ನವದೆಹಲಿ: ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯ ವಿರುದ್ಧ ದೇಶದ ಹಲವೆಡೆ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಉದ್ಯಮಿ ಆನಂದ್ ಮಹೀಂದ್ರ ಅವರು “ಅಗ್ನಿವೀರರಿಗೆ ಉದ್ಯೋಗ ನೀಡುವ” ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಪೃಥ್ವಿ ಅಂಬಾರ್ ನಟನೆಯ ‘ದೂರದರ್ಶನ’ ಟೈಟಲ್ ಟೀಸರ್ ಪ್ರಸಾರ…
ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಹಿಂಸಾಚಾರ ನಡೆಯುತ್ತಿರುವ ಬಗ್ಗೆ ಮಹೀಂದ್ರ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ದೇಶದ ಸೇನೆಯಲ್ಲಿ ನಾಲ್ಕು ವರ್ಷಗಳ ಕಾಲ ಸೇವೆಯನ್ನು ಪೂರೈಸಿದ ಅಗ್ನಿವೀರರಿಗೆ ಉದ್ಯೋಗಾವಕಾಶ ಕಲ್ಪಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಸೇನೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಅಗ್ನಿವೀರರು ಶಿಸ್ತು ಮತ್ತು ಕೌಶಲವನ್ನು ಕಲಿಯುವಂತೆ ಮಾಡುತ್ತದೆ. ಹೀಗೆ ಕೌಶಲ ಹೊಂದಿರುವ ಅಗ್ನಿವೀರರಿಗೆ ಮಹೀಂದ್ರಾ ಸಮೂಹ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಿಕೊಡಲಾಗುತ್ತದೆ. ಇದರಿಂದ ನಮಗೆ ಸಮರ್ಥ ಯುವ ಜನತೆ ಸಿಕ್ಕಂತಾಗುತ್ತದೆ ಎಂದು ಆನಂದ್ ಮಹೀಂದ್ರ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಆನಂದ್ ಮಹೀಂದ್ರ ಬೆನ್ನಲ್ಲೇ ಗೋಯೆಂಕಾ ಆಫರ್:
ಉದ್ಯಮಿ ಆನಂದ್ ಮಹೀಂದ್ರ ಅವರ ಟ್ವೀಟ್ ಅನ್ನು ಉಲ್ಲೇಖಿಸಿ ಆರ್ ಪಿಜಿ ಗ್ರೂಪ್ ಮುಖ್ಯಸ್ಥ ಹರ್ಷ ಗೋಯೆಂಕಾ ಕೂಡಾ ಅಗ್ನಿವೀರರಿಗೆ ಉದ್ಯೋಗಾವಕಾಶ ನೀಡುವ ಆಫರ್ ನೀಡಿದ್ದಾರೆ. ಇದೇ ರೀತಿ ಇನ್ನುಳಿದ ಕಾರ್ಪೋರೇಟ್ ಸಂಸ್ಥೆಗಳು ಕೂಡಾ ಹೀಗೆ ಕೈಜೋಡಿಸುವ ಮೂಲಕ ನಮ್ಮ ಯುವಕರಿಗೆ ಭವಿಷ್ಯದ ಉದ್ಯೋಗದ ಭರವಸೆ ನೀಡಬೇಕಾಗಿದೆ ಎಂದು ಗೋಯೆಂಕಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.