Advertisement

ಕಟಪಾಡಿ: ವರ್ಷ ಕಳೆದರೂ ಮರು ನಿರ್ಮಾಣಗೊಳ್ಳದ ಕಾಲು ಸೇತುವೆ

09:56 PM Dec 22, 2022 | Team Udayavani |

ಕಟಪಾಡಿ : ಕಾಲು ಸೇತುವೆಯ ಸ್ಲ್ಯಾಬ್ ತುಂಡಾಗಿ ಶುಭ ಕಾರ್ಯಕ್ಕೆ ಆಗಮಿಸಿದ್ದ 5-6 ಯುವಕರು ತೋಡಿನ ನೀರಿಗೆ ಬಿದ್ದ ಘಟನೆಯು ಏಣಗುಡ್ಡೆ ಧಕ್ಕೆ ಸಮೀಪದ ಕುದ್ರು ತೋಟದಲ್ಲಿ 2021ರ ಡಿ. 20ರಂದು ನಡೆದಿತ್ತು. ಡಿ.22ರಂದು ಭೇಟಿ ನೀಡಿದ ಕಟಪಾಡಿ ಗ್ರಾ.ಪಂ. ಆಡಳಿತವು ತುರ್ತು ಸ್ಪಂದಿಸುವುದಾಗಿ ಹೇಳಿತ್ತು. ಆದ ರೆ ಭರವಸೆಯ ಮಾತುಗಳು ಪೊಳ್ಳಾಗಿದೆ ಎಂದು ಸ್ಥಳೀಯರು ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ.

Advertisement

ಘಟನೆಯ ಮೆಲುಕು
ಅಂದು ವಿಶ್ವನಾಥ ಪೂಜಾರಿ ಅವರ ಮನೆಯಲ್ಲಿ ಮಗು ತೊಟ್ಟಿಲಿಗೆ ಹಾಕುವ ಶಾಸ್ತ್ರದ ಶುಭ ಸಮಾರಂಭವು ನಡೆದಿತ್ತು. ಅತಿಥಿಗಳಾಗಿ ಕುರ್ಕಾಲು, ಕೊರಂಗ್ರಪಾಡಿ, ಮಲ್ಪೆ ಭಾಗದಿಂದ ಆಗಮಿಸಿದ್ದ ಸುಮಾರು 5-6 ಯುವಕರು ಈ ಕಾಲು ಸೇತುವೆಯನ್ನು ದಾಟುವ ಸಂದರ್ಭ ಸ್ಲಾಬ್‌ ತುಂಡಾಗಿ ಹರಿಯುತ್ತಿದ್ದ ನೀರಿಗೆ ಬಿದ್ದರು. ಹೊಳೆಯ ನೀರಿನ ಹರಿವಿನ ಉಬ್ಬರ ಕಡಿಮೆ ಇದ್ದುದರಿಂದ ಹೆಚ್ಚಿನ ಅವಘಡಗಳು ಸಂಭವಿಸದಿದ್ದರೂ, ಸಣ್ಣಪುಟ್ಟ ತರಚಿದ ಗಾಯಗಳೊಂದಿಗೆ, ಮೊಬೈಲ್‌ ನಷ್ಟವಾಗಿ ಹೆಚ್ಚಿನ ಅಪಾಯವಿಲ್ಲದೆ ಪಾರಾಗಿದ್ದರು. ಕಾಲು ಸೇತುವೆಯ ಅಸಮರ್ಪಕ ಕಾಮಗಾರಿ ಬಗ್ಗೆ ಸ್ಥಳೀಯರಿಂದ ತೀವ್ರ ಆಕ್ರೋಶವನ್ನು ಉದಯವಾಣಿ ಸುದಿನ ಪ್ರಕಟಿಸಿತ್ತು.

ಶೀಘ್ರ ಕಾಲುಸಂಕ ನಿರ್ಮಿಸಿ
ಅವಘಡ ಸಂಭವಿಸಿ ವರ್ಷ ಕಳೆದರೂ ಕಾಲು ಸಂಕ ನಿರ್ಮಾಣ ಆಗಿಲ್ಲ. ಕಟಪಾಡಿ ಗ್ರಾ.ಪಂ. 3-4 ಬಾರಿ ಭೇಟಿ ನೀಡಿ ತೆರಳಿದ್ದು ಬಿಟ್ಟರೆ ಯಾವುದೇ ಪ್ರಗತಿ ಕಂಡಿಲ್ಲ. ಇನ್ನಾದರೂ ಎಚ್ಚೆತ್ತು ಕೂಡಲೇ ಕಾಲು ಸಂಕ ನಿರ್ಮಿಸಿ ಮನೆಗೆ ತೆರಳಲು ನಮಗೆ, ಮಕ್ಕಳಿಗೆ ಸುರಕ್ಷತೆ ಕಲ್ಪಿಸಲಿ.

-ಸುಗುಣಾ ಪೂಜಾರ್ತಿ, ಸ್ಥಳೀಯ ನಿವಾಸಿ

ಕೂಡಲೇ ಕಾಮಗಾರಿ ಆರಂಭ
ಎನ್‌ಆರ್‌ಇಜಿಯಲ್ಲಿ ಕಾಮಗಾರಿ ನಿರ್ವಹಿಸಲು ಯೋಜನೆ ರೂಪಿಸಲಾಗಿದೆ. ನೀರಿನ ಉಬ್ಬರ ಇರುವುದರಿಂದ ಕಾಮಗಾರಿ ಆರಂಭಿಸಿಲ್ಲ. ಶಾಸಕರ ಕಚೇರಿಯಿಂದಲೂ ಅನುದಾನ ಮೀಸಲಿರಿಸಿದ್ದಾಗಿ ಮಾಹಿತಿ ಬಂದಿದೆ. ನೀರಿನ ಉಬ್ಬರದ ಮಟ್ಟದಲ್ಲಿ ಇಳಿಕೆ ಕಂಡ ಕೂಡಲೇ ಕಾಮಗಾರಿ ಆರಂಭಿಸಲಾಗುತ್ತದೆ.
-ಮಮತಾ ವೈ. ಶೆಟ್ಟಿ, , ಪಿಡಿಒ. ಕಟಪಾಡಿ ಗ್ರಾ.ಪಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next