ಬೆಂಗಳೂರಿನಲ್ಲಿನ ಕ್ರೀಡಾಪಟುಗಳ ಹೆಸರನ್ನು ಕೇಳಿ… ತಕ್ಷಣ ನೆನಪಿಗೆ ಬರುವುದೇ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಿ.ಆರ್.ವಿಶ್ವನಾಥ್, ಕೆ.ಎಲ್.ರಾಹುಲ್, ಮನೀಷ್ ಪಾಂಡೆ… ಇಂತಹ ಕ್ರಿಕೆಟಿಗರ ಹೆಸರುಗಳು. ಆದರೆ ಇಂತಹ ಸ್ಥಿತಿ ಶುರುವಾಗಿದ್ದು ಭಾರತ 1983ರಲ್ಲಿ ಕ್ರಿಕೆಟ್ ವಿಶ್ವಕಪ್ ಗೆದ್ದ ನಂತರ. ಅದಕ್ಕಿಂತ ಮುಂಚೆ ಹಾಕಿ, ಫುಟ್‌ಬಾಲ್‌ಗಳು ಜನಪ್ರಿಯವಾಗಿದ್ದವು. ಅದರಲ್ಲೂ ಫುಟ್‌ಬಾಲನ್ನು ಜನ ಗಂಭೀರವಾಗಿ ಸ್ವೀಕರಿಸಿದ್ದರು ಎಂದರೆ ನಂಬುತ್ತೀರಾ? ಅಷ್ಟು ಮಾತ್ರವಲ್ಲ ಈಗ ನಿಧಾನಕ್ಕೆ ಬೆಂಗಳೂರಲ್ಲಿ ಫುಟ್‌ಬಾಲ್ ಚಿಗುರುತ್ತಿದೆ. ಅದನ್ನು ಒಂದಷ್ಟು ಗಮನಿಸಬೇಕಾಗಿದೆ.
ಕ್ರಿಕೆಟ್ ಮತ್ತು ಫುಟ್‌ಬಾಲ್ ಎರಡೂ ಒಂದೇ ಸಮಯಕ್ಕೆ ಭಾರತವನ್ನು ಪ್ರವೇಶಿಸಿತು. ಎರಡೂ ಕ್ರೀಡೆಗಳನ್ನು ಬ್ರಿಟಿಷರು ಉತ್ತೇಜಿಸಿದ್ದೇನೋ ಹೌದು. ಆದರೆ ಇಂದು ಭಾರತದಲ್ಲಿ ಕ್ರಿಕೆಟ್ ಮತ್ತು ಫುಟ್‌ಬಾಲ್ ಬೆಳವಣಿಗೆ ಅಂತರ ದಿಗಂತದಷ್ಟಿದೆ. ಕ್ರಿಕೆಟ್‌ಗೆ ಸಿಕ್ಕಷ್ಟು ಪ್ರೋತ್ಸಾಹ, ಫುಟ್‌ಬಾಲ್‌ಗೆ ಸಿಗಲಿಲ್ಲ. ಆದರೆ ಇತ್ತೀಚಿನ ದಶಕಗಳಲ್ಲಿ ಫುಟ್‌ಬಾಲನ್ನೂ ಜನರು ಇಷ್ಟಪಡುತ್ತಿದ್ದಾರೆ. ಆದರೆ ಅದಕ್ಕೆ ತಕ್ಕ ತಂಡಗಳ ರಚನೆ ಪ್ರೋತ್ಸಾಹ ದಕ್ಕಿದಂತೆ ಕಾಣುತ್ತಿಲ್ಲ. ಸುನೀಲ್ ಚೆಟ್ರಿ ನಾಯಕನಾಗಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ 2013ರಲ್ಲಿ ಆರಂಭವಾಯಿತು. ಪ್ರಸ್ತುತ ಇದು ದೇಶದ ಬಲಿಷ್ಠ ಕ್ಲಬ್ ತಂಡಗಳ ಲ್ಲೊಂದು. ಐಲೀಗ್‌ನಲ್ಲಿ 