ಹರಿಹರ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಜನೌಷಧ ಕೇಂದ್ರ ಶನಿವಾರ ಬಂದ್ ಆಗಿದ್ದರಿಂದ ಔಷಧ ಸಿಗದೆ ರೋಗಿಗಳ ಪರದಾಡಬೇಕಾಯಿತು. ವೈದ್ಯರು ಬರೆದುಕೊಟ್ಟ ಚೀಟಿ ಹಿಡಿದುಕೋಂಡು ಜನೌಷ ಕೇಂದ್ರದತ್ತ ಧಾವಿಸುತ್ತಿದ್ದ ರೋಗಿಗಳು ಆಡಿಟಿಂಗ್ ನಿಮಿತ್ತ “ಈ ದಿನ ರಜೆ’ ಎಂದು ಬಾಗಿಲ ಮೇಲೆ ಬರೆದದ್ದನ್ನು ಕಂಡು ಹಿಂತಿರುಗುತ್ತಿದ್ದರು. ಆಸ್ಪತ್ರೆಯಲ್ಲಿ ಆಡಿಟಿಂಗ್ ನಡೆಸುವ ಅಥವಾ ಆ ನೆಪದಲ್ಲಿಕೇಂದ್ರ ಬಂದ್ ಮಾಡುವ ಮೂಲಕ ಔಷಧ ದೊರೆಯದಂತೆ ಮಾಡಿರುವ ಬಗ್ಗೆ ಬಡ ರೋಗಿಗಳಿಗೆ ಹಿಡಿಶಾಪ ಹಾಕಿ ಸ್ಥಳದಿಂದ ನಿರ್ಗಮಿಸಿದರು.
ಲಾಕ್‌ಡೌನ್ ಅವಧಿಯಲ್ಲೂ ಜನೌಷಧ ಕೇಂದ್ರ ಅರ್ಧ ದಿನ ಮಾತ್ರ ಕಾರ್ಯ ನಿರ್ವಹಿಸಿದ್ದರಿಂದ ಸಾವಿರಾರು ರೋಗಿಗಳಿಗೆ ತೊಂದರೆಯಾಗಿತ್ತು. ಈ ಕುರಿತು ಪತ್ರಿಕೆಯಲ್ಲಿ ವರದಿ ಪ್ರಕಟವಾದ ನಂತರ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಕೇಂದ್ರ ನಿರ್ವಹಿಸುವ ಎಂಎಸ್‌ಐಎಲ್ ಅಧಿಕಾರಿಗಳಿಗೆ ನೋಟೀಸ್ ಕಳುಹಿಸಿ ಕೈತೊಳೆದುಕೊಂಡಿದ್ದರು. ಕಡಿಮೆ ಹಣದಲ್ಲಿ ಔಷಧ ಸಿಗುವುದೆಂದು ದೂರದ ಆಸ್ಪತ್ರೆಗೆ ಬರುವ ಬಹುತೇಕ ಬಡ, ಮಧ್ಯಮ ವರ್ಗದವರು ಜನೌಷ ಕೇಂದ್ರದ ಸೌಕರ್ಯ ಸಿಗದೆ ನಿರಾಶರಾಗುತ್ತಿದ್ದಾರೆ.
ಗ್ರಾಮಸ್ಥರಂತೂ ಔಷಧ ಖರೀದಿಸಲೆಂದೆ ಮರುದಿನ ಬೆಳಿಗ್ಗೆ ಮತ್ತೆ ಬರಬೇಕು. ತುರ್ತು ಇರುವವರು ಅನಿವಾರ್ಯವಾಗಿ ಖಾಸಗಿ ಅಂಗಡಿಗಳಲ್ಲಿ ಖರೀದಿಸಿದರೆ ಹಣವಿಲ್ಲದವರು ಔಷಧಿ ಇಲ್ಲದೆ ಕಾಯಿಲೆಯಿಂದ ನರಳಬೇಕಿದೆ ಎಂದು ಸಾಮಾಜಿಕ ಕಾರ್ಯಕರ್ತ ಬಿ. ಮುಗ್ಪುಮ್ ಆಕ್ರೋಶ ವ್ಯಕ್ತಪಡಿಸಿದರು.
ಜನೌಷಧ ಕೇಂದ್ರದಲ್ಲಿ ಒಬ್ಬರೇ ಸಿಬ್ಬಂದಿಯನ್ನು ನಿಯೋಜಿಸಿದ್ದು, ಅನಾರೋಗ್ಯ ಮತ್ತಿತರೆ ಅನಿವಾರ್ಯ ಕಾರಣ ಅವರು ರಜೆ ಹಾಕಿದರೆ ಕೇಂದ್ರ ಬಂದ್ ಮಾಡಲಾಗುತ್ತದೆ. ಕನಿಷ್ಠ ಮತ್ತೂಬ್ಬ ಸಿಬ್ಬಂದಿ ನೇಮಿಸಿಕೊಳ್ಳುವ ಅಲ್ಲದೆ ಕೇಂದ್ರಗಳ ಕಾರ್ಯನಿರ್ವಹಣೆ ಮೇಲೆ ನಿಗಾ ಇಡುವ ಮೂಲಕ ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯ ಸುಲಲಿತವಾಗಿ ತಲುಪುವಂತೆ ನೋಡಿಕೊಳ್ಳಬೇಕೆಂಬುದು ಜನರ ಆಗ್ರಹ.
ಆಡಿಟಿಂಗ್‌ಗೆಂದು ರಜೆ ಮಾಡುತ್ತೇವೆಂದು ನನಗೆ ಮಾಹಿತಿ ಕೊಟ್ಟಿಲ್ಲ. ಕೆಲಸದ ಅವಧಿಯಲ್ಲಿ ಬಂದ್ ಮಾಡಿ ಆಡಿಟಿಂಗ್ ನಡೆಸಿರುವ ಬಗ್ಗೆ ಹಾಗೂ ಮತ್ತೂಬ್ಬ ಸಿಬ್ಬಂದಿ ನೇಮಿಸಲು ಎಂಎಸ್ ಐಎಲ್ ಬೆಂಗಳೂರು ಕಚೇರಿಗೆ ಪತ್ರ ಬರೆಯುತ್ತೇನೆ.
-ಡಾ| ಎಲ್. ಹನುಮ ನಾಯ್ಕ, ಸಿಎಂಒ, ಸರಕಾರಿ ಆಸ್ಪತ್ರೆ, ಹರಿಹರ