Advertisement
ಸದ್ಯದ ಪರಿಸ್ಥಿತಿಯಲ್ಲಿ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ನಡೆಯುತ್ತಿದೆ. ಅದರ ಜೊತೆಗೆ ಐಪಿಎಲ್‌ನಂತಹ ತಪ್ಪಿಸಲು ಸಾಧ್ಯವೇ ಆಗದ ದೇಶೀಯ ಕ್ರಿಕೆಟ್! ಇಷ್ಟೆಲ್ಲವನ್ನು ಕ್ರಿಕೆಟಿಗರಿಗೆ ನಿಭಾಯಿಸಲು ಸಾಧ್ಯವಾಗುತ್ತ? ಇಲ್ಲ, ಸಾಧ್ಯವೇ ಇಲ್ಲ. ಆದ್ದರಿಂದ ಮೂರೂ ಮಾದರಿಯಲ್ಲಿ ಆಡುವಂತಹ ಕ್ರಿಕೆಟಿಗರು ಆಗಾಗ ವಿಶ್ರಾಂತಿ ಪಡೆಯುತ್ತ ಮುಂದುವರಿಯುತ್ತಿದ್ದಾರೆ. ಆದರೂ ಅವರ ಮೇಲಿನ ಒತ್ತಡಕ್ಕೆ ಇದು ಶಾಶ್ವತ ಪರಿಹಾರವಲ್ಲ.
Related Articles
Advertisement
ವಿರಾಟ್ ಕೊಹ್ಲಿಗೆ ಮೂರು ವರ್ಷ ಗಡುವು: ಕೊಹ್ಲಿ ಸಮಕಾಲೀನ ಕ್ರಿಕೆಟ್‌ನ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್ ಎನ್ನುವುದು ನಿರ್ವಿವಾದಿತವಾಗಿ ಸಾಬೀತಾಗಿದೆ. ಅವರ ನಾಯಕತ್ವದಲ್ಲಿ ಭಾರತ ವಿಶ್ವಮಟ್ಟದ ಕೂಟ ಗೆಲ್ಲಲು ವಿಫಲವಾಗಿದ್ದರೂ, ಮೂರೂ ಮಾದರಿಯಲ್ಲಿ ಅದ್ಭುತ ಪ್ರದರ್ಶನವನ್ನೇ ನೀಡಿದೆ. ಆದರೆ ಒಬ್ಬ ನಾಯಕನಾಗಿ, ಆಟಗಾರನಾಗಿ ಅವರು ದಣಿದಿದ್ದಾರೆ. ನಿರಂತರ ಪ್ರವಾಸ, ಒಂದರ ಹಿಂದೊಂದರಂತೆ ಬರುತ್ತಿರುವ ಸರಣಿಗಳಿಂದ ಅವರು ಲಯ ಕಳೆದುಕೊಂಡಿದ್ದಾರೆ. ಪರಿಣಾಮ ಸ್ವತಃ ಅವರೇ ಬಿಸಿಸಿಐ ಮೇಲೆ ಆಗಾಗ ರೇಗುತ್ತಿದ್ದಾರೆ. ಅಷ್ಟು ಮಾತ್ರವಲ್ಲ ಸದ್ಯ ಲಯ ಕಳೆದುಕೊಂಡಿದ್ದಾರೆ. ಬ್ಯಾಟ್‌ನಿಂದ ರನ್ ಬರುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಅವರೇ ನೀಡಿರುವ ಸುಳಿವಿನ ಪ್ರಕಾರ, ಇನ್ನು ಮೂರು ವರ್ಷದ ನಂತರ ಅವರು ಯಾವುದೋ ಮಾದರಿಯ ಕ್ರಿಕೆಟ್‌ಗೆ ತಿಲಾಂಜಲಿ ಹೇಳಲಿದ್ದಾರೆ. ಅದು ಟಿ20ಯೇ ಆಗಿರುವುದು ನಿಚ್ಚಳ.
