Advertisement

ಇಂದಿರಾ ಕ್ಯಾಂಟೀನ್‌ಗಳಲ್ಲಿ ವಿಷಾಹಾರ!

06:29 AM Mar 19, 2019 | Team Udayavani |

ಬೆಂಗಳೂರು: ಇಂದಿರಾ ಕ್ಯಾಂಟೀನ್‌ ಆಹಾರ ಸೇವಿಸಿದರೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಅಂಶ ವರದಿಗಳಿಂದ ಬಯಲಾಗಿದೆ ಎಂದು ಬಿಜೆಪಿ ಪಾಲಿಕೆ ಸದಸ್ಯ ಉಮೇಶ್‌ ಶೆಟ್ಟಿ ಆರೋಪಿಸಿದ್ದಾರೆ. 

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್‌ಗಳಲ್ಲಿ ನೀಡುತ್ತಿರುವ ಆಹಾರದ ಪರೀಕ್ಷೆ ನಡೆಸಿದ ಸಾರ್ವಜನಿಕ ಆರೋಗ್ಯ ಸಂಸ್ಥೆ ಹಾಗೂ ಎಂ.ಎಸ್‌.ರಾಮಯ್ಯ ಆಸ್ಪತ್ರೆಯ ಪ್ರಾಯೋಗಾಲಯಗಳ ವರದಿಯಿಂದ ಇದು ದೃಢಪಟ್ಟಿದೆ. ಇಂದಿರಾ ಕ್ಯಾಂಟೀನ್‌ ಆಹಾರದಲ್ಲಿ ಫ‌ಂಗಸ್‌, ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಮನುಷ್ಯರ ಸೇವೆಗೆ ಯೋಗ್ಯವಲ್ಲ ಎಂದು ಸಂಸ್ಥೆಗಳು ವರದಿ ನೀಡಿವೆ ಎಂದರು. 

ಮೇಯರ್‌ ಗಂಗಾಂಬಿಕೆ ಅವರ ನಿವಾಸವಿರುವ ಜಯನಗರ ವಾರ್ಡ್‌ನ ಇಂದಿರಾ ಕ್ಯಾಂಟೀನ್‌ನಲ್ಲಿ 150 ಎಂಎಲ್‌ ಸಂಬಾರು, ಮುಖ್ಯಮಂತ್ರಿಗಳ ನಿವಾಸವಿರುವ ಜೆ.ಪಿ.ನಗರ ವಾರ್ಡ್‌ ಕ್ಯಾಂಟೀನ್‌ನಲ್ಲಿ 100 ಎಂಎಲ್‌ ಸಂಬಾರು, ಉಪಮೇಯರ್‌ ಭದ್ರೇಗೌಡ ಅವರ ನಾಗಪುರ ವಾರ್ಡ್‌ನ ಕ್ಯಾಂಟೀನ್‌ನಲ್ಲಿ 460 ಗ್ರಾಂ ಅನ್ನ ಹಾಗೂ 240 ಎಂಎಲ್‌ ಸಂಬಾರು ಮಾದರಿಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗೆ ಪರೀಕ್ಷೆ ನೀಡಲಾಗಿತ್ತು ಎಂದು ಮಾಹಿತಿ ನೀಡಿದರು. 

