ಆಹಾರದಲ್ಲಿರುವ ಆರು ಬಗೆಯ ರುಚಿಯನ್ನು ಷಡ್ರಸ (ಷಟ್- ಆರು, ರಸ- ರುಚಿ) ಎಂದು ಕರೆಯಲಾಗುತ್ತದೆ. ಆಯುರ್ವೇದ ಶಾಸ್ತ್ರದ ಪ್ರಕಾರ ಷಡ್ರಸ ಎಂದರೆ ಮಧುರ (ಸಿಹಿ), ಆಮ್ಲ (ಹುಳಿ), ಲವಣ (ಉಪ್ಪು), ತಿಕ್ತ (ಕೈಕ್ಕೆ), ಕಟು (ಖಾರ), ಕಷಾಯ (ಒಗರು). ನಿತ್ಯವೂ ನಮ್ಮ ಆಹಾರದಲ್ಲಿ ಯಾವ ರಸವೂ ಅತಿಯಾಗಬಾರದು ಹಾಗೂ ಕಡಿಮೆಯೂ ಆಗಬಾರದು.
Advertisement
ನಮ್ಮ ದೇಹದ ಧಾತುಗಳ ವೃದ್ಧಿಗೆ ಮಧುರ ರಸ ಅತ್ಯಗತ್ಯ. ಹುಟ್ಟಿದಾಗಲೇ ನಾವು ತಾಯಿ ಹಾಲನ್ನು ಕುಡಿಯುತ್ತೇವೆ. ಇದರಿಂದ ನಮ್ಮ ದೇಹ ಮಧುರ ರಸಕ್ಕೆ ಒಗ್ಗಿಕೊಳ್ಳುತ್ತದೆ. ಪಂಚ ಜ್ಞಾನೇಂದ್ರಿಯ ಮತ್ತು ಮನಸ್ಸನ್ನು ಪ್ರಶಾಂತವಾಗಿರಿಸಲು, ಶಕ್ತಿಯನ್ನು ವೃದ್ಧಿಸಲು, ಪಿತ್ತ, ವಾತ, ದಾಹ ಕಡಿಮೆ ಮಾಡಲು ಶರೀರದ ಒಟ್ಟು ಪೋಷಣೆಗೆ ಮಧುರ ರಸ ಅತ್ಯಗತ್ಯ. ಮಧುರ ರಸದಲ್ಲಿ ಸ್ನಿಗ್ಧ ಗುಣ ಪ್ರಧಾನವಾಗಿದ್ದು, ದೇಹದಲ್ಲಿ ನಿಧಾನವಾಗಿ ಕರಗುವುದು. ಉದಾ: ಹಾಲು, ತುಪ್ಪ, ಅಕ್ಕಿ, ಗೋಧಿ, ಬೆಲ್ಲ ಇತ್ಯಾದಿ. ಅದಕ್ಕೆ ಊಟದ ಕ್ರಮದಲ್ಲಿ ಮೊದಲು ನಾವು ಪಾಯಸ, ತುಪ್ಪವನ್ನು ಸೇವಿಸಬೇಕು. ಇದರಿಂದ ದೇಹದ ಧಾತುಗಳಿಗೆ ಶಕ್ತಿ, ಮನಸ್ಸಿಗೆ ಸಂತೃಪ್ತಿ, ಹಸಿವಿನ ದಾಹ ನಿಗ್ರಹ, ಹೊಟ್ಟೆಗೆ ತಂಪು ಉಂಟು ಮಾಡುತ್ತದೆ. ಮೊದಲಿಗೆ ಮಧುರ ರಸ ಸೇವನೆಯಿಂದ ಬಾಯಿ, ಜಠರಗಳಲ್ಲಿ ಒಂದು ಪದರ ಏರ್ಪಟ್ಟು ಮತ್ತೆ ಖಾರ ತಿಂದರೆ ಉರಿ ಕಡಿಮೆಯಾಗುತ್ತದೆ. ಆಹಾರ ತಜ್ಞರು ಊಟದ ಮೊದಲಿಗೆ ತುಪ್ಪ ಹಾಕಿ ಊಟ ಮಾಡಲು ಹೇಳುವುದು ಇದೇ ಕಾರಣಕ್ಕೆ. ಇದರಲ್ಲಿನ ಕೊಬ್ಬಿನ ಅಂಶ ಕರಗುವ ಜೀವಸತ್ವಗಳನ್ನು ಹೀರಿ ದೇಹವನ್ನು ಪೋಷಿಸುತ್ತದೆ.
