Advertisement

ಸುಂದರ ಮೈಕಟ್ಟಿಗಾಗಿ…

06:20 AM Apr 20, 2018 | |

ಸುಂದರ ಮೈಕಟ್ಟಿಗಾಗಿ ಹಂಬಲಿಸುತ್ತ, ಡಯಟ್‌ ಮಾಡಿ ತೆಳ್ಳನೆ ಶರೀರವನ್ನು ಉಳಿಸಲು ಪ್ರಯತ್ನಿಸುತ್ತ, ಮುಖ, ಚರ್ಮ ಹಾಗೂ ಕೂದಲ ಸೌಂದರ್ಯವನ್ನು ಕಾಪಾಡುತ್ತ ಸುಂದರಾಂಗಿಯರಾಗಿ ಮೆರೆಯಲು ಬಯಸುತ್ತಾರೆ ನಮ್ಮ ಹೆಣ್ಣುಮಕ್ಕಳು. ಮೈಬಣ್ಣ ಕಪ್ಪೋ, ಬಿಳಿಯೋ, ಶರೀರ ತೀರಾ ತೆಳ್ಳಗೋ, ಗುಂಡು ಗುಂಡಗೋ ಹೇಗೇ ಇರಲಿ, ಸರ್ವಾಂಗ ಸುಂದರಿಯರಾಗಲು ಹೆಣಗುತ್ತಿರುತ್ತಾರೆ ಇವರು. ಕೃತಕವಾಗಿ ನೇರಗೊಳಿಸಿದ ಅಥವಾ ಸುರುಳಿಯಾಗಿಸಿದ, ಶಾಂಪೂ ಹಾಗೂ ಕಂಡೀಷನರ್‌ ಹಾಕಿ ತೇಲಿಬಿಟ್ಟ ಕೂದಲು, ಅದರಲ್ಲೂ ಕಲರಿಂಗ್‌, ನಾಜೂಕಾಗಿ ಉದ್ದಕ್ಕೆ ಬೆಳೆಸಿ ನೇಲ್‌ ಕಲರ್‌ ಅಥವಾ ನೇಲ್‌ ಆರ್ಟ್‌ ಬಿಡಿಸಿರುವ ಉಗುರುಗಳು, ನೋಡುಗರ ಗಮನ ಸೆಳೆಯುವ ಟ್ಯಾಟೂ… ಈ ತರ ವಿವಿಧ ರೀತಿಯ ಅಂದ ಹೆಚ್ಚಿಸುವ ಪ್ರಕ್ರಿಯೆಗಳಿಗೆ ಒಳಗಾಗುವ ಫ್ಯಾಶನ್‌ಪ್ರಿಯ ಹುಡುಗಿಯರು, ಫ್ಯಾಶನ್‌ಪ್ರಿಯರಲ್ಲದಿದ್ದರೂ ಅಂದವಾಗಿ ಕಾಣಲು ಇಚ್ಛಿಸುವವರು  ಮದುವೆಯಾದ ಕೂಡಲೇ ಅದು ಹೇಗೆ ಬದಲಾಗಿ ಬಿಡ್ತಾರೆ? ಒಮ್ಮಿಂದೊಮ್ಮೆಲೇ ಪ್ರಬುದ್ಧರಾದಂತೆ, ಜೀವನದಲ್ಲಿ ಜಿಗುಪ್ಸೆ ಬಂದಂತೆ, ಗಾಂಭೀರ್ಯ ತುಂಬಿದಂತೆ ವರ್ತಿಸಲು ಕಾರಣವೇನು? ಮದುವೆ ಹೆಣ್ಣನ್ನು ಬದಲಿಸುತ್ತದೆಯೆ? ವೈವಾಹಿಕ ಜೀವನದ ಜವಾಬ್ದಾರಿಗಳಿಂದಾಗಿ ಈ ಬದಲಾವಣೆಗಳು ತನ್ನಿಂತಾನಾಗಿಯೇ ಸಂಭವಿಸುತ್ತವೆಯೇ? ಅಂತೂ ಮದುವೆಯಾದ ಒಂದೆರಡು ವರ್ಷಗಳಲ್ಲಿ ಹೆಣ್ಣುಮಕ್ಕಳು ತಮ್ಮ ವಿವಾಹಪೂರ್ವ ಸಮಯಕ್ಕಿಂತ ಅಮೂಲಾಗ್ರವಾಗಿ ಬದಲಾಗಿರುತ್ತಾರೆ. ಹೊಸದಾಗಿ ನಿರ್ವಹಿಸಬೇಕಾದ ಜೀವನದ ಪಾತ್ರಗಳು, ತಾಯ್ತನ ಈ ಬದಲಾವಣೆಗೆ ಮುಖ್ಯ ಕಾರಣವಾಗಿರುತ್ತದೆ.

Advertisement

ಮದುವೆಯ ಮೊದಲು ವೈವಿಧ್ಯಮಯ ವಸ್ತ್ರಗಳನ್ನು ಧರಿಸುತ್ತಿದ್ದವರು ಸೀರೆ ಹಾಗೂ ಚೂಡಿದಾರ್‌ಗಳಿಗೆ ಬದಲಾಗುತ್ತಾರೆ. ಅತ್ತೆ, ಮಾವ ಹಾಗೂ ಗಂಡನ ಮಾತುಗಳಿಗೆ ಮಣಿದು ಕೆಲವರು ಹೇರ್‌ಸ್ಟೈಲ್‌, ಡ್ರೆಸ್ಸಿಂಗ್‌ ಸ್ಟೈಲ್‌ ಹಾಗೂ ಮೇಕಪ್‌ಗ್ಳಲ್ಲಿ ಸರಳತೆ ತರುತ್ತಾರೆ. ಇನ್ನು ಕೆಲವರು ಮನೆಯ ಜವಾಬ್ದಾರಿ, ಕಚೇರಿ ಕೆಲಸ ಇತ್ಯಾದಿ ಬಹುಮುಖ ಜವಾಬ್ದಾರಿಗಳಿಗೆ ಸಮಯ ಸಾಲದೇ ಫ್ಯಾಶನ್‌ನಿಂದ ದೂರ ಉಳಿಯುತ್ತಾರೆ. ಗರ್ಭಧಾರಣೆಯ ಅವಧಿಯಲ್ಲಿ ಮಹಿಳೆಯ ಶರೀರದ ಗಾತ್ರ ಹಾಗೂ ತೂಕಗಳಲ್ಲಿ ವ್ಯತ್ಯಾಸ ಉಂಟಾಗುವುದು ಸಹಜ. ಕೆಲವರು ಹೆರಿಗೆಯ ನಂತರ ತಮ್ಮ ಶರೀರವನ್ನು ಸಂಪೂರ್ಣ ನಿರ್ಲಕ್ಷಿಸಿಬಿಡುವ ಕಾರಣ ಶರೀರ ಸೌಂದರ್ಯ ನಷ್ಟವಾಗುತ್ತದೆ. ಅಡ್ಡಾದಿಡ್ಡಿ ಮೈಬೆಳೆದು ಬಿಡುತ್ತದೆ. ಮದುವೆಯಾದ ಮೇಲೆ, ಒಂದು ಮಗುವಾದ ಮೇಲೆ ಇನ್ನು ತಾವು ಚಂದ ವಾಗಿರ ಬೇಕೆಂದೇನೂ ಇಲ್ಲ ಎಂಬ ಭಾವನೆ ಕೆಲವರಲ್ಲಿ ಮೂಡಿ ತಮ್ಮ ಶರೀರದ ಬಗ್ಗೆ ಅಸಡ್ಡೆ ತೋರುತ್ತಾರೆ. ಇನ್ನು ಕೆಲವರು ತಮಗೆ ಯಾವುದಕ್ಕೂ ಸಮಯವಿಲ್ಲ, ತಮ್ಮ ಕುಟುಂಬವೇ ತಮಗೆ ಎಲ್ಲ ಎಂದು ಇತರರಿಗೂ ತಿಳಿಯಲಿ ಎಂಬಂತೆ ವರ್ತಿಸುತ್ತಾರೆ. ತಾವು ತಮ್ಮ ಬಗ್ಗೆಯೇ ಗಮನಹರಿಸಲಾರದಷ್ಟು ಬಿಝಿ, ತಾವು ಕುಟುಂಬದ ಬಗ್ಗೆ ಅತೀವ ಕಾಳಜಿ ಹೊಂದಿರುವವರು ಎಂದು ಇತರರು ತಿಳಿದುಕೊಂಡರೆ ಅದೇನೋ ಹೆಚ್ಚುಗಾರಿಕೆ ಎಂಬ ಭಾವನೆ ಅವರದ್ದು. 