ರೋಹಿತ್ ಶರ್ಮಗೆ ಶುರುವಾಗಿದೆ ಒತ್ತಡ: ಕಳೆದವರ್ಷದವರೆಗೆ ರೋಹಿತ್ ಶರ್ಮ ಏಕದಿನ ಮತ್ತು ಟಿ20ಯಲ್ಲಿ ಮಾತ್ರ ಆಡುತ್ತಿದ್ದರು. ಈ ಮಾದರಿಗೆ ಮಾತ್ರ ಹೇಳಿ ಮಾಡಿಸಿದ ಕ್ರಿಕೆಟಿಗ ಎನಿಸಿಕೊಂಡಿದ್ದರು. ಟೆಸ್ಟ್‌ನಲ್ಲಿ ಅವರಿಗೆ ಸ್ಥಾನವಿರಲಿಲ್ಲ. ಕೆ.ಎಲ್.ರಾಹುಲ್ ಕಳಪೆ ಲಯದ ಕಾರಣ ತಂಡದಿಂದ ಹೊರಹೋದಾಗ ಪ್ರಯೋಗಾರ್ಥವಾಗಿ ಅವರನ್ನು ಟೆಸ್ಟ್‌ನಲ್ಲಿ ಆರಂಭಿಕರನ್ನಾಗಿ ಕಣಕ್ಕಿಳಿಸಲಾಯಿತು. ದ.ಆಫ್ರಿಕಾ ವಿರುದ್ಧದ ಆ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ಅವರು ವಿಶ್ವದಾಖಲೆ ನಿರ್ಮಿಸಿದರು. ಈಗ ಅವರು ಮೂರೂ ಮಾದರಿಯ ಆಟಗಾರ. ಈಗ ಅವರೂ ಕೊಹ್ಲಿಯಂತದ್ದೇ ಒತ್ತಡ ಎದುರಿಸುತ್ತಿದ್ದಾರೆ. ಭವಿಷ್ಯದಲ್ಲಿ ಅವರು ಟೆಸ್ಟ್‌ನಿಂದಲೇ ಹೊರಬೀಳುವ ಸಾಧ್ಯತೆಯಿದೆ.
ಜಸ್ಪ್ರೀತ್ ಬುಮ್ರಾ ವೇಗಕ್ಕೆ ಕಡಿವಾಣ: ವರ್ತಮಾನದಲ್ಲಿ ವಿಶ್ವದ ಅತ್ಯಂತ ಅಪಾಯಕಾರಿ ಬೌಲರ್ ಜಸ್ಪ್ರೀತ್ ಬುಮ್ರಾ ಎಂದು ನಿರ್ದಾಕ್ಷಿಣ್ಯವಾಗಿ ಹೇಳಬಹುದು. ಘಟಾನುಘಟಿ ಬ್ಯಾಟ್ಸ್‌ಮನ್‌ಗಳನ್ನು ತಮ್ಮ ಯಾರ್ಕರ್‌ಗಳ ಮೂಲಕ ಮಣ್ಣುಮುಕ್ಕಿಸಿದ್ದಾರೆ. ಅವರು ಮೂರೂ ಮಾದರಿಯಲ್ಲಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇತ್ತೀಚೆಗಷ್ಟೇ ದೀರ್ಘಕಾಲ ಸೊಂಟನೋವು ಅನುಭವಿಸಿ, ವಿಶ್ರಾಂತಿ ಪಡೆದು ಅಂಕಣಕ್ಕೆ ಮರಳಿದ್ದಾರೆ. ವೈದ್ಯರ ಪ್ರಕಾರ ಅದು ವಿಪರೀತ ಒತ್ತಡದ ಫಲ. ಈಗ ಅವರ ಬೌಲಿಂಗ್ ಎಂದಿನಂತಿಲ್ಲ. ಮುಂದಿನ ದಿನಗಳಲ್ಲಿ ಅವರಿಗೂ ಈ ಒತ್ತಡವನ್ನು ನಿಭಾಯಿಸಲು ಯಾವುದೋ ಒಂದು ಮಾದರಿಗೆ ತಿಲಾಂಜಲಿ ಹೇಳಬೇಕಾದ ಅಗತ್ಯ ಎದುರಾಗುತ್ತದೆ. ಬಹುಶಃ ಟೆಸ್ಟ್‌ನಿಂದ ಅವರು ಹೊರಬೀಳಬಹುದು.