Related Articles
Advertisement
ಆಮ್ಲ ರಸವು ಆಹಾರ ಜೀರ್ಣವಾಗಲು ಸಹಾಯಕ. ಹೀಗಾಗಿ ಜಠರ ಮತ್ತು ಕರುಳಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಿಸಬಲ್ಲದು.
ಲವಣ ಎಂದರೆ ಉಪ್ಪು. ಪಚನ ಕ್ರಿಯೆಗೆ ಸಹಾಯಕ. ಜಠರಾಗ್ನಿಯನ್ನು ಹೆಚ್ಚಿಸುವಂಥ ಇದರಲ್ಲಿ ಕಫ ಕರಗಿಸುವ ಗುಣವಿದ್ದು, ವಾತವನ್ನು ನಿಯಂತ್ರಿಸುತ್ತದೆ. ಇದು ಎಲ್ಲ ರಸದಲ್ಲಿ ಬೆರೆತರೂ ತನ್ನ ಗುಣವನ್ನು ತೋರ್ಪಡಿಸಬಲ್ಲದು. ಆಹಾರಕ್ಕೆ ರುಚಿ ಕೊಡುವ ಲವಣ ರಸವು ಸ್ನಿಗ್ಧ, ಉಷ್ಣ,ಅಧಿಕ ಗುರು ಗುಣ ಇಲ್ಲದ ರಸ. ಅದು ಶರೀರದಲ್ಲಿನ ಕಶ್ಮಲಗಳನ್ನು ಹೊರ ಹಾಕುತ್ತದೆ. ಲವಣ ರಸ ಹೆಚ್ಚಿದರೆ ಪಿತ್ತ, ರಕ್ತ ವೃದ್ಧಿ, ಮೂಛೆì ರೋಗ, ದೇಹದ ಉಷ್ಣತೆ ಹೆಚ್ಚಾಗುವುದು, ಇಂದ್ರಿಯಗಳ ಶಕ್ತಿ ಕುಂದಬಹುದು. ದೇಹದಲ್ಲಿ ಉಪ್ಪಿನಂಶ ಹೆಚ್ಚಾದರೆ ನೀರು ನಿಲ್ಲುವುದು ಹೆಚ್ಚಬಹುದು. ಇದರಿಂದ ಮೂತ್ರಪಿಂಡದ ಸಮಸ್ಯೆ ಕಾಣಿಸಿ ಕೊಂಡೀತು. ರಕ್ತದೊತ್ತಡ ಅಧಿಕವಾಗಬಹುದು.
ಕಟು ಎಂದರೆ ಖಾರ. ಶುಂಠಿ, ಮೆಣಸು, ಬೆಳ್ಳುಳ್ಳಿ, ತುಳಸಿ, ಇಂಗು ಇತ್ಯಾದಿ. ಇದು ಬಾಯಿಯನ್ನು ಶುದ್ಧ ಮಾಡಿ, ಜಠರಾಗ್ನಿಯನ್ನು ಹೆಚ್ಚಿಸುತ್ತದೆ. ಹೆಚ್ಚು ಖಾರ ತಿಂದಾಗ ಕಣ್ಣು, ಮೂಗಲ್ಲಿ ನೀರು ಬರುತ್ತದೆ. ಕಾರಣ ಇದು ಜ್ಞಾನೇಂದ್ರಿಯಗಳನ್ನು ಶುದ್ಧ ಅಂದರೆ ತೀಕ್ಷ್ಣಗೊಳಿಸುತ್ತದೆ. ಖಾರ ತಿಂದರೆ ದೇಹಕ್ಕೆ ಚೈತನ್ಯ ಬರುವುದು, ತುರಿಕೆ, ಮೈಯಲ್ಲಿರುವ ಗುಳ್ಳೆ ಕಡಿಮೆಯಾಗುವುದು. ಕ್ರಿಮಿ ನಾಶವಾಗುತ್ತದೆ. ಕೊಬ್ಬು ಕರಗುತ್ತದೆ, ಕಫ ಕಡಿಮೆಯಾಗುವುದು. ಕಟು ರಸಕ್ಕೆ ಲಘು, ಉಷ್ಣ ಗುಣವಿದೆ. ಔಷಧಗಳಲ್ಲೂ ಕಟು ರಸವನ್ನು ಬಳಸಲಾಗುತ್ತದೆ. ಇದನ್ನು ಅಧಿಕವಾಗಿ ತೆಗೆದುಕೊಂಡರೆ ದೇಹ ದುರ್ಬಲವಾಗುವುದು, ಇಂದ್ರಿಯಗಳ ಶಕ್ತಿ ಕುಂದುವುದು, ಮೂಛೆì ರೋಗ ಬಾಧಿಸುವುದು, ದೇಹದಲ್ಲಿ ಉರಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಕೈಕ್ಕೆ ರಸ ಮತ್ತು ಆಯುರ್ವೇದಕ್ಕೆ ಅವಿನಾಭಾವ ಸಂಬಂಧವಿದೆ. ಕೈಕ್ಕೆ ಎಂದರೆ ಕಹಿ ಗುಣ ಉಳ್ಳದ್ದು. ಇದರಲ್ಲಿ ಕಹಿಬೇವು, ಅರಿಸಿನ, ಶ್ರೀಗಂಧ, ಒಂದೆಲಗ, ಲಾವಂಚ, ಶತಾವರಿ ಮೊದಲಾದವು ಸೇರಿವೆ. ಇದು ಬಾಯಿಗೆ ರುಚಿ ಕೊಡದಿದ್ದರೂ ದೇಹದೊಳಗಿನ ವಿಷವನ್ನು ನಾಶ ಮಾಡುತ್ತದೆ. ಜ್ವರವನ್ನು ಕಡಿಮೆ ಮಾಡುತ್ತದೆ, ಪಿತ್ತ, ಕಫವನ್ನು ನಿಯಂತ್ರಿಸುತ್ತದೆ. ಚರ್ಮ, ಮಾಂಸಗಳಿಗೆ ಸ್ಥಿರತೆ ಕೊಡಬಲ್ಲದು. ಜಠರಾಗ್ನಿಯನ್ನು ಹೆಚ್ಚಿಸಬಲ್ಲದು. ಇದನ್ನು ಹೆಚ್ಚು ಸೇವಿಸಿ ದರೆ ರಕ್ತ, ಮಾಂಸ, ಮೂಳೆಗಳು ದುರ್ಬಲವಾದೀತು. ವಾತದ ಸಮಸ್ಯೆ ಕಾಣಿಸಿಕೊಂಡೀತು.
ಒಗರು ರುಚಿಗೆ ಕಷಾಯ ರಸ ಎನ್ನುತ್ತಾರೆ. ಮಾವಿನ ಮಿಡಿ, ಗೋಳಿ, ಅಶ್ವತ್ಥ ಮೊದಲಾದವುಗಳು ಇದಕ್ಕೆ ಸೇರಿದ್ದು. ಇದು ಶರೀರದಲ್ಲಿನ ತೇವಾಂಶವನ್ನು ಕಡಿಮೆ ಮಾಡುತ್ತದೆ. ಅತಿಯಾದ ಸೇವನೆಯಿಂದ ಬಾಯಿ ಒಣಗುವುದು, ಹೃದಯದಲ್ಲಿ ಒತ್ತಡ ಹೆಚ್ಚಾಗುತ್ತದೆ. ಹೊಟ್ಟೆ ಉಬ್ಬರ, ಇಂದ್ರಿಯ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆ, ವಾತ ಮೊದಲಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ.ಷಡ್ರಸಗಳಿಗೂ ನಮ್ಮ ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ. ಆರೋಗ್ಯವೃದ್ಧಿಯಲ್ಲಿ ಸಮತೋಲಿತ ಷಡ್ರಸ ಭೋಜನ ಅತ್ಯಗತ್ಯ. ಆಧುನಿಕ ಜೀವನ ಶೈಲಿಗೆ ಹೊಂದಿಕೊಂಡ ನಾವು ಆಹಾರ ಸೇವಿಸುವಾಗ ಷಡ್ರಸಗಳ ಬಗ್ಗೆ ಗಮನವನ್ನೇ ಕೊಡುತ್ತಿಲ್ಲ. ಹೀಗಾಗಿ ಎಲ್ಲವೂ ಏರುಪೇರಾಗಿದೆ. ಆಹಾರ ಸೇವನೆ ಪ್ರಕ್ರಿಯೆಯು ಜಗಿಯುವುದರಿಂದ ಪ್ರಾರಂಭವಾಗುತ್ತದೆ. ಆಹಾರ ಸೇವಿಸುವಾಗ ನಾವು ಷಡ್ರಸಗಳನ್ನು ಅನುಭವಿಸಬೇಕು. ಹಾಗಿದ್ದರೆ ಮಾತ್ರ ಅದು ಸಮತೋಲಿತ ಆಹಾರವಾಗುವುದು. ಆದರೆ ಹೆಚ್ಚಿನವರು ಇಂದು ಟಿವಿ, ಮೊಬೈಲ್ ನೋಡುತ್ತ ