ಈ ಹೆಸರು ನೆನಪಿರಬೇಕಲ್ಲ? 2010ರ ವಿಶ್ವಕಪ್ ವೇಳೆ ಭವಿಷ್ಯ ನುಡಿದ “ಅಷ್ಟಪದಿ’. ತಂಡಗಳ ಹೆಸರುಳ್ಳ, ಆಹಾರ ತುಂಬಿರುವ 2 ಬೌಲ್‌ಗಳ ಪೈಕಿ ಒಂದನ್ನು ಆರಿಸುವ ಮೂಲಕ ಆಕ್ಟೋಪಸ್ ಗೆಲುವಿನ ತಂಡ ಯಾವುದೆಂದು ಗುರುತಿಸುವ ರೀತಿಗೆ ಎಲ್ಲರೂ ಬೆರಗಾಗಿದ್ದರು.
Advertisement
ಇದೀಗ ಮಾಸ್ಕೊ ವಿಶ್ವಕಪ್ ಸಮೀಪಿಸಿದೆ. ಸೋಲು-ಗೆಲುವಿನ ಭವಿಷ್ಯ ನಡಿಯುವ ಪ್ರಾಣಿ ಯಾವುದು ಎಂಬ ಕುತೂಹಲ ಅನೇಕರಲ್ಲಿತ್ತು. ಇದಕ್ಕೀಗ ತೆರೆ ಬಿದ್ದಿದೆ. ಈ ಸಲ ಭವಿಷ್ಯ ಹೇಳುವುದು ಬೆಕ್ಕಿನ ಸರದಿ. ಬಿಳಿ ಬಣ್ಣದ, ನೀಲಿ ಕಂಗಳ, “ಅಚಿಲ್ಸ್’ ಎಂಬ ಹೆಸರಿನ ಕಿವುಡು ಬೆಕ್ಕು ಈ ಕೆಲಸ ಮಾಡಲಿದೆ. ಆಚೀಚೆ ಬದಿಯಲ್ಲಿ ಇಡಲಾಗುವ 2 ಬೌಲ್‌ಗಳಲ್ಲಿ ಆಹಾರದ ಜತೆಗೆ 2 ದೇಶಗಳ ಧ್ವಜವನ್ನು ನೆಡಲಾಗುತ್ತದೆ. ಇದರಲ್ಲಿ ಒಂದನ್ನು ಆಹಾರಕ್ಕಾಗಿ ಆಯ್ದುಕೊಳ್ಳುವ ಮೂಲಕ ಅಚಿಲ್ಸ್ ಗೆಲುವಿನ ತಂಡವನ್ನು ಗುರುತಿಸುತ್ತದೆ. ಸದ್ಯ ಈ ಬೆಕ್ಕು ಸೇಂಟ್ ಪೀಟರ್ಬರ್ಗ್‌ನ “ಹರ್ಮಿಟೇಜ್ ಮ್ಯೂಸಿಯಂ’ನಲ್ಲಿ ಇದೆ. ಇಲ್ಲಿನ ಬೆಕ್ಕುಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅನ್ನಾ ಕಸತ್ಕಿನಾ ಫುಟ್‌ಬಾಲ್ ಭವಿಷ್ಯ ನುಡಿಯಲು “ಅಚಿಲ್ಸ್’ನನ್ನೇ ಆಯ್ಕೆ ಮಾಡಿದ್ದಾರೆ.