ನವದೆಹಲಿ: 2019ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ವಿವಿಪ್ಯಾಟ್(ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್) ಮತಯಂತ್ರಗಳ ಬಳಕೆಯಾಗಲಿದೆ. ನೂತನ ಎಲೆಕ್ಟ್ರಾನಿಕ್ ಮತಯಂತ್ರವಾದ ವಿವಿಪ್ಯಾಟ್ ಖರೀದಿಗಾಗಿ 3,174 ಕೋಟಿ ರೂಪಾಯಿ ಬಿಡುಗಡೆ ಮಾಡಲು ಸಂಪುಟ ಅನುಮೋದನೆ ನೀಡಿರುವುದಾಗಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ನಡೆದ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ವಿವಿಪ್ಯಾಟ್ ಮತಯಂತ್ರ ಬಳಸಲಾಗಿತ್ತು ಎಂಬುದನ್ನು ಸ್ಮರಿಸಿಕೊಳ್ಳಬಹುದಾಗಿದೆ.
ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಚುನಾವಣಾ ಆಯೋಗದ ಮನವಿಗೆ ಕೇಂದ್ರ ಸರಕಾರ ಒಪ್ಪಿದ್ದು 16.15 ಲಕ್ಷ ವಿವಿಪ್ಯಾಟ್ ಮತಯಂತ್ರಗಳ ಖರೀದಿಗಾಗಿ 3,173 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಕ್ಯಾಬಿನೆಟ್ ಸಭೆಯ ನಂತರ ಅರುಣ್ ಜೇಟ್ಲಿ ಮಾಹಿತಿ ನೀಡಿದ್ದಾರೆ.
ಚುನಾವಣೆಯಲ್ಲಿ ಈಗ ಉಪಯೋಗಿಸಲಾಗುತ್ತಿರುವ ಇವಿಎಂ ಮತಯಂತ್ರವನ್ನು ಹ್ಯಾಕ್ ಮಾಡಬಹುದಾಗಿದೆ ಎಂದು ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿದ ಬಳಿಕ ಕೇಂದ್ರ ಸರ್ಕಾರ ನೂತನ ಮಾದರಿಯ ಮತಯಂತ್ರ ಖರೀದಿಗೆ ಮುಂದಾಗಿದೆ ಎಂದು ವರದಿ ತಿಳಿಸಿದೆ.
ಅಲ್ಲದೇ 2013ರಲ್ಲಿ ಸುಪ್ರೀಂಕೋರ್ಟ್ ಕೂಡಾ ಕೇಂದ್ರ ಚುನಾವಣಾ ಆಯೋಗ ನೂತನ ಮಾದರಿಯ ಮತಯಂತ್ರವನ್ನು(ವಿವಿಪ್ಯಾಟ್) ಉಪಯೋಗಿಸಬೇಕೆಂದು ಸೂಚಿಸಿತ್ತು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಹೊಸ ಮಾದರಿಯ ಮತಯಂತ್ರಗಳಿಂದಲೇ ಚುನಾವಣೆ ನಡೆಸಬೇಕು ಎಂದು ಹೇಳಿತ್ತು. ಕಳೆದ ವಾರ ಮತ್ತೆ ಸುಪ್ರೀಂಕೋರ್ಟ್, ವಿವಿಪ್ಯಾಟ್ ಮತಯಂತ್ರ ಬಳಕೆ ಕುರಿತಂತೆ ವಿಳಂಬ ನೀತಿ ಅನುಸರಿಸುತ್ತಿರುವುದು ಯಾಕೆ ಎಂದು ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು.
ದೇಶದಲ್ಲಿ ನಡೆಯಲಿರುವ ಎಲ್ಲಾ ಚುನಾವಣೆಗಳಲ್ಲಿಯೂ ವಿವಿಪ್ಯಾಟ್ ಉಪಯೋಗಿಸುವಂತೆ ಆದೇಶ ನೀಡಬೇಕೆಂದು ಬಿಎಸ್ಪಿಯ ಮಾಯಾವತಿ ಸೇರಿದಂತೆ ವಿಪಕ್ಷಗಳು ಸುಪ್ರೀಂಕೋರ್ಟ್ ನಲ್ಲಿ ಮನವಿ ಮಾಡಿಕೊಂಡಿದ್ದವು. ಒಂದು ವೇಳೆ ವಿವಿ ಪ್ಯಾಟ್ ಉಪಯೋಗಿಸುವುದು ಅಸಾಧ್ಯ ಎಂದಾದರೆ ಭಾರತ ಮತ್ತೆ ಬ್ಯಾಲೆಟ್ ಪೇಪರ್ ಉಪಯೋಗಿಸಬೇಕಾಗುತ್ತದೆ ಎಂದು ವಾದಿಸಿದ್ದವು.
ಏನಿದು ವಿವಿಪ್ಯಾಟ್?
ಮತಯಂತ್ರದಲ್ಲಿ ತಾನು ಇಚ್ಚಿಸಿದ ಅಭ್ಯರ್ಥಿಯ ಮುಂದಿನ ಗುಂಡಿ ಒತ್ತಿದ ಕೂಡಲೇ ವಿವಿಪ್ಯಾಟ್ ಯಂತ್ರದಲ್ಲಿ ಅಭ್ಯರ್ಥಿಯ ಕ್ರಮ ಸಂಖ್ಯೆ, ಹೆಸರು, ಚಿಹ್ನೆ ಜತೆಗೆ ಮತಹಾಕಿದ ಬಗ್ಗೆ ವಿವಿಪ್ಯಾಟ್ ಯಂತ್ರದಲ್ಲಿ 7 ಸೆಕೆಂಡ್‌ಗಳ ಕಾಲ ಪ್ರದರ್ಶನವಾಗಲಿದೆ. ನಂತರ ಮತದಾನ ಚೀಟಿ ಮುದ್ರಿತವಾಗಿ ಯಂತ್ರದೊಳಗೆ ಸೇರಲಿದೆ. ಮತದಾನದ ಗೌಪ್ಯತೆ ಕಾಯ್ದುಕೊಳ್ಳಬೇಕಿರುವುದರಿಂದ ಮತದಾನ ಖಾತ್ರಿಯ ಮುದ್ರಿತ ಚೀಟಿ ಹೊರಗೆ ಕೊಂಡೊಯ್ಯಲು ಅವಕಾಶ ಇಲ್ಲ.