Advertisement

ಅರ್ಹತಾ ಫುಟ್ಬಾಲ್‌: ಬಲಿಷ್ಠ ಕತಾರ್‌ ವಿರುದ್ಧ ಎಡವಿದ ಭಾರತ

10:12 PM Jun 04, 2021 | Team Udayavani |

ದೋಹಾ (ಕತಾರ್‌): ವಿಶ್ವಕಪ್‌ ಹಾಗೂ ಏಶ್ಯನ್‌ ಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ಆತಿಥೇಯ ಕತಾರ್‌ ವಿರುದ್ಧ ಏಕೈಕ ಗೋಲಿನ ಸೋಲಿಗೆ ತುತ್ತಾಗಿದೆ. ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಅವರ ಅಮೋಘ ಸಾಹಸದಿಂದಾಗಿ ತಂಡ ಭಾರೀ ಸೋಲಿನಿಂದ ಪಾರಾಯಿತು.

Advertisement

ಕತಾರ್‌ನ ಅಬ್ಧೆಲ್‌ ಅಜಿಜ್‌ 33ನೇ ನಿಮಿಷದಲ್ಲಿ ಪಂದ್ಯದ ಏಕೈಕ ಗೋಲು ಬಾರಿಸಿದರು. ಪಂದ್ಯದುದ್ದಕ್ಕೂ ಏಶ್ಯನ್‌ ಚಾಂಪಿಯನ್‌ ಕತಾರ್‌ ಭಾರತದ ಮೇಲೆ ಸವಾರಿ ಮಾಡುತ್ತ ಹೋಯಿತು. 6 ಪಂದ್ಯಗಳಿಂದ 3 ಅಂಕ ಗಳಿಸಿರುವ ಭಾರತವಿನ್ನೂ ಗೆಲುವಿನ ಖಾತೆ ತೆರೆದಿಲ್ಲ. ಸದ್ಯ 4ನೇ ಸ್ಥಾನದಲ್ಲೇ ಉಳಿದಿದೆ.

2019ರ ಮೊದಲ ಲೆಗ್‌ನಲ್ಲಿ ಇತ್ತಂಡ ಗಳ ನಡುವಿನ ಪಂದ್ಯ ಗೋಲುರಹಿತ ಡ್ರಾ ಆಗಿತ್ತು. ಈ ಸಲವೂ ಸುನೀಲ್‌ ಚೆಟ್ರಿ ಪಡೆ ಇಂಥದೇ ಪ್ರತಿರೋಧ ನೀಡೀತೆಂಬ ನಿರೀಕ್ಷೆ ಇತ್ತು. ಆದರೆ ಇದು ಹುಸಿಯಾಯಿತು. ಗೋಲ್‌ಕೀಪರ್‌ ಸಂಧು ಕತಾರ್‌ನ ಬರೋಬ್ಬರಿ 9 ಗೋಲುಗಳ ಅವಕಾಶವನ್ನು ತಪ್ಪಿಸಿ ಭಾರತದ ಮರ್ಯಾದೆ ಕಾಪಾಡಿದರು.

ಇದನ್ನೂ ಓದಿ :ಟಿ20 : ಪಾಕ್‌ ತಂಡದಲ್ಲಿ ಮೊಯಿನ್‌ ಖಾನ್‌ ಪುತ್ರ ಆಜಂ ಖಾನ್‌ ಗೆ ಅವಕಾಶ

ಹತ್ತೇ ಮಂದಿ ಆಟಗಾರರು
ಭಾರತದ ಹಿನ್ನಡೆಗೆ ಇನ್ನೂ ಒಂದು ಕಾರಣ ಇತ್ತು. 18ನೇ ನಿಮಿಷದ ಬಳಿಕ ಕೇವಲ 10 ಆಟಗಾರರೊಂದಿಗೆ ಆಡುವ ಒತ್ತಡಕ್ಕೆ ಸಿಲುಕಿತು. ರಾಹುಲ್‌ ಭೆಕೆ ಎರಡನೇ ಸಲ ಹಳದಿ ಕಾರ್ಡ್‌ ಪಡೆದ ಕಾರಣ ಪಂದ್ಯದಿಂದ ಹೊರ ನಡೆಯಬೇಕಾಯಿತು. ಅವರು ಬಾಕ್ಸ್‌ ಹೊರಗಡೆ ಚೆಂಡನ್ನು ಕೈಯಲ್ಲಿ ತಡೆದಿದ್ದರು. ಅವರಿಗೆ 9ನೇ ನಿಮಿಷ ದಲ್ಲಿ ಮೊದಲ ಹಳದಿ ಕಾರ್ಡ್‌ ತೋರಿಸಲಾಗಿತ್ತು.
ದ್ವಿತೀಯಾರ್ಧದಲ್ಲಿ ನಾಯಕ ಚೆಟ್ರಿ ಕೂಡ ಕಣಕ್ಕಿಳಿಯಲಿಲ್ಲ. ಇವರ ಬದಲು ಉದಾಂತ್‌ ಸಿಂಗ್‌ ಆಡಲಿಳಿದರು.

Advertisement

ಏಶ್ಯನ್‌ ಆಯ್ಕೆ ಜೀವಂತ
ಭಾರತ ಈಗಾಗಲೇ ಫಿಫಾ ವಿಶ್ವಕಪ್‌ ಸ್ಪರ್ಧೆಯಿಂದ ಹೊರಬಿದ್ದಿದೆ. ಆದರೆ 2023ರ ಏಶ್ಯನ್‌ ಕಪ್‌ ಆಯ್ಕೆಯನ್ನು ಜೀವಂತವಾಗಿರಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next