2 ಬಾರಿ, ಐಎಸ್‌ಎಲ್‌ನಲ್ಲಿ ಒಮ್ಮೆ ಚಾಂಪಿಯನ್ ಆಗಿದೆ. ಈ ಕ್ಲಬ್ ಬಂದ ಮೇಲೆ ಬೆಂಗಳೂರಿನಲ್ಲಿ ಮತ್ತೆ ಫುಟ್‌ಬಾಲ್‌ಗೆ ಆದ್ಯತೆ ಶುರುವಾಗಿದೆ. ಈ ಕ್ರೀಡೆಯನ್ನೇ ನಂಬಿ ಬದುಕ ಬಹುದು ಎಂಬ ವಿಶ್ವಾಸ ಶುರುವಾಗಿದೆ. ಫುಟ್‌ಬಾಲನ್ನೇ ಜೀವನವಾಗಿ ಸ್ವೀಕರಿಸುವ ಒಂದು ಭರವಸೆ ಬಂದಿದೆ. ಹಾಗೆಯೇ ದೇಶಾದ್ಯಂತ ಈ ಕ್ಲಬ್ ತನ್ನದೇ ಆದ ತರಬೇತಿ ಕೇಂದ್ರಗಳನ್ನು ಹೊಂದಿದೆ. ಇದಕ್ಕೆ ಎಐಎಫ್ಎಫ್ ಮತ್ತು ಎಎಫ್ಸಿ ಮಾನ್ಯತೆಯಿದೆ. ಹಾಗೆಯೇ ನಿಷ್ಣಾತ ಕೋಚ್‌ಗಳೂ ಇದ್ದಾರೆ.
ದೇಶದ ಅತ್ಯುತ್ತಮ ನಗರಗಳ ಪೈಕಿ ಬೆಂಗಳೂರಿಗೆ ಮೇಲ್ಮಟ್ಟದ ಸ್ಥಾನವಿದೆ. ಇಲ್ಲಿಗೆ ಕೆಲಸ ಹುಡುಕಿಕೊಂಡು ಬರುವಷ್ಟು, ದೇಶದ ಬೇರಾವ ನಗರಗಳಿಗೂ ಬರುವುದಿಲ್ಲ ಎನ್ನಬಹುದು. ಹಾಗಿರುವಾಗ ಇಲ್ಲಿ ಕ್ರೀಡಾಸೌಕರ್ಯಗಳೂ ಸಹಜವಾಗಿ ಬೆಳೆಯಬೇಕಾಗುತ್ತದೆ. ಅದಕ್ಕೆ ತಕ್ಕಂತೆ ಫುಟ್ ಬಾಲ್ ಕ್ಲಬ್‌ಗಳೂ ಬೆಳೆಯುತ್ತಿವೆ. ಕೆಲವು ಕ್ಲಬ್‌ಗಳು, ಮೈದಾನಗಳ ಪಟ್ಟಿ ಇಲ್ಲಿವೆ…
ಕೆಎಸ್‌ಎಫ್ಎನಿಂದ ಅತ್ಯುತ್ತಮ ಸೌಲಭ್ಯ :
ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ರಾಜ್ಯದಲ್ಲಿ ಫುಟ್‌ಬಾಲ್ ಉಸ್ತುವಾರಿಯನ್ನು ನೋಡಿಕೊಳ್ಳುತ್ತದೆ. ರಾಜ್ಯದ ಏನೇ ಆಗುಹೋಗುಗಳಿದ್ದರೂ ಈ ಸಂಸ್ಥೆಯ ಮಾತೇ ಅಂತಿಮ. ಬೆಂಗಳೂರಿನಲ್ಲಿ ಶಾಂತಲಾನಗರ ಮತ್ತು ಅಶೋಕ ನಗರದಲ್ಲಿ ಕೆಎಸ್‌ಎಫ್ಎ ಮೈದಾನಗಳಿವೆ. ಇಲ್ಲಿ ವಿಶ್ವದರ್ಜೆಯ ಸೌಲಭ್ಯಗಳಿವೆ. ಫುಟ್‌ಬಾಲ್ ಕಲಿಕೆ, ದೈಹಿಕ ಸಾಮರ್ಥ್ಯವೃದ್ಧಿಗೆ ವ್ಯವಸ್ಥೆಗಳಿವೆ.
