ಕೇರಳ: ಕ್ರೀಡೆಯ ಅಭಿಮಾನ ಯಾರಿಗಿಲ್ಲ ಹೇಳಿ? ಕ್ರಿಕೆಟ್, ಫುಟ್ ಬಾಲ್, ಟೆನ್ನಿಸ್, ಬ್ಯಾಡ್ಮಿಂಟನ್ ಹೀಗೆ ನಾನಾ ಕ್ರೀಡೆಯ ಬಗ್ಗೆ ನಾವು ಆಸಕ್ತಿಯನ್ನು ಹೊಂದಿರುತ್ತೇವೆ. ಭಾರತಕ್ಕೆ ಬರುವುದಾದರೆ ನಮ್ಮಲ್ಲಿ ಕ್ರಿಕೆಟ್ ಮೋಹ ಇತರೆ ಕ್ರೀಡೆಗಳಿಗಿಂತ ಜಾಸ್ತಿಯೇ ಇದೆ. ಕ್ರಿಕೆಟ್ ನೋಡಲು ನಿದ್ದೆಯನ್ನೂ ಬಿಡುವುದುಂಟು. ಆದರೆ ಇಲ್ಲೊಂದು ಮಹಿಳೆಯ ಕ್ರೀಡಾ ಅಭಿಮಾನ ಎಲ್ಲಕ್ಕಿಂತ ಭಿನ್ನವಾಗಿ ಕಾಣುತ್ತದೆ.
ಆಕೆ ಕೇರಳದವಳು. ಹೆಸರು ನಾಜಿ ನೌಶಿ. ಐದು ಮಕ್ಕಳ ತಾಯಿ. ಕುಟುಂಬವನ್ನು ನೋಡಿಕೊಳ್ಳುವ ಗೃಹಿಣಿ. ಇಷ್ಟು ಮಾತ್ರವಾಗಿದ್ದರೆ ಆಕೆ ಸುದ್ದಿಯಾಗುತ್ತಿರಲಿಲ್ಲ. ಗೃಹಿಣಿಯೊಂದಿಗೆ ನೌಶಿ ಒಬ್ಬ ಯೂಟ್ಯೂಬರ್, ವ್ಲಾಗರ್ ಇದೆಲ್ಲಕ್ಕಿಂತ ಹೆಚ್ಚಾಗಿ ಆಕೆ ಪ್ರವಾಸದ ಹವ್ಯಾಸವುಳ್ಳವರು.
ಕೇರಳದಲ್ಲಿ ಫುಟ್ ಬಾಲ್ ಮೋಹ ಇತರೆ ರಾಜ್ಯಕ್ಕಿಂತ ತುಸು ಹೆಚ್ಚೇ ಇದೆ. ನೌಶಿ ಕೂಡ ಒಬ್ಬ ಫುಟ್ಬಾಲ್ ಪ್ರೇಮಿ. ಫುಟ್ಬಾಲ್ ನೋಡುವುದೆಂದರೆ ಅವರಿಗೆ ಅಡುಗೆ ಕೆಲಸದ್ದಷ್ಟೇ ಪ್ರೀತಿಯ ಹವ್ಯಾಸ. ಈ ವರ್ಷ ಕತಾರ್ ದೇಶದಲ್ಲಿ ಫುಟ್ ಬಾಲ್ ಫಿಫಾ ವಿಶ್ವಕಪ್ ಜರುಗಲಿದೆ. ಈ ಪಂದ್ಯಗಳನ್ನು ನೋಡಲು ನೌಶಿ ಕಾತುರತೆಯಿಂದ ಕಾಯುತ್ತಿದ್ದಾರೆ. ಎಷ್ಟು ಕಾತುರ ಎಂದರೆ ಅವರು ಇದಕ್ಕಾಗಿ ಈಗಲೇ ಪಯಣ ಆರಂಭಿಸಿದ್ದಾರೆ. ಅದು ಅವರ ಜೀಪ್ ಮೂಲಕ. ಅದು ಕೂಡ ಒಂಟಿಯಾಗಿ.!
ಕೇಳಿದರೆ ಅಚ್ಚರಿಯಾಗಬಹುದು. ಆದರೆ ಇದು ಸತ್ಯ. ಮಹೇಂದ್ರ ಥಾರ್ ಜೀಪ್ ಮೂಲಕ ನೌಶಿ ಕತಾರ್ ಗೆ ಫುಟ್ಬಾಲ್ ಕ್ರೀಡೆ ನೋಡಲು ಹೊರಟಿದ್ದಾರೆ. ಇವರ ಪಯಣಕ್ಕೆ ಕೇರಳ ಸಾರಿಗೆ ಸಚಿವ ಆಂಟನಿ ರಾಜು ಸಮ್ಮುಖದಲ್ಲಿ, ಪಂಚಾಯತ್ ಸದಸ್ಯರ ಉಪಸ್ಥಿತಿಯಲ್ಲಿ ನೌಶಿ ಅವರ ಯಾನಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ.
