ಪುತ್ತೂರು: ಸರಿಸುಮಾರು 25 ವರ್ಷಗಳ ಬಳಿಕ ಪುತ್ತೂರಿನ ರಾಜಬೀದಿಯಲ್ಲಿ ಯುವ ಹೆಜ್ಜೆಗಳ ಠೇಂಕಾರ ಮೂಡಿಬಂದಿದೆ.
ಗುರುವಾರ ಪುತ್ತೂರಿನಲ್ಲಿ ಆರಂಭಗೊಂಡ ರಾಜ್ಯಮಟ್ಟದ ಯುವಜನ ಮೇಳಕ್ಕೆ ಪೂರ್ವಭಾವಿಯಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯವರೆಗೆ ಅದ್ದೂರಿ ಮೆರವಣಿಗೆ ನಡೆಯಿತು.
1993ರಲ್ಲಿ ವಿನಯ ಕುಮಾರ್ ಸೊರಕೆ ಶಾಸಕತ್ವದ ಅವಧಿಯಲ್ಲಿ ಯುವಕ ಮಂಡಲಗಳ ನೇತೃತ್ವದಲ್ಲಿ ರಾಜ್ಯಮಟ್ಟದ ಯುವಜನ ಮೇಳ ನಡೆದಿತ್ತು. ಇದೀಗ ಮತ್ತೂಮ್ಮೆ ಪುತ್ತೂರಿನಲ್ಲಿ ರಾಜ್ಯಮಟ್ಟದ ಯುವಜನ ಮೇಳ ಆಯೋಜನೆಗೊಂಡಿದ್ದು, ಯುವೋ ತ್ಸಾಹದ ಕಳೆ ಮಡುಗಟ್ಟಿದೆ. ಜನವರಿಯಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ ಪುತ್ತೂರು ತಾಲೂಕಿನ ಸವಣೂರಿನಲ್ಲಿ ನಡೆದಿದ್ದು, ಬೆನ್ನಿಗೇ ರಾಜ್ಯಮಟ್ಟದ ಮೇಳವೂ ಪುತ್ತೂರಿನ ಹೆಗಲಿಗೆ ಸಿಕ್ಕಿದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ ತೆಂಗಿನಕಾಯಿ ಒಡೆಯುವ ಮೂಲಕ ದೇವರಮಾರು ಗದ್ದೆಯಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು. ಮುಂಭಾಗದಲ್ಲಿ ಕೊಂಬು, ಕಲ್ಲಡ್ಕದ ಗೊಂಬೆ, ಕೀಲು ಕುದುರೆ, ವಾದ್ಯಮೇಳ, ಸುದಾನ ಶಾಲೆಯ ಸ್ಕೌಟ್ ಗೈಡ್ಸ್, ಗೊರವರ ಕುಣಿತ, ಬೆಟ್ಟಂಪಾಡಿಯ ಸ್ಕೌಟ್ ಆ್ಯಂಡ್ ಗೈಡ್ಸ್‌ನ ಬ್ಯಾಂಡ್ ತಂಡ, ಕಾಸರಗೋಡಿನ ಮಹಿಳಾ ಚಂಡೆ, ಸಿಂಗಾರಿ ಮೇಳ, ಸಂತ ಫಿಲೋಮಿನಾ ಕಾಲೇಜಿನ ಎನ್ನೆಸೆಸ್ ತಂಡ, ಶಿವಮೊಗ್ಗ ಜಿಲ್ಲೆಯ ಡೊಳ್ಳು ಕುಣಿತ, ಉಪ್ಪಿನಂಗಡಿ ಇಂದ್ರಪ್ರಸ್ಥ ಶಾಲೆಯ ಸ್ಕೌಟ್ ಆ್ಯಂಡ್ ಗೈಡ್ಸ್, ಸೋಮನ ಕುಣಿತ, ಸಹಿತ ಹಲವು ತಂಡಗಳು ಅನುಸರಿಸಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯಿಂದ ಹೊರಟ ಮೆರವಣಿಗೆ, ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಮುಂಭಾಗದಿಂದ, ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣವಾಗಿ ಮುಖ್ಯರಸ್ತೆಗೆ ಸೇರಿತು. ಬಳಿಕ ಮುಖ್ಯರಸ್ತೆಯಿಂದಲೇ ಸಾಗಿ, ಬೊಳುವಾರು, ಮಂಜಲ್ಪಡ್ಪು ಸುದಾನ ವಸತಿಯುತ ಶಾಲಾ ಆವರಣವನ್ನು ಪ್ರವೇಶಿಸಿತು. ಬಳಿಕ 4 ದಿನಗಳ ಕಾಲ ನಡೆಯಲಿರುವ ಯುವಜನ ಮೇಳದ ಉದ್ಘಾಟನ ಸಮಾರಂಭ ಆರಂಭಗೊಂಡಿತು.
ನೀರಿನ ವ್ಯವಸ್ಥೆ
ಮಧ್ಯಾಹ್ನ 3.45ಕ್ಕೆ ಯುವಜನ ಮೇಳದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸುಮಾರು ಮುಕ್ಕಾಲು ಗಂಟೆ ಬಿಸಿಲಿನಲ್ಲಿ ಕಾದು ಕುಳಿತ ಯುವಕರಿಗೆ ಟೊಪ್ಪಿ ನೀಡಲಾಗಿತ್ತು. ನಾಯಕರ ತಲೆಯಲ್ಲಿ ಹುಬ್ಬಳ್ಳಿಯ ಪೇಟ ರಾರಾಜಿಸುತ್ತಿತ್ತು. ಮೆರವಣಿಗೆ ಸಾಗಿ ಬಂದ ದಾರಿ ಯುದ್ಧಕ್ಕೂ ಸ್ವಯಂ ಸೇವಕರು ನೀರು ವಿತರಣೆ ಮಾಡುತ್ತಿದ್ದರು.