Advertisement
ಕೂಟಗಳನ್ನು ಹೆಚ್ಚಿಸಬೇಕು– ಉಳಗನಾಥನ್, ಅಂ.ರಾ. ಖ್ಯಾತಿಯ ಮಾಜಿ ಫುಟ್‌ಬಾಲ್ ಆಟಗಾರ
ಮಕ್ಕಳು ಫುಟ್‌ಬಾಲ್ ಆಡುವಂತೆ ಪೋಷಕರು ಪ್ರೋತ್ಸಾಹ ನೀಡಬೇಕು. ಎಲ್ಲರೂ ಕ್ರಿಕೆಟ್ ಆಡಲಿ ಎಂದು ಬಯಸುತ್ತಾರೆ. ಹೀಗಾಗಿ ಪ್ರತಿಭೆಗಳ ಕೊರತೆಯಾಗಿದೆ. ಹಾಗೆಯೇ ವಿವಿಧ ವಯೋಮಿತಿಯ ಅಭ್ಯಾಸ ಶಿಬಿರಗಳು ನಡೆಯಬೇಕು. 9, 10, 11, 18 ಹೀಗೆ… ಬೇರೆ ಬೇರೆ ವಯೋಮಿತಿಯಲ್ಲಿ ತರಬೇತಿ ಶಿಬಿರಗಳು ನಡೆಯಬೇಕು. ಆಗ ಹೊಸ ಆಟಗಾರರು ಬರುತ್ತಾರೆ. ಹೀಗೆ ಬಂದ ಆಟಗಾರರು ಪಾಲ್ಗೊಳ್ಳಲು ಹೆಚ್ಚೆಚ್ಚು ಟೂರ್ನಮೆಂಟ್‌ಗಳು ನಡೆಯಬೇಕು. ಈಗ ಐಲೀಗ್, ಐಎಸ್‌ಎಲ್ ಬಂದಿರುವುದರಿಂದ ಹಲವು ಪ್ರಮುಖ ಕೂಟಗಳು ನಿಂತು ಹೋಗಿವೆ. ಹಿಂದೆ ಡುರಾಂಡ್, ರೋವರ್ಸ್, ಸಂತೋಷ್, ಫೆಡರೇಶನ್, ಬೆಂಗಳೂರಿನಲ್ಲಿ ಸ್ಟಾಫರ್ಡ್, ಚೆನ್ನೈಯಲ್ಲಿ ವಿಠuಲ್ ಕಪ್… ಹೀಗೆ ಹಲವಾರು ಕಪ್‌ಗ್ಳು ನಡೆಯುತ್ತಿದ್ದವು. ಈಗ ಅವುಗಳೆಲ್ಲ ನಿಂತುಹೋಗಿವೆ.
– ರವಿಕುಮಾರ್, ಮಾಜಿ ಅಂತಾರಾಷ್ಟ್ರೀಯ ಫುಟ್‌ಬಾಲ್ ಆಟಗಾರ
ಭಾರತದಲ್ಲಿ ಒಳ್ಳೆಯ ತರಬೇತಿ ವ್ಯವಸ್ಥೆಯಿಲ್ಲ. 9, 10 ವರ್ಷ ವಯಸ್ಸಿನ ಮಕ್ಕಳನ್ನು ಗುರುತಿಸಿ ಅವರಿಗೆ ಉಚಿತ ವಸತಿ, ವಿದ್ಯಾಭ್ಯಾಸದ ವ್ಯವಸ್ಥೆ ಮಾಡಬೇಕು. ನೂರಾರು ಪ್ರತಿಭಾವಂತ ಮಕ್ಕಳಿಗೆ ಐದಾರು ವರ್ಷ ತರಬೇತಿ ನೀಡಬೇಕು. ಪ್ರತೀ ರಾಜ್ಯಗಳಿಂದಲೂ ಆಟಗಾರರಿಗೆ ಅವಕಾಶ ನೀಡಬೇಕು. ಹಿಂದೆ ಭಾರತ ತಂಡದ ಪರವಾಗಿ ಕರ್ನಾಟಕದ ಹಲವರು ಆಡಿದ್ದಾರೆ. ಈಗ ರಾಜ್ಯದ ಆಟಗಾರರೇ ಇಲ್ಲ. ಇದು ಆಶ್ಚರ್ಯವಾಗುತ್ತದೆ. ಸದ್ಯ ಈಶಾನ್ಯಭಾರತದ ಆಟಗಾರರೇ ಭಾರತ ತಂಡದಲ್ಲಿ ಹೆಚ್ಚಾಗಿ ಕಾಣುತ್ತಾರೆ. ಹೀಗಾಗಬಾರದು. ಕನಿಷ್ಠ ಪ್ರತೀ ರಾಜ್ಯದಿಂದ 3-4 ಆಟಗಾರರನ್ನು ಆಯ್ಕೆ ಮಾಡಿ, ಅವರಿಗೆಲ್ಲ ತರಬೇತಿ ನೀಡಬೇಕು.