ಶಿಖರ್ ಧವನ್ ಈಗಾಗಲೇ ಟೆಸ್ಟ್‌ನಿಂದ ಹೊರಕ್ಕೆ: ಒಂದು ಕಾಲದಲ್ಲೂ ಮೂರೂ ಮಾದರಿಯ ತಂಡದ ಆರಂಭಿಕರಾಗಿದ್ದರು. ಪರಿಸ್ಥಿತಿ ಈಗ ಬದಲಾಗಿದೆ. ಕಳಪೆ ಲಯದ ಕಾರಣ ಟೆಸ್ಟ್‌ನಿಂದ ಹೊರಬಿದ್ದಿದ್ದಾರೆ. ಅವರ ಜಾಗಕ್ಕೆ ಬಂದ ಮಾಯಾಂಕ್ ಅಗರ್ವಾಲ್, ರೋಹಿತ್ ಶರ್ಮ ಗಟ್ಟಿಯಾಗಿ ಕಚ್ಚಿಕೊಂಡಿದ್ದಾರೆ. ಅದು ಸಾಲದೆಂಬಂತೆ ಯುವ ಆಟಗಾರ ಪೃಥ್ವಿ ಶಾ ಬೇರೆ ಹಾಜರಾಗಿದ್ದಾರೆ. ಇತ್ತೀಚೆಗೆ ಮತ್ತೆ ಲಯದಿಂದ ನಳನಳಿಸುತ್ತಿರುವ ಕೆ.ಎಲ್.ರಾಹುಲ್ ಮತ್ತೆ ಟೆಸ್ಟ್ ತಂಡಕ್ಕೆ ಹಿಂತಿರುಗುವ ದಟ್ಟ ಸಾಧ್ಯತೆಯಿದೆ. ಆದ್ದರಿಂದ ಧವನ್ ಟೆಸ್ಟ್ ಆಟ ಶಾಶ್ವತವಾಗಿ ಮುಗಿದಿದೆ ಎನ್ನಲಡ್ಡಿಯಿಲ್ಲ.
ರಿಷಭ್ ಪಂತ್ ತಂಡದಿಂದಲೇ ಹೊರಕ್ಕೆ?: ಧೋನಿಯ ಸ್ಥಾನವನ್ನು ತುಂಬಬಲ್ಲ ವಿಕೆಟ್‌ಕೀಪರ್/ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದ ರಿಷಭ್ ಪಂತ್, ಈಗ ಸಂಪೂರ್ಣ ಕಳೆಗುಂದಿದ್ದಾರೆ. ಅವರು ತಂಡದಿಂದ ಪೂರ್ಣವಾಗಿ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ತಂಡದಲ್ಲಿರುವ ವಿಪರೀತ ಪೈಪೋಟಿ, ವೈಫಲ್ಯವನ್ನು ಸಹಿಸಲಾರದ ಅಭಿಮಾನಿ ಬಳಗ, ಅವಕಾಶಕ್ಕಾಗಿ ಕಾದು ಕುಳಿತಿರುವ ಇತರೆ ಆಟಗಾರರು…ರಿಷಭ್ ಭಾರತ ತಂಡದಲ್ಲಿ ಆಡುವುದು ಇನ್ನೆಷ್ಟು ದಿನ ಎಂಬ ಪ್ರಶ್ನೆ ಮಾತ್ರ ಈಗಿರುವುದು.