ಭೈಚುಂಗ್ ಭುಟಿಯಫುಟ್‌ಬಾಲ್ ಸ್ಕೂಲ್ಸ್ : ಭೈಚುಂಗ್ ಭುಟಿಯ ಭಾರತದ ಸರ್ವಶ್ರೇಷ್ಠ ಫುಟ್‌ಬಾಲ್ ಆಟಗಾರರಲ್ಲೊಬ್ಬರು. ಅವರು ನಿವೃತ್ತರಾದ ಮೇಲೆ ದೇಶಾದ್ಯಂತ ಫುಟ್‌ಬಾಲ್ ತರಬೇತಿ ಕೇಂದ್ರಗಳನ್ನು ಆರಂಭಿಸಿದ್ದಾರೆ. ದೇಶದ 21 ನಗರಗಳಲ್ಲಿ 72 ಕೇಂದ್ರಗಳನ್ನು ಹೊಂದಿದೆ. ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮುಖ ಕೂಟಗಳಲ್ಲಿ ಆಡುವ ಅವಕಾಶ ಸಿಗುತ್ತದೆ. ಯೂರೋಪಿನ ಪ್ರಮುಖ ಅಕಾಡೆಮಿಗಳ ತಜ್ಞರ ಸಲಹೆ, ಸಹಕಾರವೂ ಇದಕ್ಕಿದೆ. ಅದರ ಒಂದು ಶಾಖೆ ತಲಘಟ್ಟಪುರ ದಾದಾ ಮಸ್ತಾನ್ ಲೇಔಟ್‌ನಲ್ಲಿದೆ.
ಬೆಂಗಳೂರು ಯೂಥ್ ಫುಟ್‌ಬಾಲ್ ಲೀಗ್: ಬಿವೈಎಫ್ಎಲ್ ಒಂದು ಅಕಾಡೆಮಿ. ಇದಕ್ಕೆ ಅಖೀಲ ಭಾರತ ಫುಟ್‌ಬಾಲ್ ಅಕಾಡೆಮಿಯ (ಎಐಎಫ್ಎಫ್) ಮಾನ್ಯತೆಯೂ ಸಿಕ್ಕಿದೆ. ಇದರಲ್ಲಿ ಫುಟ್‌ಬಾಲ್ ತರಬೇತಿ ಜೊತೆಜೊತೆಗೇ ಜೀವನದ ಪಾಠಗಳೂ ಸಿಗುತ್ತವೆ. ಕೌಶಲ್ಯವನ್ನು ಗಳಿಸುವುದು, ಸಂಘಟಿತ ಕೆಲಸ, ಸೋಲು-ಗೆಲುವುಗಳನ್ನ ಸ್ವೀಕರಿಸುವುದು ಇಲ್ಲಿ ಮುಖ್ಯವಾದ ಪಾಠಗಳು. ಕುಮಾರ ಪಾರ್ಕ್ ಪೂರ್ವದಲ್ಲಿರುವ ಜೀವನ್ ಕಟ್ಟಡದಲ್ಲಿ ಇದರ ತರಬೇತಿ ಕೇಂದ್ರವೊಂದಿದೆ.
ಬೊಕಾ ಜ್ಯೂನಿಯರ್ಸ್ ಫುಟ್‌ಬಾಲ್ ಸ್ಕೂಲ್: ಬಿಜೆಎಫ್ಎಸ್‌ಐ (ಬೊಕಾ ಜ್ಯೂನಿಯರ್ಸ್ ಫುಟ್‌ಬಾಲ್ ಸ್ಕೂಲ್ ಆಫ್ ಇಂಡಿಯಾ) 6ರಿಂದ 16 ವರ್ಷದೊಳಗಿನ ಮಕ್ಕಳಿಗೆ ವಿಶ್ವದರ್ಜೆಯ ತರಬೇತಿಯನ್ನು ನೀಡುತ್ತಿದೆ. ಅರ್ಜೆಂಟೀನದಲ್ಲಿ ನೀಡುವ ತರಬೇತಿ ಮಾದರಿ ಯನ್ನೇ ಇಲ್ಲಿ ಅಳವಡಿಸಲಾಗಿದೆ. ವೈಟ್ ಫೀಲ್ಡ್ ಮುಖ್ಯರಸ್ತೆಯಲ್ಲಿ ಇದರ ತರಬೇತಿ ಕೇಂದ್ರವಿದೆ.
