Advertisement
ಉಡುಪಿ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಜಾರಿ ಬಳಿಕ ಉಡುಪಿ ಜಿಲ್ಲೆಯಲ್ಲಿ 4,980 ಮಂದಿ ಆಹಾರ ಉತ್ಪನ್ನಗಳ ತಯಾರಕರು ಮತ್ತು ಮಾರಾಟಗಾರರು ನೋಂದಣಿ ಮಾಡಿಕೊಂಡಿದ್ದು, 3,507 ಮಂದಿ ಪರವಾನಿಗೆ ಪಡೆದಿದ್ದಾರೆ. ಈ ವರ್ಷ 1364 ಮಂದಿ ನೋಂದಣಿ ಹಾಗೂ 895 ಮಂದಿ ಪರವಾನಿಗೆ ಪಡೆದಿದ್ದಾರೆ.
12 ಲಕ್ಷ ರೂ.ವರೆಗೆ ವಾರ್ಷಿಕ ವಹಿವಾಟು ಹೊಂದಿರುವ ಆಹಾರ ಪದಾರ್ಥಗಳ ಮಾರಾಟ ಮತ್ತು ಉತ್ಪಾದಕರು ವಾರ್ಷಿಕ 100 ರೂ. ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. ಇದಕ್ಕಿಂತ ಹೆಚ್ಚು ಆದಾಯ ಹೊಂದಿರುವವರು ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ. ಒಂದು ವರ್ಷ, 2 ವರ್ಷ, 3 ವರ್ಷ, 5 ವರ್ಷ ಹೀಗೆ 4 ಹಂತಗಳಲ್ಲಿ ಪರವಾನಿಗೆ ಅಥವಾ ನೊಂದಣಿ ಮಾಡಿಕೊಳ್ಳಲು ಅವಕಾಶವಿದೆ. ಪರವಾನಿಗೆ ಪಡೆದವರು ತಮ್ಮ ಅಂಗಡಿ ಅಥವಾ ಸಂಸ್ಥೆಗಳಲ್ಲಿ ಪ್ರಮಾಣ ಪತ್ರವನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕಿದೆ. ಯಾರೆಲ್ಲ ಪಡೆಯಬೇಕು? ಬೇಕರಿಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು, ವೈನ್ ಸ್ಟೋರ್‌ಗಳು, ಹೋಟೆಲ್‌ಗಳು, ಕ್ಯಾಂಟೀನ್‌ಗಳು, ಕ್ಲಬ್‌ಗಳು, ತಂಪು ಪಾನೀಯ ತಯಾರಿಕ ಘಟಕಗಳು, ಪ್ಯಾಕೇಜ್x ಡ್ರಿಂಕಿಂಗ್ ನೀರಿನ ಘಟಕಗಳು, ರಸ್ತೆ ಬದಿಯ ಆಹಾರ ವ್ಯಾಪಾರಿಗಳು, ಡಾಬಾ, ಶಾಲಾ ಕಾಲೇಜು ಕಚೇರಿಯ ಕ್ಯಾಂಟೀನ್, ವಸತಿ ನಿಲಯಗಳು, ನ್ಯಾಯ ಬೆಲೆ ಅಂಗಡಿ, ಸರಕಾರಿ ಮತ್ತು ಸರಕಾರೇತರ ವಸತಿ ನಿಲಯಗಳು, ಕೋಳಿ, ಮೀನು ಮತ್ತು ಮಾಂಸ ಮಾರಾಟ ಅಂಗಡಿಗಳು, ಹಣ್ಣು ಮತ್ತು ತರಕಾರಿ ವ್ಯಾಪಾರಿಗಳು,ಪ್ರಸಾದ ವಿತರಿಸುವ ಧಾರ್ಮಿಕ ಕೇಂದ್ರಗಳು, ಸಮುದಾಯ ಭವನ, ಕಲ್ಯಾಣ ಮಂಟಪಗಳ ಊಟದ ಸಂಯೋಜಕರು, ಕ್ಯಾಟರಿಂಗ್ ವ್ಯವಹಾರ ಮಾಡುವವರು, ಮೀನು ಹಾಗೂ ಇತರ ಆಹಾರ ಪದಾರ್ಥಗಳ ಸಾಗಣೆದಾರರು, ಆಹಾರ ಉಗ್ರಾಣ ಸಂಘಟನೆಗಳ ಎಲ್ಲಾ ಆಹಾರ ಸಂಸ್ಕರಣೆ ಘಟಕಗಳು ಮತ್ತು ಆಹಾರ ಪಧಾರ್ಥಗಳ ಆಮದುದಾರರು, ಎಲ್ಲಾ ಆಹಾರ ಪದಾರ್ಥ ವಹಿವಾಟುದಾರರು ನೋಂದಣಿ ಅಥವಾ ಪರವಾನಗಿ ಪಡೆದುಕೊಳ್ಳಬೇಕು. ಈ ವರ್ಷ ಕಡ್ಡಾಯವಾಗಿ ಜನವರಿ 31ರ ಒಳಗಾಗಿ ನೋಂದಣಿ ಮಾಡಿಸಿಕೊಳ್ಳಬೇಕಿದೆ.
Related Articles
Advertisement
ಜಿಲ್ಲಾ ಅಂಕಿತ ಅಧಿಕಾರಿಗಳು ಪರವಾನಿಗೆ ನೀಡುವ ಹಾಗೂ ತಾಲೂಕು ಆಹಾರ ಸುರಕ್ಷತಾ ಅಧಿಕಾರಿಗಳು ನೋಂದಣಿ ಮಾಡುವ ಅಧಿಕಾರ ಹೊಂದಿದ್ದಾರೆ.
ಪುನೀತ್ ಸಾಲ್ಯಾನ್