Advertisement

Byndoor: ನಮಗೆ ಕಾಲು ಸಂಕ ಬೇಕು: ಸುತ್ತು ಬಳಸಿದರೂ ಕಾಲು ಸಂಕವೇ ಗತಿ!

02:43 PM Aug 02, 2024 | Team Udayavani |

ಬೈಂದೂರು: ಈ ಊರಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಗೆ ಅಡ್ಡಲಾಗಿ ಹೊಳೆ ಹರಿಯುತ್ತದೆ. ಹೀಗಾಗಿ ಮಳೆಗಾಲದಲ್ಲಿ ಅದನ್ನು ದಾಟಿ ಹೋಗುವುದು ಸಾಧ್ಯವೇ ಇಲ್ಲ. ಇಲ್ಲೊಂದು ಮರದ ಕಾಲು ಸಂಕವನ್ನು ಊರಿನವರು ಸೇರಿ ನಿರ್ಮಿಸುತ್ತಾರಾದರೂ ಅದು ದೀರ್ಘ‌ ಕಾಲ ನಿಲ್ಲುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಅವರು ಊರು ತಲುಪಲು ಮತ್ತೂಂದು ಕಾಲು ಸಂಕವನ್ನೇ ಆಶ್ರಯಿಸಬೇಕು. ಅದು ಇದಕ್ಕಿಂತಲೂ ಡೇಂಜರು.

Advertisement

ಇದು ಬೈಂದೂರು ಸಮೀಪದ ಯಡ್ತರೆ ಗ್ರಾಮದ ಕಡ್ಕೆ ಎಂಬ ಊರಿನ ಕಥೆ. ಇಲ್ಲಿನ ಜನ ದಶಕಗಳಿಂದ ಕಾಲು ಸಂಕಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಆದರೆ, ಅವರ ಧ್ವನಿಗೆ ಯಾರೂ ಓಗೊಟ್ಟಿಲ್ಲ. ಇವರೀಗ ದೀರ್ಘ‌ ದಾರಿಯನ್ನು ಬಳಸಿ ಇನ್ನೊಂದು ಕಾಲು ಸಂಕವನ್ನು ಆಶ್ರಯಿಸಿ  ಗೂಡು ಸೇರಬೇಕಾಗಿದೆ.

ಯಡ್ತರೆ ಗ್ರಾಮದ ಕಡ್ಕೆ ಸುಮಾರು 50ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದೆ. ಪರಿಶಿಷ್ಟ ಪಂಗಡದ ಗೊಂಡ ಸಮುದಾಯದ ಜನರು ಅಧಿಕ ಸಂಖ್ಯೆಯಲ್ಲಿದ್ದಾರೆ. ಈ ಊರಿನ ಸಮೀಪ ಊದೂರಿನಿಂದ ಕಡ್ಕೆ, ಓಮ್ಮಣಮಕ್ಕಿ,ಕರ್ನಗದ್ದೆ ಸಂಪರ್ಕ ಸಾಧಿಸಲು ಹೊಳೆಯೊಂದನ್ನು ದಾಟಿ ಬರಬೇಕಾಗಿದೆ.

ಕುಗ್ರಾಮವಾದ ಈ ಊರಿನಲ್ಲಿ ರಸ್ತೆ, ಸೇತುವೆಗಳೆರಡೂ ಇಲ್ಲ. ರಸ್ತೆ ಯನ್ನು ದಾಟುವ ಹೊಳೆ ಮುಂದೆ ಒಂದು ಕಡೆ ಸ್ವಲ್ಪ ಸಣ್ಣ ದಾಗಿ ಹರಿಯುತ್ತದೆ. ಅಲ್ಲಿ ಒಂದು ತಾತ್ಕಾಲಿಕ ಸಂಕ ವನ್ನು ನಿರ್ಮಿಸಿ ಕೊಂಡು ದಾಟುತ್ತಿದ್ದಾರೆ. ಈ ಕಾಲು ಸಂಕಕ್ಕೆ ಹೋಗುವುದು ಕೂಡ ತುಂಬಾ ದೂರ. ಸುತ್ತು ಬಳಸಿ ಸಾಗಬೇಕು. ಪುಟ್ಟ ಕಾಲು ಸಂಕ ದಾಟಲು ಸುಮಾರು ಎರಡು ಕಿ.ಮೀ ಸುತ್ತು ಬಳಸಿ ಬರಬೇಕು.

Advertisement

ಅಧಿಕ ಮಳೆಯಾದಾಗ ಕಾಲುಸಂಕವನ್ನು  ದಾಟುವುದು ಕೂಡ ಅಪಾಯಕಾರಿಯೇ. ಒಂದೊಮ್ಮೆ ನಿಯಂತ್ರಣ ತಪ್ಪಿದರೆ ನದಿ ಪಾಲಾಗುವುದು ಗ್ಯಾರಂಟಿ. ಪ್ರತಿದಿನ ವಿದ್ಯಾರ್ಥಿಗಳು ಹಾಗೂ ಕೂಲಿಕೆಲಸಕ್ಕೆ ತೆರಳುವವರು ಈ ಕಾಲುಸಂಕವನ್ನು ಬಳಸಿ ಹೋಗಬೇಕಾಗಿದೆ. ಹೀಗಾಗಿ ನಿತ್ಯ ಎರಡು ಕಿ.ಮೀ ಹೆಚ್ಚುವರಿ ಸುತ್ತು ಬಳಸಿಬರಬೇಕಾಗಿದೆ.