ಜೋಗುಪಾಳ್ಯದಲ್ಲಿದೆ ಮಿನಿ ಬ್ರೆಝಿಲ್!: ನಿಮಗೊಂದು ವಿಷಯ ಗೊತ್ತಾ? ಬಹುಶಃ ಗೊತ್ತಿರುತ್ತದೆ. ಪ್ರತೀ ಬಾರಿ ಫುಟ್‌ಬಾಲ್ ವಿಶ್ವಕಪ್ ಬಂದಾಗಲೂ ಬೆಂಗಳೂರು ನಗರದ ಹಲಸೂರಿನಲ್ಲಿರುವ ಜೋಗುಪಾಳ್ಯದ ಗೌತಮಪುರ ಸುದ್ದಿಯಾಗುತ್ತದೆ. ಕಾರಣ ಈ ಪ್ರದೇಶಕ್ಕೆ ಮಿನಿ ಬ್ರೆಝಿಲ್ ಎಂಬ ಅಡ್ಡ ಹೆಸರು ಇರುವುದು. ಇಲ್ಲಿನ ಪ್ರತಿಯೊಬ್ಬರೂ ಬ್ರೆಝಿಲ್ ಫುಟ್‌ಬಾಲ್ ತಂಡದ ಅಭಿಮಾನಿಗಳು! ಇಲ್ಲಿ 1934ರಲ್ಲೇ ಮಾರ್ಸ್ ಫುಟ್‌ಬಾಲ್ ಕ್ಲಬ್ ಶುರುವಾಯಿತು. ಫುಟ್‌ಬಾಲ್ ದಂತಕತೆ ಬ್ರೆಜಿಲ್‌ನ ಪೀಲೆ ಇಲ್ಲಿಯವರ ಆರಾಧ್ಯ ದೈವ. ಗೌತಮಪುರದ ವೃತ್ತದಲ್ಲಿ ಪೀಲೆಯ ಪ್ರತಿಮೆ ಪ್ರತಿಷ್ಠಾಪಿಸಿ ಅಭಿಮಾನ ಮೆರೆಯಲಾಗಿದೆ. ಈ ಎಲ್ಲ ಕಾರಣಗಳಿಂದಾಗಿಯೇ ಬ್ರೆಜಿಲ್ ಫುಟ್‌ಬಾಲ್ ತಂಡದ ಜೆರ್ಸಿ ಧರಿಸಿದವರು ಕಂಡು ಬಂದರೆ ಅವರು ಗೌತಮಪುರದವರೇ ಆಗಿರುತ್ತಾರೆ ಎಂಬ ಮಾತೂ ಚಾಲ್ತಿಯಲ್ಲಿದೆ. ಗೌತಮಪುರದ ಪ್ರತಿ ಮನೆಯಲ್ಲೂ ಒಬ್ಬರು ಫುಟ್‌ಬಾಲ್ ಆಟಗಾರರು ಸಿಗುತ್ತಾರೆ. ರಾಷ್ಟ್ರೀಯ ಮತ್ತು ರಾಜ್ಯ ತಂಡಕ್ಕೆ ಆಡಿದ, ವಿವಿಧ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಆಡಿದ ಮತ್ತು ಆಡುತ್ತಿರುವ 150ಕ್ಕೂ ಹೆಚ್ಚಿನ ಆಟಗಾರರು ಗೌತಮಪುರದಲ್ಲಿದ್ದಾರೆ. ಹಾಗೆಯೇ ಇಲ್ಲಿಯವರು ವಿವಿಧ ಪಂದ್ಯಾವಳಿಯಲ್ಲಿ ರೆಫ್ರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಫುಟ್‌ಬಾಲ್ ವಿಶ್ವಕಪ್ ಬಂತೆಂದರೆ ಗೌತಮಪುರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಕಳೆದ ಬಾರಿಯ ವಿಶ್ವಕಪ್ (2018) ಗಾಗಿ ಗೌತಮಪುರ ವೃತ್ತದಲ್ಲಿನ ಪೀಲೆ ಪ್ರತಿಮೆ ಜತೆಗೆ ಹಳದಿ ಬಣ್ಣದ ಬೃಹದಾಕಾರದ ಫುಟ್‌ಬಾಲ್ ಪ್ರತಿಷ್ಠಾಪಿಸಲಾಗಿತ್ತು. ಈ ಬಾರಿ ಬೃಹದಾಕಾರದ ವಿಶ್ವಕಪ್‌ನ ಪ್ರತಿಕೃತಿಯನ್ನು ಇಡಲಾಗಿದೆ. ಅದರ ಜತೆಗೆ ಬ್ರೆಜಿಲ್ ತಂಡದ ಪಂದ್ಯವಿರುವ ಸಂದರ್ಭದಲ್ಲಿ ನಿವಾಸಿಗಳೆಲ್ಲ ಸೇರಿ ದೊಡ್ಡ ಪರದೆ ಅಳವಡಿಸಿ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸುತ್ತಾರೆ.
ಬ್ರಿಟಿಷರ ಕಾಲದಲ್ಲಿ ಶುರುವಾಗಿದ್ದು ಫುಟ್‌ಬಾಲ್: ಬ್ರಿಟಿಷರ ಕಾಲದಲ್ಲಿ ಭಾರತಕ್ಕೆ ಕ್ರಿಕೆಟ್ ಬಂತು. ಅದರೊಂದಿಗೆ ಫುಟ್‌ಬಾಲ್ ಕೂಡ ಪ್ರವೇಶವಾಯಿತು. ಅವರಿದ್ದ ಕಾಲದಲ್ಲಿ ಈ ಎರಡೂ ಕ್ರೀಡೆಗಳು ಸಮಾನ ಆದ್ಯತೆ ಪಡೆದಿದ್ದವು. 1983ರಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದ ಮೇಲೆ ಪರಿಸ್ಥಿತಿ ಬದಲಾಯಿತು. ಎಲ್ಲಿ ನೋಡಿದರೂ ಕ್ರಿಕೆಟ್ ಅನ್ನುವ ಪರಿಸ್ಥಿತಿ. ಆದರೆ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರಾéನಂತರದ ಕೆಲವು ವರ್ಷಗಳ ಕಾಲ ಇಲ್ಲಿ ಫುಟ್‌ಬಾಲ್ ಆವರಿಸಿಕೊಂಡಿತ್ತು. ಅದಕ್ಕೆ ಕಾರಣವೂ ಇದೆ. 2ನೇ ಮಹಾಯುದ್ಧದದಲ್ಲಿ ಬ್ರಿಟನ್, ಇಟಲಿಯ ಯುದ್ಧಖೈದಿಗಳನ್ನು ಬೆಂಗಳೂರಿಗೆ ರವಾನಿಸಿ ಇಲ್ಲಿನ ಜೈಲುಗಳಲ್ಲಿಟ್ಟಿತ್ತು. ಇಟಲಿಯನ್ನರಿಗೆ ಫುಟ್‌ಬಾಲ್ ಅಚ್ಚುಮೆಚ್ಚು. ಹಾಗೆ ಶುರುವಾದ ಈ ಹುಚ್ಚಿನ ಪರಿಣಾಮ ಒಲಿಂಪಿಕ್ಸ್ ಮತ್ತು ಇತರೆ ಅಂತಾರಾಷ್ಟ್ರೀಯ ಕೂಟಗಳಲ್ಲಿ 12ಕ್ಕೂ ಅಧಿಕ ಬೆಂಗಳೂರಿನ ಕಲಿಗಳು ಪಾಲ್ಗೊಳ್ಳುವಂತಾಯಿತು!