ನೌಶಿ ತಮ್ಮ ಜೀಪ್ ನಲ್ಲಿ ಕೊಯಮತ್ತೂರು ಮೂಲಕ ಮುಂಬೈಗೆ ತಲುಪಿ ಅಲ್ಲಿಂದ ಹಡಗಿನಲ್ಲಿ ( ಶಿಪ್) ಜೀಪ್ ಸಹಿತ ಒಮಾನ್ ತಲುಪಲಿದ್ದಾರೆ. ಅಲ್ಲಿಂದ ನೌಶಿ ಜೀಪ್ ನಲ್ಲಿ ಅರಬ್ ದೇಶದ ಯುಎಇ, ಬಹ್ರೈನ್, ಕುವೈಟ್ ಹಾಗೂ ಸೌದಿ ಆರೇಬಿಯಾದಲ್ಲಿ ಸಂಚರಿಸಿ ಕತಾರ್ ತಲುಪಲಿದ್ದಾರೆ.
ಈ ಬಗ್ಗೆ ಮಾತಾನಾಡಿದ ನೌಶಿ “ನಾನು ಡಿಸೆಂಬರ್ 10 ಕ್ಕೆ ಕತಾರ್ ತಲುಪಿ ಫೈನಲ್ ಮ್ಯಾಚ್ ನೋಡಬೇಕೆಂದಿದ್ದೇನೆ. ನಾನು ಅರ್ಜೆಂಟಿನಾ ತಂಡ ಹಾಗೂ ಮೆಸ್ಸಿ ಅವರ ದೊಡ್ಡ ಅಭಿಮಾನಿ. ನನ್ನ ಮೆಚ್ಚಿನ ತಂಡ ಕಪ್ ಎತ್ತುವುದನ್ನು ನೋಡಲು ಕಾಯುತ್ತಿದ್ದೇನೆ” ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
“ಜೀಪ್ ನಲ್ಲಿ ಅಡುಗೆ ಸಾಮಾಗ್ರಿಗಳೆಲ್ಲಾ ಇವೆ. ಪೆಟ್ರೋಲ್ ಬಂಕ್, ಟೋಲ್ ಪ್ಲಾಜಾದಲ್ಲಿ ರಾತ್ರಿಯ ವೇಳೆ ಜೀಪ್ ನಿಲ್ಲಿಸುವ ಯೋಜನೆಯಿದೆ. ನನ್ನ ಬಳಿ ಓಮಾನ್ ದೇಶದ ಡ್ರೈವಿಂಗ್ ಲೈಸನ್ಸ್ ಇದೆ. ಭಾರತ ತಂಡ ಫಿಫಾದಲ್ಲಿ ಆಡುವುದನ್ನು ನೋಡುವುದು ನನ್ನ ಕನಸು. ಈ ಪಯಣಕ್ಕೆ ನನ್ನ ಗಂಡ ಹಾಗೂ ನನ್ನ ಮಕ್ಕಳೇ ನನ್ನ ಬೆನ್ನುಲುಬು ಎಂದು ಹೇಳಿದರು.
ನೌಶಿ ಈಗಾಗಲೇ ಭಾರತದೆಲ್ಲೆಡೆ ಸಂಚರಿಸಿದ್ದಾರೆ. ಲಡಾಖ್ ಪ್ರವಾಸವನ್ನು ಅವರು ಮಾಡಿದ್ದಾರೆ. ನನ್ನ ಪ್ರವಾಸ ಇತರ ಮಹಿಳೆಯರಿಗೆ ಸ್ಪೂರ್ತಿ ನೀಡಲಿ. ನಾನು ಗೃಹಿಣಿಯಾಗಿ, ಐದು ಮಕ್ಕಳ ತಾಯಿಯಾಗಿ ಕನಸು ಕಾಣುತ್ತೇನೆ ಎಂದರೆ, ನನ್ನಂತೆ ಎಲ್ಲ ಮಹಿಳೆಯರು ಕೂಡ ಕನಸು ಕಂಡು, ಅದನ್ನು ನನಸಾಗಿಸಬಹುದು ಎಂದು ನೌಶಿ ಹೇಳಿದ್ದಾರೆ.