Related Articles
Advertisement
ಫುಟ್‌ಬಾಲ್ ಸಂಸ್ಕೃತಿ ರೂಪುಗೊಳ್ಳಬೇಕು– ಸತ್ಯನಾರಾಯಣ, ಕರ್ನಾಟಕ ಫುಟ್‌ಬಾಲ್ ಸಂಸ್ಥೆ ಕಾರ್ಯದರ್ಶಿ
ಫುಟ್‌ಬಾಲ್ ಚೆನ್ನಾಗಿ ಬೆಳೆದಿರುವ ದೇಶಗಳಲ್ಲಿ ಒಂದು ಫುಟ್‌ಬಾಲ್ ಸಂಸ್ಕೃತಿಯಿದೆ. ಚಿಕ್ಕ ವಯಸ್ಸಿನಿಂದಲೇ ಅಲ್ಲಿ ಆಡುತ್ತ ಬೆಳೆಯುವ ಮಕ್ಕಳು, ಮುಂದೆ ಪ್ರಭಾವಿ ಆಟಗಾರರಾಗುತ್ತಾರೆ. ಆ ದೇಶಗಳಲ್ಲಿ ಯೋಜಿತವಾಗಿ ಫುಟ್‌ಬಾಲ್ ಕ್ರೀಡೆಯನ್ನು ಬೆಳೆಸಲಾಗುತ್ತಿದೆ. 6, 8 ಹೀಗೆ ಚಿಕ್ಕ ವಯೋಮಿತಿಗಳಿಂದಲೇ ತರಬೇತಿ ನೀಡಿ ಬೆಳೆಸುತ್ತಾರೆ. ಭಾರತದಲ್ಲಿ ಆ ವ್ಯವಸ್ಥೆಯಿಲ್ಲ. ಅದು ಆಗಬೇಕು. ಭಾರತದಲ್ಲಿ ಮುಖ್ಯವಾಗಿ ಬೇಕಾಗಿರುವುದು ಅಂತಾರಾಷ್ಟ್ರೀಯ ಗುಣಮಟ್ಟದ ಕೋಚ್‌ಗಳು. ಅದನ್ನು ಒದಗಿಸಬೇಕಾಗಿದೆ. ಹಾಗೆಯೇ ಬೆಂಗಳೂರು ಮಹಾನಗರ ಪಾಲಿಕೆ ಮೈದಾನಗಳಲ್ಲಿ ಉಚಿತವಾಗಿ ಆಡಲು ಆಟಗಾರರಿಗೆ ಅವಕಾಶ ಸಿಗಬೇಕು. ಸಾಮಾನ್ಯವಾಗಿ ಅಲ್ಲಿ ಆಡಲು ಹೋದರೆ ಹಣ ಕೇಳುತ್ತಾರೆ. ಆದರೆ ಅದೇ ಮೈದಾನಗಳನ್ನು ರಾಜಕಾರಣಿಗಳು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳುತ್ತಾರೆ. ಆದರೆ ಇವೆಲ್ಲ ಸಣ್ಣ ಕಾರಣಗಳಷ್ಟೇ. ಮುಖ್ಯವಾಗಿ ಬೇಕಿರುವುದು ಒಳ್ಳೆಯ ಕೋಚ್‌ಗಳು. 15 ವರ್ಷಗಳ ಹಿಂದೆ ಭಾರತ ತಂಡ ಸೌದಿ ಅರೇಬಿಯಾ, ಒಮಾನ್‌ನಂತಹ ತಂಡಗಳನ್ನು ಅವರ ದೇಶಗಳಲ್ಲೇ ಮಣಿಸುತ್ತಿತ್ತು. ಆದರೆ ಈಗ ಆ ದೇಶಗಳು ತಮ್ಮ ಶ್ರೀಮಂತಿಕೆಯನ್ನು ಬಳಸಿ ಫುಟ್‌ಬಾಲ್ ಕ್ರೀಡೆಯನ್ನು ಬೆಳೆಸಿವೆ. ಅವರೆದುರು ಗೆಲ್ಲುವುದೇ ಭಾರತಕ್ಕೆ ಸವಾಲಾಗಿದೆ! ಹಾಗಾಗಿ ನಾವು ಸಣ್ಣ ವಯಸ್ಸಿನಿಂದಲೇ ಮಕ್ಕಳನ್ನು ಫುಟ್‌ಬಾಲ್‌ಗೆ ಒಗ್ಗಿಸಬೇಕಾಗಿದೆ. ಅದಕ್ಕಾಗಿ ಒಂದು ವ್ಯವಸ್ಥೆಯನ್ನು ರೂಪಿಸಬೇಕು. ಕ್ರೀಡಾಪಟುಗಳಿಗೆ ಕನಿಷ್ಠ 30 ಅಂಕ ಉಚಿತ ನೀಡಬೇಕು
