Advertisement

ಆಹಾರ ಪೂರೈಕೆ; ಹಲವೆಡೆ ಏರಿಕೆ, ಕೆಲವೆಡೆ ಇಳಿಕೆ!

01:03 PM Oct 02, 2017 | Team Udayavani |

ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳಲ್ಲಿ ಬೆಳಗಿನ ತಿಂಡಿ, ಮಧ್ಯಾಹ್ನದ ಊಟದ ಸಂಖ್ಯೆ ಹೆಚ್ಚಿಸಿ, ರಾತ್ರಿ ಊಟದ ಸಂಖ್ಯೆ ಕಡಿಮೆ ಮಾಡಲು ನಿರ್ಧರಿಸಿರುವ ಬಿಬಿಎಂಪಿ, ಆಹಾರ ವಿತರಣೆ ಪಟ್ಟಿ ಪರಿಷ್ಕರಿಸುತ್ತಿದೆ.

Advertisement

ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನ ಊಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಇದರಿಂದ ಆಹಾರ ಬೇಗ ಖಾಲಿಯಾಗುತ್ತಿದ್ದು, ಹಲವರು ಹಸಿದೇ ವಾಪಸಾಗುತ್ತಿದ್ದಾರೆ. ಕೆಲವೆಡೆ ರಾತ್ರಿ ಆಹಾರ ಹಾಗೆ ಉಳಿಯುತ್ತಿದೆ. ಈ ಅಸಮತೋಲನ ಸರಿದೂಗಿಸಲು ಪಾಲಿಕೆ ಅಧಿಕಾರಿಗಳು ಪರಿಷ್ಕರಣೆಗೆ ಮುಂದಾಗಿದ್ದಾರೆ.

ಅಧ್ಯಯನ ನಡೆಸಿ ಸೂಚನೆ: ಇಂದಿರಾ ಕ್ಯಾಂಟೀನ್‌ ಆರಂಭವಾಗಿ ಒಂದೂವರೆ ತಿಂಗಳು ಕಳೆದಿದೆ. ಪ್ರಸ್ತುತ ಒಂದು ಹೊತ್ತಿಗೆ 300 ಜನರಿಗೆ ಊಟ ವಿತರಿಸುತ್ತಿದ್ದರೂ ಆಹಾರದ ಕೊರತೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಿ ವರದಿ ತಯಾರಿಸಿರುವ ಅಧಿಕಾರಿಗಳು, 101 ವಾರ್ಡ್‌ಗಳಲ್ಲಿ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಎಷ್ಟು ಜನರಿಗೆ ಆಹಾರ ವಿತರಿಸಬೇಕು ಎಂಬ ಪಟ್ಟಿ ಸಿದ್ಧಪಡಿಸಿ, ಅದರಂತೆ ಆಹಾರ ವಿತರಿಸಲು ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.

ಆಹಾರದ ಗುಣಮಟ್ಟ ಹಾಗೂ ರುಚಿ ಬಗ್ಗೆ ಜನ ತೃಪ್ತರಾಗಿದ್ದಾರೆ. ಆದರೆ, ವಿತರಣೆ ಆರಂಭವಾದ ಅರ್ಧ ಗಂಟೆಯಲ್ಲೇ ಆಹಾರ ಖಾಲಿಯಾಗುವ ಬಗ್ಗೆ ದೂರುಗಳಿವೆ. ಕಾರಣ, ಕ್ಯಾಂಟೀನ್‌ಗಳಿಗೆ ಭೇಟಿ ನೀಡುವ ಜನಸಂಖ್ಯೆಗೆ ಅನುಗುಣವಾಗಿ ಊಟದ ಸಂಖ್ಯೆ ನಿಗದಿಪಡಿಸುವಂತೆ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಯಾವ ವಾರ್ಡ್‌ನ ಕ್ಯಾಂಟೀನ್‌ನಲ್ಲಿ ಯಾವ ಹೊತ್ತಿಗೆ ಎಷ್ಟು ಆಹಾರ ವಿತರಿಸಬೇಕು ಎಂಬ ಹೊಸ ಪಟ್ಟಿ ಭಾನುವಾರದಿಂದಲೇ ಜಾರಿಗೆ ಬಂದಿದೆ.  ಪಾಲಿಕೆಯಿಂದ 101 ಕ್ಯಾಂಟೀನ್‌ಗಳಿಗೆ ನೇಮಿಸಿರುವ ನೋಡಲ್‌ ಅಧಿಕಾರಿಗಳು ಒಂದೂವರೆ ತಿಂಗಳಿನಿಂದ ಆಯಾ ಕ್ಯಾಂಟೀನಗಳಲ್ಲಿ ವಿತರಣೆಯಾದ, ಉಳಿಕೆಯಾದ ಹಾಗೂ ಕೊರತೆಯಾದ ಊಟದ ಸಂಖ್ಯೆಗಳ ಮಾಹಿತಿ ಕಲೆಹಾಕಿದ್ದಾರೆ.

