಿಗೆ ತೂರುವವರ ಸಂಖ್ಯೆ ಕಡಿಮೆಯಾಗಲಿಲ್ಲ. ಇದನ್ನು ತಡೆಯಲು ಬ್ಯಾಡ್ಜ್ ವ್ಯವಸ್ಥೆ ಸಹಕಾರಿಯಾಗಲಿದೆ. ಒಂದು ವೇಳೆ ನಿರ್ವಾಹಕ ನಿಯಮ ಪಾಲನೆ ಮಾಡದಿದ್ದರೆ ಪ್ರಯಾಣಿಕ ಆತನ ಹೆಸರನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲು ಸಹಕಾರಿಯಾಗಲಿದೆ.

ವರ್ಷಕ್ಕೊಂದು ಪಾಸ್‌ ವಿತರಣೆ
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಸ್‌ ಮಾಲಕರ ಸಂಘದ ವತಿಯಿಂದ ರಿಯಾಯಿತಿ ದರದಲ್ಲಿ ಪಾಸ್‌ ವಿತರಿಸುತ್ತಿದ್ದು, ನಿಯಮಗಳನ್ನು ಸಡಿಲಿಸಲು ಸಂಘ ತೀರ್ಮಾನಿಸಿದೆ. ಸದ್ಯ ಆರು ತಿಂಗಳಿಗೆ ಒಂದು ಪಾಸ್‌ ವಿತರಿಸುತ್ತಿದ್ದು, ಇದನ್ನು ಒಂದು ವರ್ಷಕ್ಕೆ ವಿಸ್ತರಿಸಲು ಚಿಂತಿಸಲಾಗುತ್ತಿದೆ. 

Advertisement

ಕಠಿನ ಕ್ರಮ
ನಿಯಮಗಳನ್ನು ಗಾಳಿಗೆ ತೂರುವ ಬಸ್‌ ನಿರ್ವಾಹಕರ, ಚಾಲಕರ ಮಾಹಿತಿಯನ್ನು ಸುಲಭವಾಗಿ ಕಲೆಹಾಕುವ ಸಲುವಾಗಿ ಸ್ವವಿವರದ ಮಾಹಿತಿ ಸಹಾಯವಾಗಲಿವೆ. ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಸಂಚಾರಿ ಪೊಲೀಸ್‌ ವಿಭಾಗ ಅಲಲ್ಲಿ ಬಸ್‌ ತಪಾಸಣೆ ನಡೆಸುತ್ತಿದ್ದು, ದಂಡ ವಿಧಿಸಲಾಗುತ್ತಿದೆ.
ಮಂಜುನಾಥ ಶೆಟ್ಟಿ,
ಎಸಿಪಿ ಟ್ರಾಫಿಕ್‌, ಮಂಗಳೂರು

ಸಭೆಯಲ್ಲಿ ಮಹತ್ವದ ನಿರ್ಧಾರ
ಖಾಸಗಿ ಬಸ್‌ ಮಾಲಕರ ಸಭೆಯು ಆ. 25ರಂದು ನಡೆಯಲಿದ್ದು, ಪ್ರಯಾಣಿಕರ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಚಾಲಕರು ಮತ್ತು ನಿರ್ವಾಹಕರು ಸಾರಿಗೆ ನಿಯಮಗಳನ್ನು ಪರಿಪಾಲನೆ ಮಾಡುವ ಸಲುವಾಗಿ ಯಾವೆಲ್ಲ ತೀರ್ಮಾನ ಕೈಗೊಳ್ಳಬಹುದು ಎಂಬುವುದರ ಬಗ್ಗೆ ನಿರ್ಧರಿಸುತ್ತೇವೆ.
-ದಿಲ್‌ರಾಜ್‌ ಆಳ್ವ, 
ಖಾಸಗಿ ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ 

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next