Advertisement

ಪಾದರಕ್ಷೆ ಹೊಲಿಯುವ ರಾಣಿಗೆ ಸನ್ಮಾನ

01:40 PM May 18, 2019 | Team Udayavani |

ಹಾವೇರಿ: ಕೆಇಬಿ ಕಾರ್ಮಿಕ ಸಂಘ ಇತ್ತೀಚೆಗೆ ನಡೆದ ಕಾರ್ಮಿಕ ದಿನದಂದು ಪಾದರಕ್ಷೆ ಹೊಲಿಯುವ ಮಹಿಳೆ ‘ರಾಣಿ’ ಅವರನ್ನು ಸನ್ಮಾನಿಸಿರುವುದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

Advertisement

ನಗರದ ಸಿದ್ಧಪ್ಪ ರಸ್ತೆ ಬಳಿ ಮಳೆ, ಬಿಸಿಲು, ಧೂಳುಗಳ ಮಧ್ಯೆ ಕುಳಿತು ಪಾದರಕ್ಷೆ ಹೊಲಿಯುವ ರಾಣಿ ಅರ್ಜುನ್‌ ಮೂಲತಃ ಪಾಂಡಿಚೇರಿ ಪ್ರಾವ್ಹೆನ್ಸಿಯ ಗೋರಿಮೂಡಿ ಗ್ರಾಮದವರು. ಮೂರು ಮಕ್ಕಳ ತಾಯಿ. ಆರು ಮೊಮ್ಮಕ್ಕಳು. 9ನೇ ತರಗತಿವರೆಗೆ ಓದಿರುವ ಸುಶಿಕ್ಷಿತೆ. ತಂದೆ ಸೆಲ್ವ್ರಾಜ, ತಾವಿ ವೀರಮ್ಮ. 53 ಪ್ರಾಯದ ರಾಣಿಯವರ ಪತಿ ಅರ್ಜುನ್‌ ಸೇಲಂ ಇಲ್ಲಿಯ ನಗರಸಭೆ ಕಾರ್ಮಿಕ ಹಾಗೂ ರಂಗಭೂಮಿ ಕಲಾವಿದ.

1984ರಲ್ಲಿ ಪಾಂಡಿಚೇರಿಯಿಂದ ಬಂದು ತಮಿಳುನಾಡಿನ ಅರ್ಜುನ್‌ ಅವರನ್ನು ಬೆಂಗಳೂರಿನಲ್ಲಿ ಮದುವೆಯಾದರು. ಅವರ ಮದುವೆ ಆದ ಒಟ್ಟು ಖರ್ಚು 400 ರೂ. ಮಾತ್ರ. ಪ್ರತಿ ದಿನ ಬೆಳಗ್ಗೆ 6ರಿಂದ ಸೂರ್ಯಾಸ್ತದವರೆಗೆ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿರುವ ರೇಣುಕಾ ದರ್ಶಿನಿ ಬದಿಗೆ ನಿತ್ಯ ಪಾದರಕ್ಷೆ ಹೊಲಿಯುವ ಕಾಯಕ ಮಾಡುತ್ತಾರೆ. ಕಾಯಕದ ತಪಸ್ಸಿನ ಫಲದಿಂದಲೇ ನಡೆಯುತ್ತಿದೆ ಅವರ ಉಪಜೀವನ.

ಕಾರ್ಮಿಕ ಸನ್ಮಾನದ ಬಗ್ಗೆ ಪ್ರಸ್ತಾಪಿಸಿದಾಗ ‘ನಮ್ಮ ಕೈ ಕಾಲೇ ನಮ್ಮ ದುಡಿಯುವ ಆಳುಗಳು’ ಎಂದು ಮಾರ್ಮಿಕವಾಗಿ ಉತ್ತರಿಸಿದ್ದನ್ನು ಸಂಘಟಕರು ಸ್ಮರಿಸಿಕೊಳ್ಳುತ್ತಾರೆ. ಪ್ರತಿ ವರ್ಷ ಇಲ್ಲಿಯ ಕೆಇಬಿ ಕಾರ್ಮಿಕ ನೌಕರರ ಸಂಘ ಕಾರ್ಮಿಕರನ್ನು ಸನ್ಮಾನಿಸುವ ಮೂಲಕ ವಿಶಿಷ್ಟವಾಗಿ ಕಾರ್ಮಿಕ ದಿನ ಆಚರಿಸಿಕೊಂಡು ಬಂದಿದ್ದು ಈ ಬಾರಿ ಸನ್ಮಾನ ಸ್ವೀಕರಿಸಿದ ಕಾರ್ಮಿಕರಲ್ಲಿ ಅಸಂಘಟಿತ ವಲಯದ ರಾಣಿ ಅರ್ಜುನ್‌ ಕೂಡ ಒಬ್ಬರಾಗಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next