Advertisement

ಹಲವು ಕ್ಯಾಂಟೀನ್‌ಗಳಲ್ಲಿ ತಿಂಡಿ-ಊಟ ಬೇಗ ಖಾಲಿಯಾಗುತ್ತಿದ್ದು, ವಿತರಿಸುವ ಪ್ಲೇಟ್‌ ಆಹಾರದ ಸಂಖ್ಯೆ ಹೆಚ್ಚಿಸಬೇಕು ಎಂಬ ಮನವಿಗಳು ಬಂದಿವೆ. ಇದಕ್ಕೆ ಪೂರಕವಾಗಿ ನೋಡಲ್‌ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಅದಕ್ಕನುಗುಣವಾಗಿ ಆಹಾರ ಪೂರೈಸಲು ಗುತ್ತಿಗೆ ಸಂಸ್ಥೆಗಳಿಗೆ ಆದೇಶಿಸಲಾಗಿದೆ.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

ಈ ಕ್ಯಾಂಟೀನ್‌ಗಳಿಗಿನ್ನು ಆಹಾರ ಪೂರೈಕೆ ಕಡಿಮೆ
ವಾರ್ಡ್‌    ತಿಂಡಿ    ಮಧ್ಯಾಹ್ನ ಊಟ
-ಕೆ.ಜಿ.ಹಳ್ಳಿ    250    250
-ಈಜೀಪುರ        300    300
-ಕರಿಸಂದ್ರ    300    300
-ಮಾರುತಿಸೇವಾನಗರ    300    400
-ಹೊಯ್ಸಳನಗರ    300    300

ಇಲ್ಲಿ ರಾತ್ರಿ ಊಟದ ಸಂಖ್ಯೆ ಇಳಿಕೆ
-ಆರ್‌.ಆರ್‌.ನಗರ    100
-ಉಳ್ಳಾಲ    150
-ಚಂದ್ರ ಲೇಔಟ್‌    200
-ಕೊಟ್ಟಿಗೆಪಾಳ್ಯ    200
-ಬಸವನಗುಡಿ    200

ಆಹಾರ ಪೂರೈಕೆ ಏರಿಕೆಯಾದ ಕ್ಯಾಂಟೀನ್‌ಗಳು
ವಾರ್ಡ್‌    ತಿಂಡಿ    ಮಧ್ಯಾಹ್ನ ಊಟ    ರಾತ್ರಿ ಊಟ
-ಮಹಾಲಕ್ಷ್ಮೀಪುರ    600    600    400
-ಜಯನಗರ    600    600    300
-ಸುಭಾಷ್‌ನಗರ    600    600    400    
-ಕೊಡಿಗೆಹಳ್ಳಿ    500    500    400
-ಕೆಂಪೇಗೌಡನಗರ    500    500    400
-(ಸಂಖ್ಯೆ ಪ್ಲೇಟ್‌ಗಳಲ್ಲಿ)

Advertisement

Udayavani is now on Telegram. Click here to join our channel and stay updated with the latest news.

Next