ಮದುವೆಯ ನಂತರ ಹೆಣ್ಣಿನ ಬಾಹ್ಯ ರೂಪ ಬದಲಾಗಬೇಕೇ? 
ನಮ್ಮ ಸಂಸ್ಕೃತಿ-ಸಂಪ್ರದಾಯಗಳು ಮದುವೆಯಾದ ಹೆಣ್ಣಲ್ಲಿ ಕೆಲವು ಬದಲಾವಣೆಗಳನ್ನು ನಿರೀಕ್ಷಿಸುತ್ತದೆ. ಮುತ್ತೈದೆಯ ಲಕ್ಷಣಗಳಾದ ಆಭರಣಗಳನ್ನು ಅವಳು ಧರಿಸಿರಬೇಕು, ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಸೀರೆಯುಡಬೇಕು ಇತ್ಯಾದಿಗಳು ಆ ಪಟ್ಟಿಯ ಪ್ರಮುಖ ಆದ್ಯತೆಗಳಾಗಿರುತ್ತವೆ. ಸಾಂಪ್ರದಾಯಿಕ ಸಂದರ್ಭಗಳಲ್ಲಿ ಮಹಿಳೆ ಇದನ್ನು ಪಾಲಿಸುವುದು ಅಪೇಕ್ಷಣೀಯ. ಆದರೆ ಇಂದಿನ ಆಧುನಿಕ ಯುಗದಲ್ಲಿ ವಿವಿಧ ಸಂದರ್ಭಗಳಲ್ಲಿ, ಕೆಲಸದ ಅಗತ್ಯಗಳಿಗೆ ತಕ್ಕಂತೆ ಮಹಿಳೆ ತನ್ನ ವೇಷಭೂಷಣಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದುದು ಅನಿವಾರ್ಯವೂ ಹೌದು. ಇದನ್ನು ಮಹಾಪರಾಧವೆಂದು ಭಾವಿಸುವುದು ತಪ್ಪು$. ಆದರೆ ಮಹಿಳೆ ತನ್ನ ಪ್ರಾಯ ಹಾಗೂ ವೈವಾಹಿಕ ಸ್ಥಾನಮಾನಕ್ಕೆ ಚ್ಯುತಿ ಬಾರದಂತಹ ವಸ್ತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅಂದರೆ ಟೀನೇಜ… ಹುಡುಗಿಯರ ತರ ಬಟ್ಟೆ ಧರಿಸುವ ಬದಲು ಫ್ಯಾಶನೇಬಲ… ಆದರೂ ಪ್ರಬುದ್ಧತೆ ತೋರುವ ಬಟ್ಟೆಗಳನ್ನು ಧರಿಸಬೇಕು.ಶರೀರ ಪ್ರದರ್ಶನ ಮಾಡುವ, ಶರೀರದ ರೂಪ, ಗಾತ್ರಗಳಿಗೆ ಒಗ್ಗದ ಬಟ್ಟೆ ವಿವಾಹಿತ ಮಹಿಳೆಗೆ ಹಿತವಲ್ಲ. ಅಂದರೆ ಮಹಿಳೆಗೆ ಫ್ಯಾಶನ್‌ ಮಾಡಲೇಬಾರದೆಂದು ಕಟ್ಟಪ್ಪಣೆ ಮಾಡಬಾರದು. ಹಾಗೆಯೇ ಮಹಿಳೆ ತಾನಾಗಿ ಎÇÉಾ ಅಲಂಕಾರಗಳನ್ನೂ ತೊರೆದು ಸನ್ಯಾಸಿಯಂತಾಗಬಾರದು. ಮದುವೆಯೆಂಬುದು ಹೆಣ್ಣಿನ ವ್ಯಕ್ತಿತ್ವದ ಕಿರೀಟಕ್ಕೆ ಮೆರುಗು ನೀಡುವ ಚಿನ್ನದ ಗರಿ. ಅದು ಶಿಕ್ಷೆಯಾಗಬಾರದು, ಸನ್ಯಾಸವಾಗಬಾರದು. 

