Advertisement

ಅಣ್ಣಿಗೇರಿಯ ಪಾರ್ಶ್ವನಾಥ ಬಸದಿಯಲ್ಲಿ ಪಾದಪೀಠ ಶಾಸನ ಪತ್ತೆ

06:31 PM Nov 25, 2021 | Team Udayavani |

ಧಾರವಾಡ: ಅಣ್ಣಿಗೇರಿಯಲ್ಲಿ ಪ್ರಾಚೀನ ಪಾರ್ಶ್ವನಾಥ ಬಸದಿಯು ಮಳೆಗಾಲದಲ್ಲಿ ಸೋರುವ ಕಾರಣ, ಛತ್ತಿನ ಜೀರ್ಣೋದ್ದಾರ ಮಾಡುವ ಸಮಯದಲ್ಲಿ ಮೇಲ್ಛಾವಣಿಯಲ್ಲಿ ಪಾದಪೀಠ ಶಾಸನವೊಂದು ದೊರೆತಿದೆ.

Advertisement

ಕೇವಲ ಪಾದಗಳೆರಡು ಇರುವ ಮೂರ್ತಿಯ ಪಾದದ ಕೆಳಗೆ, ಒಂದೂವರೆ ಅಡಿ ಅಗಲ 3 ಇಂಚು ಎತ್ತರದ ಭಾಗದಲ್ಲಿ 3 ಸಾಲುಗಳಲ್ಲಿ ಸುಮಾರು 12 ನೆಯ ಶತಮಾನದ ಆಳವಾಗಿ ಕೆತ್ತಿದ ಸುಂದರ ಅಕ್ಷರಗಳಿರುವ ಶಾಸನ ಇದಾಗಿದೆ. ಮೇಲಿನ ತೀರ್ಥಂಕರ ಮೂರ್ತಿಯ ಕುರುಹುಗಳು, ಲಾಂಛನಗಳು ದೊರೆಯದೇ ಇರುವುದರಿಂದ ಯಾವ ತೀರ್ಥಂಕರನ ವಿಗ್ರಹವೆಂದು ಹೇಳಲು ಸಾಧ್ಯವಾಗುವುದಿಲ್ಲ. ಬಳಗಾರ ಗಣಕ್ಕೆ ಸೇರಿದ ಗುರು ಚಂದ್ರಕೀರ್ತಿ ಭಟ್ಟಾರಕರ ಶ್ರಾವಕ ಶಿಷ್ಯನಾದ ಬಿಂಜರ ಸೇನಬೋವ ಮೂಡಿಮೋಜನ ಮಗ ಬಾಚಣ ಮಾಡಿಸಿದ (ಪ್ರತಿಮೆ) ಎಂದು ಶಾಸನದಿಂದ ತಿಳಿಯುತ್ತದೆ.

ಜೈನಧರ್ಮದ ಪರಿಭಾಷೆಯ ಅನ್ವಯ 3 ಕ್ಕಿಂತ ಹೆಚ್ಚು ಜನ ಮುನಿಗಳು ಒಂದೆಡೆ ಇದ್ದರೆ ಅದಕ್ಕೆ ಗಣವೆಂದು, ೩ಕ್ಕಿಂತ ಹೆಚ್ಚು ಜನ ಒಟ್ಟಾಗಿ ಧರ್ಮ ಪ್ರಭಾವನೆಗಾಗಿ ಊರೂರುಗಳಲ್ಲಿ ಚಲಿಸಿದರೆ ಗಚ್ಛವೆಂದು ಕರೆಯುತ್ತಾರೆ. ಪ್ರಖ್ಯಾತ ಗುರುವೊಬ್ಬನ ಗುರು ಪರಂಪರೆಯಲ್ಲಿ ಈ ಮುನಿಗಳು ಶಿಷ್ಯರಾಗಿ ಮುಂದುವರೆದರೆ ಅದನ್ನು ಅನ್ವಯವೆಂದು ಹೆಸರಿಸುತ್ತಾರೆ. ಆಚಾರ್ಯರ ಅನುಯಾಯಿಯು ಮುನಿಯಾದರೆ ಶಿಷ್ಯನೆಂದು, ಗೃಹಸ್ಥನಾದರೆ ಗುಡ್ಡನೆಂದು, ಗೃಹಿಣಿಯಾದರೆ ಗುಡ್ಡಿ ಎಂದು ಕರೆಯಲಾಗುತ್ತದೆ. ಈ ಶಾಸನದಲ್ಲಿರುವ ಗಣವು ಬಳಗಾರ ಗಣವಾಗಿದೆ. ಆ ಗಣಕ್ಕೆ ಸೇರಿದ ಚಂದ್ರಕೀರ್ತಿ ಭಟ್ಟಾರಕರ ಪ್ರಭಾವಕ್ಕೆ ಒಳಗಾದ ಗುಡ್ಡ (ಶ್ರಾವಕ, ಗೃಹಸ್ಥ ಶಿಷ್ಯ) ಬಿಂಜರ ಮನೆತನದ, ಸೇನಬೋವ ಅಕಾರಸ್ಥನಾದ ಮೂಡಿಮೋಜ ಎನ್ನುವವನ ಮಗನಾದ ಬಾಚಣ ಎನ್ನುವವನು ಮಾಡಿಸಿದ ವಿಗ್ರಹವಿದೆಂದು ಸೂಚಿಸುತ್ತದೆ.

ಮುನಿಗಳು ಮತ್ತು ಸಂಸಾರಸ್ಥರು ದೇಹಶುದ್ಧಿಗಾಗಿ ಮತ್ತು ಮನಃಶುದ್ಧಿಗಾಗಿ ಹಲವಾರು ವ್ರತಗಳನ್ನು ಆಚರಿಸುತ್ತಾರೆ. ಹೀಗೆ ತಾವು ಇಚ್ಛಿಸಿದ ವ್ರತವನ್ನು ಆಚರಿಸಿ ಸಂಪೂರ್ಣಗೊಳಿಸಿದಾಗ, ಉದ್ಯಾಪನೆಯ ಸಮಯದಲ್ಲಿ ತೀರ್ಥಂಕರ ವಿಗ್ರಹಗಳನ್ನು ಮಾಡಿಸಿ, ಊರಿನಲ್ಲಿರುವ ಬಸದಿಯಲ್ಲಿಟ್ಟು ಪೂಜಿಸಲು ಕೊಡುವ ಪರಿಪಾಠವಿದೆ. ಅದರಂತೆ ಇಲ್ಲಿ ಮೂಡಿಮೋಜನ ಮಗ ಬಾಚಣ ಎನ್ನುವವನು ವಿಗ್ರಹವನ್ನು ಮಾಡಿಸಿಕೊಟ್ಟ ಉಲ್ಲೇಖವಿದೆ. ಮೂಡಿಮೋಜ ಎನ್ನುವ ಶಾಸನದಲ್ಲಿಯ ಹೆಸರೂ ಕುತೂಹಲ ಕೆರಳಿಸುತ್ತದೆ. ಓಜರು ಎಂದರೆ ಉಪಾಧ್ಯಾಯರು, ರೂವಾರಿಗಳು (ಶಿಲ್ಪಿಗಳು) ಎಂಬ ಎರಡೂ ಅರ್ಥಗಳಿರುವುದರಿಂದ ಇಲ್ಲಿಯ ಮೂಡಿಮೋಜನು ಬಸದಿಯ ಉಪಾಧ್ಯಾಯನಾಗಿರಬಹುದು ಇಲ್ಲವೆ ಬಸದಿ ನಿರ್ಮಾಣ ಮಾಡಿರುವವನೂ ಆಗಿರುವ ಸಾಧ್ಯತೆಯಿದೆ ಎಂದು ಶಾಸನ ತಜ್ಞರಾದ ಹನುಮಾಕ್ಷಿ ಗೋಗಿ ತಿಳಿಸಿದ್ದಾರೆ.

ಅಣ್ಣಿಗೇರಿ ನಗರದಲ್ಲಿರುವ ಪ್ರಾಚೀನ ಪ್ರಖ್ಯಾತ ಬಸದಿಯೇ ಪಾರ್ಶ್ವನಾಥ ಬಸದಿ. ಈ ಬಸದಿಯನ್ನು ರಾಷ್ಟ್ರಕೂಟ ಚಕ್ರವರ್ತಿ ಮುಮ್ಮಡಿ ಅಮೋಘವರ್ಷನ ಅಳಿಯನೂ (ಮಗಳು ರೇವಕ ನಿಮ್ಮಡಿಯ ಪತಿ) ಮುಮ್ಮಡಿ ಕೃಷ್ಣನ ಭಾವ ಮೈದುನನೂ ಆದ ಗಂಗ ಅರಸ ಇಮ್ಮಡಿ ಬೂತುಗನು (ಗಂಗ ಪೆರ್ಮಾಡಿ) ೧೦ನೆಯ ಶತಮಾನದಲ್ಲಿ ಕಟ್ಟಿಸಿದನೆಂದು ಈಗಾಗಲೇ ಪ್ರಕಟಿತ ಅಣ್ಣಿಗೆರೆಯ ಬಸದಿಯಲ್ಲಿರುವ ಶಾಸನದಿಂದ ತಿಳಿದು ಬರುತ್ತದೆ. ಕಾರಣ ಇದನ್ನು ಗಂಗ ಪೆರ್ಮಾಡಿ ಬಸದಿ ಎಂದು ಕರೆಯುತ್ತಿದ್ದರು. ಆದರೆ ಇಲ್ಲಿ ಸ್ಥಾಪಿತವಾದ ಮೂಲ ತೀರ್ಥಂಕರ ವಿಗ್ರಹ ಯಾವುದಾಗಿತ್ತೆಂದು ಶಾಸನಗಳಲ್ಲಿ ಉಕ್ತವಾಗಿಲ್ಲ. ಸದ್ಯ ಪಾರ್ಶ್ವನಾಥ ವಿಗ್ರಹವನ್ನು 1940 ರ ದಶಕದಲ್ಲಿ ಸ್ಥಾಪಿಸಲಾಗಿದೆ.
-ಹನುಮಾಕ್ಷಿ ಗೋಗಿ, ಶಾಸನ ತಜ್ಞೆ

Advertisement
Advertisement

Udayavani is now on Telegram. Click here to join our channel and stay updated with the latest news.

Next