Advertisement

ಪಾದ ಉಳುಕಿಸಿಕೊಂಡ ಪೃಥ್ವಿ ಶಾ ಅಡಿಲೇಡ್‌ ಟೆಸ್ಟ್‌ ಆಡುವುದಿಲ್ಲ!

06:00 AM Dec 01, 2018 | |

ಸಿಡ್ನಿ: ಭಾರೀ ಸವಾಲಿನ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ ಸರಣಿಯ ಆರಂಭಕ್ಕೂ ಮೊದಲೇ ಭಾರತಕ್ಕೆ ದೊಡ್ಡ ಆಘಾತವೊಂದು ಎದುರಾಗಿದೆ. ಯುವ ಆರಂಭಕಾರ ಪೃಥ್ವಿ ಶಾ ಎಡ ಪಾದದ ಗಂಭೀರ ನೋವಿಗೆ ತುತ್ತಾದ್ದರಿಂದ ಡಿ. 6ರಿಂದ ಆರಂಭವಾಗಲಿರುವ ಅಡಿಲೇಡ್‌ ಟೆಸ್ಟ್‌ ಪಂದ್ಯದಿಂದ ಹೊರಗುಳಿಯಲಿದ್ದಾರೆ.

Advertisement

ಕ್ರಿಕೆಟ್‌ ಆಸ್ಟ್ರೇಲಿಯ ಇಲೆವೆನ್‌ ವಿರುದ್ಧದ ಅಭ್ಯಾಸ ಪಂದ್ಯದ ಶುಕ್ರವಾರದ ಆಟದಲ್ಲಿ ಪೃಥ್ವಿ ಶಾ ಈ ಸಂಕಟಕ್ಕೆ ಸಿಲುಕಿದರು. ಆತಿಥೇಯರ ಇನ್ನಿಂಗ್ಸಿನ 15ನೇ ಓವರ್‌ ವೇಳೆ ಶಾ ಮಿಡ್‌ ವಿಕೆಟ್‌ ವಿಭಾಗದಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದರು. ಆಗ ಆರ್‌. ಅಶ್ವಿ‌ನ್‌ ಎಸೆತದಲ್ಲಿ ಮ್ಯಾಕ್ಸ್‌ ಬ್ರಿಯಾಂಟ್‌ ಬಾರಿಸಿದ ಭರ್ಜರಿ ಹೊಡೆತವೊಂದನ್ನು ಕ್ಯಾಚ್‌ ಪಡೆಯುವ ಪ್ರಯತ್ನದಲ್ಲಿ ಬೌಂಡರಿ ಲೈನ್‌ನಲ್ಲಿ ಎಡವಿದರು. ಇದರಿಂದ ಅವರ ಎಡ ಪಾದಕ್ಕೆ ಭಾರೀ ಏಟು ಬಿತ್ತು. ಹೀಗಾಗಿ ತತ್‌ಕ್ಷಣವೇ ಎದ್ದು ನಿಲ್ಲಲಾಗಲಿಲ್ಲ. ಬಳಿಕ ಭಾರತ ತಂಡದ ಇಬ್ಬರು ಸಹಾಯಕ ಸಿಬಂದಿ ಶಾ ಅವರನ್ನು ಎತ್ತಿಕೊಂಡು ಹೋದರು.

ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಸ್ಕ್ಯಾನಿಂಗ್‌ ನಡೆಸಿದಾಗ ಪಾದದ ಅಸ್ಥಿರಜ್ಜು ಗಾಯ ತೀವ್ರಗೊಂಡಿರುವುದು ಪತ್ತೆಯಾಗಿದೆ. ಹೀಗಾಗಿ ಶಾ ಅವರಿಗೆ ವೈದ್ಯರು ವಿಶ್ರಾಂತಿ ಸೂಚಿಸಿದ್ದಾರೆ.ಈ ಕುರಿತು ಬಿಸಿಸಿಐ ಅಧಿಕೃತ ಪ್ರಕಟನೆ ನೀಡಿದ್ದು, ಪೃಥ್ವಿ ಶಾ ಅಡಿಲೇಡ್‌ ಟೆಸ್ಟ್‌ ಪಂದ್ಯಕ್ಕೆ ಲಭ್ಯರಿರುವುದಿಲ್ಲ ಎಂದಿದೆ. ಶಾಗೆ ಯಾವುದೇ ಬದಲಿ ಆಟಗಾರರನನ್ನು ಸೂಚಿಸಿಲ್ಲ. ಶಾ ಅನುಪಸ್ಥಿತಿಯಲ್ಲಿ ಮುರಳಿ ವಿಜಯ್‌-ಕೆ.ಎಲ್‌. ರಾಹುಲ್‌ ಭಾರತದ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ. ಪಾರ್ಥಿವ್‌ ಪಟೇಲ್‌ ಕೂಡ ಆರಂಭಿಕನ ಸ್ಥಾನದ ರೇಸ್‌ನಲ್ಲಿದ್ದಾರೆ.ಅಭ್ಯಾಸ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದ ಪೃಥ್ವಿ ಶಾ 69 ಎಸೆತಗಳಿಂದ 66 ರನ್‌ ಹೊಡೆದು ಬ್ಯಾಟಿಂಗ್‌ ಫಾರ್ಮ್ ಪ್ರದರ್ಶಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next