ಮದುವೆಯಾದವರು, ತಾಯಿಯಾದವರು ಸೌಂದರ್ಯವನ್ನು ಉಳಿಸಲು ಸಾಧ್ಯವೆ?
ಮದುವೆಯಾಯ್ತು, ಮಗುವಾಯ್ತು, ಇನ್ನು ಸೌಂದರ್ಯದ ಕಡೆ ಗಮನಹರಿಸುವ ಅಗತ್ಯವಿಲ್ಲ. ವೈವಾಹಿಕ ಜೀವನದ ನೂರು ಜವಾಬ್ದಾರಿಗಳ ಮಧ್ಯೆ ಅದಕ್ಕೆ ಸಮಯವೂ ಇಲ್ಲ ಎಂಬ ಧೋರಣೆ ಕೆಲವರದ್ದು. ಅವರ ಉದಾಸೀನ ಬೆಳೆದಂತೆ ಶರೀರವೂ ಅಡ್ಡಾದಿಡ್ಡಿ ಬೆಳೆಯುತ್ತ ಹೋಗುತ್ತದೆ. ಕೆಲವರು ಸ್ಥೂಲಕಾಯದವರಾಗಲು ಅವರು “ಕಸದ ಬುಟ್ಟಿಯ’ ಕೆಲಸ ಮಾಡುವುದೇ ಕಾರಣ. ಮನೆಯಲ್ಲಿ ಉಳಿದ ಆಹಾರ ಸುಮ್ಮನೆ ಹಾಳಾಗಬಾರದೆಂದು ತಿನ್ನುವವರು, ಮಕ್ಕಳು ತಿಂದು ಉಳಿದುದನ್ನು ತಿನ್ನುವವರು, ಹಸಿವಿಗೆ ತಿನ್ನುವವರಲ್ಲ, ಹೊಟ್ಟೆ ತುಂಬಿದ್ದರೂ ತಿನ್ನುವವರು. ಇವರಿಗೆ ಬೊಜ್ಜು ಬರುವುದರಲ್ಲಿ ಆಶ್ಚರ್ಯವಿಲ್ಲ. ಇನ್ನು ಕೆಲವು ಹೆಂಗಸರ ಊಟಕ್ಕೆ ನಿರ್ದಿಷ್ಟ ಸಮಯವಿಲ್ಲ. ಹೊತ್ತಲ್ಲದ ಹೊತ್ತಲ್ಲಿ ತಿನ್ನುವುದರಿಂದಲೂ ಬೊಜ್ಜು ಬರಬಹುದು. ಆಹಾರ ಸೇವನೆಯಲ್ಲಿ ಮಿತಿಯನ್ನು ಕಾಯ್ದುಕೊಂಡರೆ, ನಿರ್ದಿಷ್ಟ ಸಮಯದಲ್ಲಿ ಸಮತೋಲಿತ ಆಹಾರ ಸೇವಿಸಿದರೆ, ಸ್ವಲ್ಪ$ಮಟ್ಟಿಗೆ ವ್ಯಾಯಾಮ ಮಾಡಿದರೆ, ಎಲ್ಲಕ್ಕೂ ಮೊದಲು ತಮ್ಮ ನಕಾರಾತ್ಮಕ ಮನೋಭಾವ ಬದಲಿಸಿಕೊಂಡರೆ ಮಹಿಳೆಗೆ ತನ್ನ ಶರೀರ ಸೌಂದರ್ಯ ಉಳಿಸಿಕೊಳ್ಳಲು ಸಾಧ್ಯವಿದೆ.