ಕಾಲು ಸಂಕ ನಿರ್ಮಿಸಬೇಕು
ಕಡ್ಕೆ ರಸ್ತೆಗೆ ನದಿ ಹರಿಯುವ ಜಾಗದಲ್ಲಿ ಪುಟ್ಟ ಸೇತುವೆ ನಿರ್ಮಿಸಿದರೆ ಸಮಸ್ಯೆ ಇತ್ಯರ್ಥವಾಗುತ್ತದೆ. ಇಲ್ಲವಾದರೆ ಕಾಲುಸಂಕವನ್ನಾದರೂ ದುರಸ್ತಿ ಮಾಡಬೇಕಾಗಿದೆ. ಕಡ್ಕೆ ಭಾಗ ದ ನೂರಾರು ವಿದ್ಯಾರ್ಥಿಗಳು ಬೈಂದೂರು, ಶಿರೂರು, ಕುಂದಾಪುರದ ಶಾಲೆ, ಕಾಲೇಜಿಗೆ ತೆರಳುತ್ತಾರೆ. ಅನೇಕರು ಹೊರರಾಜ್ಯದಲ್ಲಿ ಉದ್ಯೋಗದಲ್ಲಿದ್ದಾರೆ. ಮಳೆಗಾಲದಲ್ಲಿ ಊರಿಗೆ ಬರುವುದೆಂದರೆ ಹರಸಾಹಸಪಡಬೇಕಾಗುತ್ತದೆ.

ಚುನಾವಣೆ ಸಮಯದಲ್ಲಿ ಮಾತ್ರ ಭರವಸ

ಇಲ್ಲಿನ ಸ್ಥಳೀಯರು ಪ್ರತೀ ಬಾರಿಯೂ ಕಾಲು ಸಂಕಕ್ಕಾಗಿ ಮನವಿ ಮಾಡುತ್ತಾರೆ. ಆದರೆ, ಚುನಾವಣೆ ಸಮಯದಲ್ಲಿ ಬರುವ ಜನನಾಯಕರು ಕೇವಲ ಭರವಸೆ ಮಾತ್ರ ನೀಡುತ್ತಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಕೇವಲ ಈ ಭಾಗಕ್ಕೆ ಸಾಗಬೇಕಾದರೆ ಎರಡು ಕಿ.ಮೀ. ಹೆಚ್ಚುವರಿ ಪ್ರಯಾಣ ಮಾಡಿ ಕಾಲುಸಂಕ ಅವಲಂಬಿಸಬೇಕಾಗಿದೆ.ೇತುವೆ ನಿರ್ಮಾಣ ಅತ್ಯವಶ್ಯಕ.

ಪುಟ್ಟ ಸೇತುವೆ ಮಾಡಿಕೊಡಿ
ಕಡ್ಕೆ ಸಮೀಪದ ವಿವಿಧ ಊರುಗಳಿಗೆ ಸಂಪರ್ಕ ಸಾಧಿಸಲು ಮಧ್ಯದಲ್ಲಿ ದೊಡ್ಡ ಹೊಳೆ ಹರಿಯುತ್ತದೆ. ಮಳೆಗಾಲದಲ್ಲಿ ಪ್ರತೀ ವರ್ಷ ಕಾಲುಸಂಕದ ಮೂಲಕ ತೆರಳಬೇಕು. ಹೀಗಾಗಿ ನಮಗೆ ಪುಟ್ಟ ಸೇತುವೆ ನಿರ್ಮಿಸಿದರೆ ಶಾಶ್ವತ ಪರಿಹಾರ ಸಾಧ್ಯ. ಜನಪ್ರತಿನಿಧಿಗಳು, ಜಿಲ್ಲಾಡಳಿತ ಈ ಬಗ್ಗೆ ಮನಸ್ಸು ಮಾಡಬೇಕಾಗಿದೆ. -ಮಹಾದೇವ ಗೊಂಡ, ಕಡ್ಕೆ ನಿವಾಸಿ

ಮತ್ತಾವು ಕಾಲು ಸಂಕ: ತಹಶೀಲಾರ್‌ ಪರಿಶೀಲನೆ
ಹೆಬ್ರಿ: ಮುದ್ರಾಡಿ ಗ್ರಾ.ಪಂ. ವ್ಯಾಪ್ತಿಯ ಕಬ್ಬಿನಾಲೆ ಮತ್ತಾವು ಕಾಲು ಸಂಕ ಪ್ರದೇಶಕ್ಕೆ ಹೆಬ್ರಿ ತಹಶೀಲ್ದಾರ್‌ ಪ್ರಸಾದ್‌ ಎಸ್‌. ಎ. ಹಾಗೂ ತಾ.ಪಂ. ಕಾರ್ಯನಿರ್ವಣಾಧಿಕಾರಿ ಶಶಿಧರ್‌ ಆ. 1ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

“ನಮಗೆ ಕಾಲ ಸಂಕ ಬೇಕು’ ಎಂಬ ಶೀರ್ಷಿಕೆ ಅಡಿ ಉದಯವಾಣಿಯ ಸುದಿನದಲ್ಲಿ ಪ್ರಕಟಗೊಂಡ ವರದಿ ಗಮನಿಸಿ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಕಾಲು ಸಂಕ ಅಗತ್ಯತೆ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ. ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಕಾಲು ಸಂಕ ಅಗತ್ಯವಿದೆ. ಗ್ರಾಮಸ್ಥರು ಭಯದ ನಡುವೆ ಕಾಲು ಸಂಕದಲ್ಲಿ ಸಂಚರಿಸುವುದು ಕಷ್ಟ ಸಾಧ್ಯ. ಆದ್ದರಿಂದ ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ್ದು, ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಲಾಗುವುದು ಎಂದು ತಹಶೀಲ್ದಾರ್‌ ತಿಳಿಸಿದರು.

– ಅರುಣ್‌ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next