Advertisement

ಎರಡು ಖಾಸಗಿ ಸುದ್ದಿ ವಾಹಿನಿಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಬಾಲಿವುಡ್‌

09:00 PM Oct 12, 2020 | sudhir |

– ದೆಹಲಿ ಹೈಕೋರ್ಟ್‌ನಲ್ಲಿ ಬಾಲಿವುಡ್‌ ಚಿತ್ರ ನಿರ್ಮಾಣ ಸಂಸ್ಥೆಗಳಿಂದ ದಾವೆ
– ಎರಡು ಸುದ್ದಿವಾಹಿನಿಗಳ ನಾಲ್ವರು ನಿರೂಪಕರ ವಿರುದ್ಧ ಕೇಸ್‌
– ಶಾರುಖ್‌, ಆಮೀರ್‌, ಸಲ್ಮಾನ್‌, ದೇವಗನ್‌ ಸೇರಿ ಹಲವರ ಸಂಸ್ಥೆಗಳಿಂದ ದೂರು

Advertisement

ನವದೆಹಲಿ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಬೆನ್ನಲ್ಲೇ ಭುಗಿಲೆದ್ದಿದ್ದ ಡ್ರಗ್ಸ್‌ ದಂಧೆಯ ಕರಾಳ ಛಾಯೆಯಡಿ, ಇಡೀ ಬಾಲಿವುಡ್‌ ಚಿತ್ರರಂಗವನ್ನೇ ದೂಷಿಸಿದ್ದ ಖಾಸಗಿ ಸುದ್ದಿವಾಹಿನಿಗಳ ವಿರುದ್ಧ ಇಡೀ ಬಾಲಿವುಡ್‌ ಏಕಾಸ್ತ್ರವಾಗಿ ಕಾನೂನು ಸಮರ ಸಾರಿದೆ. ಈ ಸುದ್ದಿವಾಹಿನಿಗಳ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಾಲಿವುಡ್‌ನ‌ ಸೂಪರ್‌ಸ್ಟಾರ್‌ಗಳಾದ ಆಮಿರ್‌ ಖಾನ್‌, ಶಾರುಖ್‌ ಖಾನ್‌, ಸಲ್ಮಾನ್‌ ಖಾನ್‌, ಅಜಯ್‌ ದೇವಗನ್‌, ಅನಿಲ್‌ ಕಪೂರ್‌, ಫ‌ರ್ಹಾನ್‌ ಅಖ್ತರ್‌, ಕಬೀರ್‌ ಖಾನ್‌ ಸೇರಿದಂತೆ ಹಲವು ದಿಗ್ಗಜರ ಚಿತ್ರ ನಿರ್ಮಾಣ ಕಂಪನಿಗಳು, ಫಿಲ್ಮ್ ಆ್ಯಂಡ್‌ ಟೆಲಿವಿಷನ್‌ ಪ್ರೊಡ್ನೂಸರ್ಸ್‌ ಗಿಲ್ಡ್‌ ಆಫ್ ಇಂಡಿಯಾ (ಪಿಜಿಐ), ದ ಸಿನಿ ಆ್ಯಂಡ್‌ ಟಿವಿ ಆರ್ಟಿಸ್ಟ್‌ ಅಸೋಸಿಯೇಷನ್‌ (ಸಿಐಎನ್‌ಟಿಟಿಎ), ಇಂಡಿಯನ್‌ ಫಿಲಂ ಆ್ಯಂಡ್‌ ಟಿವಿ ಪ್ರೊಡ್ನೂಸರ್ಸ್‌ ಕೌನ್ಸಿಲ್‌ (ಐಎಫ್ಪಿಸಿ) ಮತ್ತು ಸ್ಕ್ರೀನ್‌ರೈಟರ್ಸ್‌ ಅಸೋಸಿಯೇಷನ್‌ (ಎಸ್‌ಡಬ್ಲೂಎ) ಒಟ್ಟಿಗೆ ಸೇರಿ ಈ ದಾವೆ ಹೂಡಿವೆ.

ಇದನ್ನೂ ಓದಿ:ಸಂಪತ್‌ ಕುಮಾರ್‌ ಹತ್ಯೆ ಪ್ರಕರಣ: ನಾಲ್ವರು ಪೊಲೀಸ್‌ ಕಸ್ಟಡಿಗೆ, ಓರ್ವನಿಗೆ ನ್ಯಾಯಾಂಗ ಬಂಧನ