– ಚಿತ್ರಾ ಗಂಗಾಧರ್, ಭಾರತ ಮಹಿಳಾ ಫುಟ್‌ಬಾಲ್ ತಂಡದ ಮಾಜಿ ನಾಯಕಿ
ಶಾಲೆಗಳಲ್ಲಿ ಫುಟ್‌ಬಾಲ್ ಅನ್ನು ಕಡ್ಡಾಯ ಮಾಡಬೇಕು. ಪೋಷಕರಿಗೆ ಕ್ರೀಡೆಯಿಂದಲೂ ಜೀವನ ಸಾಧ್ಯವಿದೆ ಎಂಬುದು ಅರಿವಾಗಬೇಕು. ಶಾಲಾಹಂತದಲ್ಲಿ ಈ ವ್ಯವಸ್ಥೆ ಸಿದ್ಧವಾಗಬೇಕು. ಈಗ ಮಹಿಳೆಯರನ್ನೇ ತೆಗೆದುಕೊಂಡರೆ ಶಾಲಾಹಂತದಲ್ಲಿ ಅವರಿಗೆ ಒಳ್ಳೆಯ ತರಬೇತಿ ಸಿಕ್ಕಿರುತ್ತದೆ. ಆದರೆ 16 ವರ್ಷ ದಾಟಿದ ಮೇಲೆ ಅವರು ಉನ್ನತ ವಿದ್ಯಾಭ್ಯಾಸವೆಂದು ಹೊರಟುಬಿಡುತ್ತಾರೆ. ಆಗ ಅವರಿಗೆ ನಾಲ್ಕೈದು ವರ್ಷಗಳ ಕಾಲ ನೀಡಿದ ತರಬೇತಿ, ಸೌಲಭ್ಯಗಳೆಲ್ಲ ವ್ಯರ್ಥವಾಗುತ್ತವೆ. ಕ್ರೀಡೆಯಿಂದ ಶಿಕ್ಷಣಕ್ಕೂ ಸಹಾಯವಾಗುತ್ತದೆ ಎಂಬ ವ್ಯವಸ್ಥೆ ರೂಪುಗೊಳ್ಳಬೇಕು. ಒಬ್ಬ ಆಟಗಾರ/ಆಟಗಾರ್ತಿ ರಾಜ್ಯ, ರಾಷ್ಟ್ರದ ಪರ ಆಡಿದರೆ ಕನಿಷ್ಠ 30 ಅಂಕಗಳು ಸಿಗುತ್ತವೆ. ಅವರು ಉಳಿದ 70 ಅಂಕಗಳಿಗೆ ಬರೆದರೆ ಸಾಕು ಎಂಬ ವಾತಾವರಣವಿರಬೇಕು. ಆಗ ಪೋಷಕರಿಗೂ ಭರವಸೆ ಬರುತ್ತದೆ. ಇನ್ನು ಕ್ರೀಡೆಯನ್ನು ಎಲ್ಲ ಮಕ್ಕಳಿಗೂ ಕಡ್ಡಾಯ ಮಾಡಬೇಕು. ಆಗ ಉತ್ತಮ ಆಟಗಾರರನ್ನು ನೋಡಿ ಮುಂದಿನ ಹಂತಕ್ಕೆ ಸಿದ್ಧಗೊಳಿಸಬಹುದು. ಸದ್ಯ ಪರಿಸ್ಥಿತಿ ಬದಲಾವಣೆಗೊಳ್ಳುತ್ತಿದೆ. ಹಾಗಾಗಿ ನಿರಾಶೆಗೊಳ್ಳುವ ಅಗತ್ಯವಿಲ್ಲ. ಭಾರತದಲ್ಲಿ ಮಹಿಳೆಯರನ್ನು ಸಿದ್ಧಗೊಳಿಸಲು ವ್ಯವಸ್ಥಿತವಾಗಿ ಪ್ರಯತ್ನಿಸಲಾಗುತ್ತಿದ್ದು, 40ಕ್ಕೂ ಅಧಿಕ ತಂಡಗಳನ್ನು ಮಾಡಲಾಗಿದೆ. – ಪೃಥ್ವಿಜಿತ್ ಕೆ.