ಅಹಮದಾಬಾದ್: ತಮಿಳುನಾಡಿನ ಕೂನೂರು ಪ್ರದೇಶದಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಸಿಡಿಎಸ್(ಚೀಫ್ ಡಿಫೆನ್ಸ್ ಸ್ಟಾಪ್ ಜನರಲ್) ಬಿಪಿನ್ ರಾವತ್ ಅವರ ಬಗ್ಗೆ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಅಹಮದಾಬಾದ್ ಸೈಬರ್ ಕ್ರೈಮ್ ಸೆಲ್ ಪೊಲೀಸರು ಗುರುವಾರ(ಡಿಸೆಂಬರ್ 09) ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಆದರೆ ಈ ಹಿಂದಿನ ಅವಹೇಳನಕಾರಿ ಫೇಸ್ ಬುಕ್ ಪೋಸ್ಟ್ ವಿಚಾರದಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದು, ಜ.ರಾವತ್ ಅವರ ಕುರಿತ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದಾಗ ಈ ವಿಚಾರ ಬೆಳಕಿಗೆ ಬಂದಿರುವುದಾಗಿ ವರದಿ ವಿವರಿಸಿದೆ.
ಬಂಧಿತ ವ್ಯಕ್ತಿಯನ್ನು ಗುಜರಾತ್ ನ ಅಮ್ರೇಲಿ ಜಿಲ್ಲೆಯ ರಾಜುಲಾ ತಾಲೂಕಿನ ಭೇರೈ ಗ್ರಾಮದ ನಿವಾಸಿ ಶಿವಭಾಯಿ ರಾಮ್ ಎಂದು ಗುರುತಿಸಲಾಗಿದೆ. ಏತನ್ಮಧ್ಯೆ ಜನರಲ್ ರಾವತ್ ನಿಧನದ ಕುರಿತು ಈತ ಪೋಸ್ಟ್ ಮಾಡಿರುವ ವಿಷಯದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ರಾಮ್ ಇತ್ತೀಚೆಗೆ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಹಿಂದೂ ದೇವರು ಮತ್ತು ಜನಪ್ರತಿನಿಧಿಗಳ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ. ಈ ವಿಚಾರದಲ್ಲಿ ಬಂಧಿಸಿದಾಗ ಜನರಲ್ ರಾವತ್ ನಿಧನ ಸುದ್ದಿ ಕುರಿತು ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದ ವಿಚಾರ ಬೆಳಕಿಗೆ ಬಂದಿರುವುದಾಗಿ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಜಿತೇಂದ್ರ ಯಾದವ್ ತಿಳಿಸಿದ್ದಾರೆ.
ರಾಮ್ ವಿರುದ್ಧ ಎಫ್ ಐಆರ್ ದಾಖಲಿಸಿದ ನಂತರ ಸೈಬರ್ ಕ್ರೈಂ ಅಧಿಕಾರಿಗಳು ಅಮ್ರೇಲಿಯಲ್ಲಿ ಈತನನ್ನು ಬಂಧಿಸಿಲಾಗಿದೆ. ಈ ರೀತಿ ಆಕ್ಷೇಪಾರ್ಹ ಪೋಸ್ಟ್ ಗಳನ್ನು ಹಾಕುವ ಮೂಲಕ ಪ್ರಚಾರಕ್ಕೆ ಬಂದು ರಾಜಕೀಯದಲ್ಲಿ ನೆಲೆವೂರಬೇಕು ಎಂಬ ಇಚ್ಛೆ ಹೊಂದಿದ್ದ ಎಂಬುದಾಗಿ ತನಿಖೆಯಿಂದ ಬೆಳಕಿಗೆ ಬಂದಿರುವುದಾಗಿ ವರದಿ ವಿವರಿಸಿದೆ.