ಕ್ಯಾಂಟೀನ್‌ಗಳಿಗೆ ಪೂರೈಕೆಯಾಗುತ್ತಿರುವ ಆಹಾರವನ್ನು ಸಾರ್ವಜನಿಕರು ಆರು ತಿಂಗಳ ಕಾಲ ಸೇವನೆ ಮಾಡಿದರೆ, ವಾಂತಿ, ಭೇದಿ ಮತ್ತು ಮಿದುಳು ಸಂಬಂಧಿ ಕಾಯಿಲೆಗಳು ಹಾಗೂ ಕಡಿಮೆ ರಕ್ತದೊತ್ತದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಬಡವರಿಗೆ ವಿಷಕಾರಿ ಆಹಾರ ಪೂರೈಕೆ ಮಾಡುತ್ತಿರುವ ಚೆಫ್ಟಾಕ್‌ ಹಾಗೂ ರಿವಾರ್ಡ್‌ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪಾಲಿಕೆಯ 198 ವಾರ್ಡ್‌ಗಳ ಕ್ಯಾಂಟೀನ್‌ಗಳಲ್ಲಿ ಸಾವಿರಾರು ಮಂದಿ ಬಡವರು ಊಟ ಮಾಡುತ್ತಾರೆ. ಇದರೊಂದಿಗೆ ಪೌರಕಾರ್ಮಿಕರಿಗೂ ಇಂದಿರಾ ಕ್ಯಾಂಟೀನ್‌ಗಳಿಂದಲೇ ಆಹಾರ ಪೂರೈಕೆ ಮಾಡುತ್ತಿದ್ದು, ಅವರ ಆರೋಗ್ಯದಲ್ಲಿ ಏರುಪೇರಾದರೆ ಹೊಣೆ ಯಾರು? ಎಂದು ಪ್ರಶ್ನಿಸಿದ ಉಮೇಶ್‌ ಶೆಟ್ಟಿ, ಕ್ಯಾಂಟೀನ್‌ ಆಹಾರ ಸೇವನೆಯಿಂದ ವಾಂತಿ, ಭೇದಿ ಕಾಣಿಸಿಕೊಂಡ ಪರಿಣಾಮ ಈಗಾಗಲೇ ಪೌರಕಾರ್ಮಿಕರು ಕ್ಯಾಂಟೀನ್‌ ಊಟ ತ್ಯಜಿಸಿದ್ದಾರೆ ಎಂದು ಹೇಳಿದರು. 

Advertisement

ಸುಳ್ಳು ಲೆಕ್ಕ ನೀಡಿ ಬಿಲ್‌: ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡ್‌ನ ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಾವಿರಾರು ಜನ ತಿಂಡಿ-ಊಟ ಮಾಡುತ್ತಿದ್ದಾರೆ ಎಂದು ಸುಳ್ಳು ಲೆಕ್ಕ ನೀಡಿ ಹಣ ಪಡೆಯಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಕ್ಯಾಂಟೀನ್‌ಗಳಲ್ಲಿ ಹೊತ್ತಿಗೆ 20 ಜನ ಕೂಡ ಆಹಾರ ಸೇವನೆ ಮಾಡುತ್ತಿಲ್ಲ.

ಕ್ಯಾಂಟೀನ್‌ಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಜತೆಗೆ ಎಷ್ಟು ಜನ ಬಂದಿದ್ದಾರೆ ಎಂದು ಫ‌ಲಕಗಳ ಮೂಲಕ ತಿಳಿಸುತ್ತಿದ್ದ ಪದ್ಧತಿಯನ್ನೂ ಉದ್ದೇಶಪೂರ್ವಕವಾಗಿ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳು, ಲೋಕಾಯುಕ್ತರು ಹಾಗೂ ಎಸಿಬಿಗೆ ದೂರು ನೀಡಲಾಗುವುದು ಎಂದು ಹೇಳಿದರು.

ಕಳಪೆ ಆಹಾರ ಪೂರೈಸುತ್ತಿರುವ ಕುರಿತ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದೇನೆ. ಕಳಪೆ ಆಹಾರ ಪೂರೈಸುತ್ತಿರುವುದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು.
-ಡಾ.ಜಿ.ಪರಮೇಶ್ವರ್‌, ಉಪಮುಖ್ಯಮಂತ್ರಿ

ಕ್ಯಾಂಟೀನ್‌ಗಳಲ್ಲಿ ವಿಷಕಾರಿ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಕೂಡಲೇ ಇಂದಿರಾ ಕ್ಯಾಂಟೀನ್‌ನ ಅಡುಗೆ ಮನೆಗಳಲ್ಲಿ ಬಳಸುವ ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

ಮುಂದಿನ ಮೂರು ದಿನಗಳು ಕ್ಯಾಂಟೀನ್‌ ಆಹಾರವನ್ನು ಪ್ರಾಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಂದೊಮ್ಮೆ ಗುಣಮಟ್ಟ ಇಲ್ಲದಿರುವುದು ಪತ್ತೆಯಾದರೆ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು.
-ಗಂಗಾಂಬಿಕೆ, ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next