ಆಕ್ಷೇಪಾರ್ಹ ಪದಗಳ ವಿರುದ್ಧ ಕಿಡಿ
ಯಾರೋ ಮಾಡಿದ ತಪ್ಪಿಗೆ ಇಡೀ ಬಾಲಿವುಡ್‌ ಅನ್ನೇ “ಕಲುಷಿತ’, “ಕೊಳಕು’, “ಹೊಲಸು’, “ಮಾದಕ ವ್ಯಸನಿಗಳ ತಾಣ’ ಎಂಬ ಪದಗಳನ್ನು ಈ ಸುದ್ದಿವಾಹಿನಿಗಳ ನಿರೂಪಕರು ಬಳಸಿದ್ದಾರೆ. ಅಲ್ಲದೆ, “ಜಗತ್ತಿನ ಸರ್ವಶ್ರೇಷ್ಠ ಸುಗಂಧದ್ರವ್ಯಗಳ ತಾಣವಾದ ಅರೇಬಿಯಾದಲ್ಲಿ ಮಾರಾಟವಾಗುವ ಎಲ್ಲಾ ಸುಗಂಧದ್ರವ್ಯಗಳನ್ನು ತಂದು ಒಟ್ಟಿಗೆ ಸುರಿದರೂ ಬಾಲಿವುಡ್‌ನ ಗಬ್ಬು ನಾತ ತೊಡೆದು ಹೋಗದು’ ಎಂಬಂಥ ಆಕ್ಷೇಪಾರ್ಹ ಸಾಲುಗಳನ್ನು ತಮ್ಮ ನಿರೂಪಣೆಗಳಲ್ಲಿ ಉಲ್ಲೇಖೀಸಿದ್ದಾರೆ. ಈ ಮೂಲಕ, ಬಾಲಿವುಡ್‌ನ‌ ಘನತೆಗೆ ಮಸಿ ಬಳಿಯುವ ಪ್ರಯತ್ನ ಮಾಡಲಾಗಿದೆ ಎಂದು ದಾವೆಯಲ್ಲಿ ಆರೋಪಿಸಲಾಗಿದೆ.

ಅರ್ಜಿದಾರರ ಕೋರಿಕೆಗಳೇನು?
– ವಾಹಿನಿಗಳಲ್ಲಿ ಯಾವುದೇ ಚರ್ಚಾ ಕಾರ್ಯಕ್ರಮ ನಡೆಸದಂತೆ ಈ ನಿರೂಪಕರ ಮೇಲೆ ನಿರ್ಬಂಧ ಹೇರಬೇಕು.
– ಕಾರ್ಯಕ್ರಮಗಳ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಾಕೀತು ಮಾಡಬೇಕು
– ಆ ಮಾರ್ಗಸೂಚಿಗಳ ಪ್ರಕಾರ, ಬಾಲಿವುಡ್‌ ವಿರುದ್ಧ ಈವರೆಗೆ ಮಾಡಲಾಗಿರುವ ಆರೋಪಗಳನ್ನು ಹಿಂಪಡೆಯಬೇಕು.
– ಈಗಾಗಲೇ ಪ್ರಸಾರವಾಗಿರುವ ಬಾಲಿವುಡ್‌ ಕುರಿತಾದ ಚರ್ಚಾ ಕಾರ್ಯಕ್ರಮಗಳಿಂದ ಆಕ್ಷೇಪಾರ್ಹ ಅಂಶಗಳನ್ನು ತೆಗೆದುಹಾಕುವಂತೆ ಸೂಚಿಸಬೇಕು

Advertisement

ಇತರೆ ಕಕ್ಷಿದಾರರು
ಆ್ಯಡ್‌ ಲ್ಯಾಬ್ಸ್ ಪ್ರೊಡಕ್ಷನ್‌, ಕೇಪ್‌ ಆಫ್ ಗುಡ್‌ ಫಿಲಂಸ್‌, ಧರ್ಮಾ ಪ್ರೊಡಕ್ಷನ್ಸ್‌ (ಕರಣ್‌ ಜೋಹರ್‌), ರೆಡ್‌ ಚಿಲ್ಲೀಸ್‌ ಎಂಟರ್‌ಟೈನ್‌ಮೆಂಟ್‌, ರಿಲಯನ್ಸ್‌ ಬಿಗ್‌ ಎಂಟರ್‌ಟೈನ್‌ಮೆಂಟ್‌, ರೋಹಿತ್‌ ಶೆಟ್ಟಿ ಪಿಕ್ಚರ್ಸ್‌, ರಾಯ್‌ ಕಪೂರ್‌ ಫಿಲಂಸ್‌, ವಿನೋದ್‌ ಚೋಪ್ರಾ ಫಿಲಂಸ್‌, ವಿಶಾಲ್‌ ಭರದ್ವಾಜ್‌ ಪಿಕ್ಚರ್ಸ್‌, ಯಶ್‌ರಾಜ್‌ ಫಿಲಂಸ್‌ ಸೇರಿದಂತೆ ಒಟ್ಟು 38 ಚಿತ್ರ ನಿರ್ಮಾಣ ಕಂಪನಿಗಳು ಹೈಕೋರ್ಟ್‌ ಮೊರೆಹೋಗಿವೆ.

Advertisement

Udayavani is now on Telegram. Click here to join our channel and stay updated with the latest news.

Next