Advertisement
ಸಾಮಾನ್ಯ ಎದೆಹಾಲಿಗಿಂತ ದಪ್ಪಗೆ, ಹಳದಿ ವರ್ಣದಲ್ಲಿದ್ದು, ಪ್ರಸವಿಸಿದ ಬಳಿಕ ಕೆಲವು ದಿನಗಳ ಕಾಲ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಉತ್ಪಾದನೆಯಾಗುವ ಪ್ರಥಮ ಸ್ತನ್ಯ ಅಥವಾ ಕೊಲೊಸ್ಟ್ರಮ್ ಅನ್ನು ನವಜಾತ ಶಿಶು ಪಡೆಯುವುದು ಬಹಳ ಮುಖ್ಯ. ಇದು ಶಿಶುವಿಗೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಮಾತ್ರವಲ್ಲದೆ, ಮಗುವಿನ ರೋಗನಿರೋಧಕ ಶಕ್ತಿಯನ್ನು ಶಕ್ತಿಯುತಗೊಳಿಸುವ ಆ್ಯಂಟಿಬಾಡಿಗಳನ್ನು ಒದಗಿಸುವ ಮೂಲಕ ಜನನದ ಬಳಿಕ ಮರಣಕ್ಕೆ ಈಡಾಗುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಪ್ರಥಮ ಸ್ತನ್ಯವು ವಿಟಮಿನ್ ಎ ಸಮೃದ್ಧವೂ ಆಗಿದೆ.
ನವಜಾತ ಶಿಶುವಿಗೆ ಮೊದಲ ಆರು ತಿಂಗಳುಗಳ ಕಾಲ ನೀರು ಸಹಿತ ಇತರ ಯಾವುದೇ ಪೂರಕ ಆಹಾರ, ದ್ರವಗಳನ್ನು ನೀಡದೆ ಎದೆಹಾಲನ್ನಷ್ಟೇ ಊಡಿಸುವುದನ್ನು ಸಂಪೂರ್ಣ ಎದೆಹಾಲೂಡುವಿಕೆ ಎನ್ನಲಾಗುತ್ತದೆ. ಆರು ತಿಂಗಳುಗಳ ಬಳಿಕ ಎರಡು ವರ್ಷಗಳ ತನಕ ಅಥವಾ ಅದಕ್ಕಿಂತ ಹೆಚ್ಚು ಕಾಲ ಶಿಶುವಿಗೆ ಎದೆಹಾಲು ನೀಡುವುದರ ಜತೆಗೆ ಇತರ ಆಹಾರಗಳನ್ನು ನೀಡಬೇಕು. ಎರಡು ವರ್ಷಗಳ ಬಳಿಕ ಎದೆಹಾಲು ಉಣ್ಣಿಸಬೇಕೇ ಬೇಡವೇ ಎನ್ನುವುದು ಸಂಪೂರ್ಣವಾಗಿ ತಾಯಿ ಮತ್ತು ಮಗುವನ್ನು ಅವಲಂಬಿಸಿದೆ. ಮೊದಲ ಆರು ತಿಂಗಳುಗಳ ಜೀವಿತಾವಧಿಯಲ್ಲಿ ಶಿಶುವಿನ ಆಹಾರ ಮತ್ತು ನೀರಿನ ಅಗತ್ಯಗಳನ್ನು ಸ್ತನ್ಯಪಾನವೇ ಸಂಪೂರ್ಣವಾಗಿ ಈಡೇರಿಸುತ್ತದೆ. ಈ ಅವಧಿಯಲ್ಲಿ ಬದುಕುಳಿಯುವುದು ಮತ್ತು ಸಂಪೂರ್ಣ ಬೆಳವಣಿಗೆಗೆ ಶಿಶುವಿಗೆ ಅಗತ್ಯವಾಗಿರುವುದು ಎದೆಹಾಲು ಮಾತ್ರ. ಎದೆಹಾಲು ಶಕ್ತಿಯ ಮೂಲವಾಗಿದೆಯಲ್ಲದೆ, ಕೊಬ್ಬು, ವಿಟಮಿನ್ ಎ, ಕ್ಯಾಲ್ಸಿಯಂ ಮತ್ತು ರಿಬೊಫ್ಲಾವಿನ್‌ನಂತಹ ಪೌಷ್ಟಿಕಾಂಶಗಳ ಪ್ರಧಾನ ಮೂಲವಾಗಿದೆ. ಮೊದಲ ಆರು ತಿಂಗಳುಗಳ ಅವಧಿಯಲ್ಲಿ ಶಿಶುವಿಗೆ ನೀಡುವ ಇತರ ಪೂರಕ ಆಹಾರಗಳು ಅವುಗಳ ಬೆಳವಣಿಗೆಗೆ ಯಾವುದೇ ರೀತಿಯಲ್ಲಿ ಸಹಕಾರ ನೀಡುವುದಿಲ್ಲ. ಅಷ್ಟು ಮಾತ್ರವಲ್ಲದೆ, ಅವು ಎದೆಹಾಲಿಗೆ ಪರ್ಯಾಯವಾಗಿ ನೀಡಿಕೆಯಾಗುವುದರಿಂದ ಆಗಾಗ ಸೋಂಕುಗಳು ಹಾಗೂ ಕಳಪೆ ಬೆಳವಣಿಗೆ ಮತ್ತು ಪ್ರಗತಿಗೆ ಕಾರಣವಾಗುವ ಅಪಾಯವಿದೆ. ಮೊದಲ ಆರು ತಿಂಗಳುಗಳ ಅವಧಿಯಲ್ಲಿ ಸ್ತನ್ಯವು ಶಿಶುವಿಗೆ ಅತ್ಯುತ್ಕೃಷ್ಟವಾದ ಮತ್ತು ಸಂಪೂರ್ಣವಾದ ಪೌಷ್ಟಿಕತೆಯನ್ನು ಒದಗಿಸುತ್ತದೆ. ಸಂಪೂರ್ಣವಾಗಿ ಎದೆಹಾಲನ್ನು ಉಣ್ಣುವ ಶಿಶುವಿಗೆ ನೀರು, ಗುÉಕೋಸ್ ನೀರು, ಹಣ್ಣಿನ ರಸಗಳಂತಹ ಯಾವುದೇ ಆಹಾರ ಅಥವಾ ದ್ರವಾಹಾರದ ಅಗತ್ಯ ಮೊದಲ ಆರು ತಿಂಗಳುಗಳ ಅವಧಿಯಲ್ಲಿ ಇರುವುದಿಲ್ಲ. ತೀವ್ರ ಸೆಖೆಯ ಅಥವಾ ಹೆಚ್ಚು ಉಷ್ಣತೆಯ ಹವಾಮಾನದಲ್ಲಿಯೂ ಶಿಶುವಿನ ಜಲಾಂಶ ಅಗತ್ಯಗಳನ್ನು ಈಡೇರಿಸಲು ಎದೆಹಾಲು ಸಮರ್ಥವಾಗಿರುತ್ತದೆ.
Related Articles
– ಶಿಶುವಿಗೆ ಅಗತ್ಯವಾದ ಎಲ್ಲ ಪೌಷ್ಟಿಕಾಂಶಗಳನ್ನು ಅಗತ್ಯವಾದ ಪ್ರಮಾಣದಲ್ಲಿ ಒದಗಿಸುತ್ತದೆ.
– ಅಲರ್ಜಿಗಳು, ಅನಾರೋಗ್ಯಗಳು ಮತ್ತು ಬೊಜ್ಜಿನಿಂದ ರಕ್ಷಣೆ ನೀಡುತ್ತದೆ.
– ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳಿಂದ ರಕ್ಷಿಸುತ್ತದೆ.
– ಕಿವಿಯ ಸೋಂಕಿನಂತಹ ಸೋಂಕುಗಳಿಂದ ಕಾಪಾಡುತ್ತದೆ.
– ಎದೆಹಾಲು ಸುಲಭವಾಗಿ ಜೀರ್ಣವಾಗುತ್ತದೆ, ಹೀಗಾಗಿ ಮಲಬದ್ಧತೆ, ಭೇದಿ ಅಥವಾ ಹೊಟ್ಟೆ ಹಾಳಾಗುವ ಸಂಭವ ಇರುವುದಿಲ್ಲ.
– ಮಗು ಬೆಳೆಯುವಾಗ ಆರೋಗ್ಯಕರ ದೇಹ ತೂಕ ಹೊಂದಿರುತ್ತದೆ.
– ಸ್ತನ್ಯವನ್ನುಂಡು ಬೆಳೆದ ಮಕ್ಕಳು ಹೆಚ್ಚು ಬುದ್ಧಿಮತ್ತೆ ಹೊಂದಿರುತ್ತಾರೆ.
– ಮಗು ಮೊಲೆಯನ್ನು ಚೀಪುವುದರಿಂದ ಪ್ರಸವದ ಬಳಿಕ ವಿಸ್ತಾರಗೊಂಡಿರುವ ತಾಯಿಯ ಗರ್ಭಕೋಶ ಸಂಕುಚನಗೊಳ್ಳುತ್ತದೆ ಹಾಗೂ ರಕ್ತಸ್ರಾವ ತಡೆಹಿಡಿಯಲ್ಪಡುತ್ತದೆ.
– ಮಗುವಿಗೆ ಎದೆಹಾಲು ಉಣ್ಣಿಸುವ ಅವಧಿಯಲ್ಲಿ ಋತುಸ್ರಾವ ತಡೆಹಿಡಿಯಲ್ಪಡುವುದರಿಂದ ಇದು ಗರ್ಭಧಾರಣೆ ನಿಯಂತ್ರಣದ ಒಂದು ರೂಪವೂ ಆಗಿರುತ್ತದೆ.