ವಯಸ್ಸು ಶರೀರಕ್ಕೆ, ಮನಸ್ಸಿಗಲ್ಲ
ಮದುವೆಯಾದ ಮೇಲೆ ಪ್ರಬುದ್ಧತೆ ನಟಿಸುವ ಕೆಲವರಿದ್ದಾರೆ. ನಿಜವಾಗಿ ಅವರ ವ್ಯಕ್ತಿತ್ವದಲ್ಲಿ ಆ ಪ್ರಬುದ್ಧತೆ ಇದೆಯೆನ್ನಲಾಗುವುದಿಲ್ಲ. ಪ್ರಾಯ ಆದವರಂತೆ ವರ್ತಿಸುವುದೇ ಪ್ರಬುದ್ಧತೆ ಎಂಬುದು ಕೆಲವರ ಕಲ್ಪನೆ. ಇದರಿಂದಾಗಿ ಇಪ್ಪತ್ತು-ಮೂವತ್ತು ವಯಸ್ಸಿನವರು, ನಲುವತ್ತು-ಐವತ್ತು ವಯಸ್ಸಿನವರಂತೆ ಕಂಡುಬರುತ್ತಾರೆ. ಮನಸ್ಸಿನಲ್ಲಿ ಯೌವನವನ್ನು ಉಳಿಸಿಕೊಂಡರೆ ಮಾತ್ರ ಚುರುಕಾಗಿ ಲವಲವಿಕೆಯಿಂದ ಇರಲು ಸಾಧ್ಯ. ಮನಸ್ಸಿನ ಯುವತ್ವ ನಡೆನುಡಿಗಳಲ್ಲಿ ವ್ಯಕ್ತವಾಗುತ್ತದೆ. 

Advertisement

ಹಸನ್ಮುಖೀಗಳಾಗಿರಿ
ನಗುಮುಖ ವ್ಯಕ್ತಿತ್ವಕ್ಕೆ ಭೂಷಣ. ಹುಬ್ಬುಗಂಟಿಕ್ಕಿಕೊಂಡಿರುವುದು ಪ್ರಬುದ್ಧತೆಯ ಲಕ್ಷಣವೆಂಬುದು ತಪ್ಪು ಕಲ್ಪನೆ. ಎಲ್ಲವನ್ನೂ ಖುಷಿಯಿಂದ ಸಕಾರಾತ್ಮಕವಾಗಿ ಸ್ವೀಕರಿಸಿ, ಸವಾಲುಗಳ ಮುಂದೆ ಎದೆಗುಂದದೇ ಇರುವವರು ಚಿರಯೌವನಿಗರಂತೆ ಕಂಡು ಬರುತ್ತಾರೆ. ಸಮಸ್ಯೆಗಳು ಬಂದಾಗ ನೊಂದು, ಸೋತು, ಬಸವಳಿದವರಿಗೆ ಅಕಾಲ ವಾರ್ಧಕ್ಯ ಬಾಧಿಸುತ್ತದೆ. ಕುತ್ತಿಗೆಗೆ ಬಿಗಿದ ತಾಳಿಯನ್ನು ತಾವಾಗಿ ಉರುಳಾಗಿ ಪರಿವರ್ತಿಸದೇ, ಆಧುನಿಕ ಜಗತ್ತಿನ ಬದಲಾವಣೆಗಳಿಗೆ ಸ್ಪಂದಿಸಿಕೊಂಡು, ಉತ್ತಮ ಕೌಟುಂಬಿಕ ಜೀವನ ನಡೆಸಿ. ವಿವಾಹದಿಂದ ನಿಮ್ಮ ಬಾಹ್ಯ ಹಾಗೂ ಆಂತರಿಕ ವ್ಯಕ್ತಿತ್ವ ಮಸುಕಾಗುವ ಬದಲು ಹೆಚ್ಚೆಚ್ಚು ಹೊಳೆಯಲಿ.

– ಜೆಸ್ಸಿ ಪಿ. ವಿ.

Advertisement

Udayavani is now on Telegram. Click here to join our channel and stay updated with the latest news.

Next