– ಮಗುವಿಗೆ ಬಾಟಲಿ ಹಾಲು ಕುಡಿಸುವ ತಾಯಂದಿರಿಗಿಂತ ಎದೆಹಾಲು ಉಣ್ಣಿಸುವ ತಾಯಂದಿರು ಹೆಚ್ಚು ಬೇಗನೆ ತೂಕ ಕಳೆದುಕೊಂಡು ಉತ್ತಮ ಅಂಗಸೌಷ್ಠವ ಪಡೆಯುತ್ತಾರೆ.
– ಎದೆಹಾಲು ಉಣ್ಣಿಸುವ ತಾಯಂದಿರು ಭವಿಷ್ಯದಲ್ಲಿ ಸ್ತನ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
– ಇತರ ಪೂರಕ ಆಹಾರ ಒದಗಿಸುವುದಕ್ಕಿಂತ ಎದೆಹಾಲು ಉಣ್ಣಿಸುವುದು ಆರ್ಥಿಕವಾಗಿಯೂ ಉತ್ತಮ.
– ಎದೆಹಾಲು ಉಣ್ಣಿಸುವುದರಿಂದ ತಾಯಿ-ಮಗುವಿನ ಬಾಂಧವ್ಯ ಚೆನ್ನಾಗಿ ಬೆಳೆಯುತ್ತದೆ.
Advertisement
ಒಂದು ಸ್ತನದಿಂದ ಎದೆಹಾಲು ಸಂಪೂರ್ಣವಾಗಿ ಖಾಲಿಯಾದ ಬಳಿಕವಷ್ಟೇ ಇನ್ನೊಂದು ಸ್ತನದಿಂದ ಹಾಲು ಕುಡಿಸುವುದು ಉತ್ತಮವಾದ ಕ್ರಮ. ಮಗುವಿಗೆ ಈ ಕ್ರಮದಿಂದ ಮಾತ್ರ:– ಬಾಯಾರಿಕೆಯನ್ನು ತಣಿಸುವ “ಮುಂದಿನ ಹಾಲು’;
– ಹಸಿವನ್ನು ಇಂಗಿಸುವ “ಹಿಂದಿನ ಹಾಲು’ಸಿಗುವುದಕ್ಕೆ ಸಾಧ್ಯವಾಗುತ್ತದೆ. ಹಗಲಿನ ಅವಧಿಯಲ್ಲಿ ತಾಯಿಯು ಶಿಶುವಿನಿಂದ ದೂರ ಇರುವುದಾಗಿದ್ದಲ್ಲಿ ಎದೆಹಾಲನ್ನು ಹಿಂಡಿ ತೆಗೆದಿರಿಸಿ ಆ ಅವಧಿಯಲ್ಲಿ ಶಿಶುವಿಗೆ ನೀಡುವುದು ಸಾಧ್ಯವಿದೆ. ಹೀಗೆ ಮಾಡುವುದಾಗಿದ್ದಲ್ಲಿ ಕೆಲವು ಅಂಶಗಳನ್ನು ಅಗತ್ಯವಾಗಿ ನೆನಪಿನಲ್ಲಿ ಇರಿಸಿಕೊಳ್ಳಬೇಕು:
– ಹಿಂಡಿ ತೆಗೆದಿರಿಸಿದ ಎದೆಹಾಲನ್ನು ಕೊಠಡಿಯ ಉಷ್ಣತೆಯಲ್ಲಿ ಎಂಟು ತಾಸುಗಳ ಕಾಲ ಮತ್ತು ಫ್ರಿಜ್‌ನಲ್ಲಿ 24 ತಾಸುಗಳ ಕಾಲ ಮಾತ್ರ ಕಾಯ್ದಿಡಬಹುದಾಗಿದೆ.
– ಹಿಂಡಿ ತೆಗೆದಿರಿಸಿದ ಹಾಲನ್ನು ಶುಚಿಯಾಗಿರುವ ಒಳಲೆಯ ಸಹಾಯದಿಂದ ಶಿಶುವಿಗೆ ಉಣ್ಣಿಸಬಹುದು.
– ಹಿಂಡಿ ತೆಗೆದಿರಿಸಿದ ಹಾಲನ್ನು ಬಾಟಲಿಯ ಮೂಲಕ ನೀಡಬಾರದು; ಹಾಗೆ ಮಾಡಿದರೆ ಎದೆಹಾಲನ್ನು ಚೀಪಿ ಕುಡಿಯುವ ಪ್ರಕ್ರಿಯೆಗೆ ತೊಂದರೆ ಉಂಟಾಗಬಹುದು. (ಮುಂದುವರಿಯುತ್ತದೆ)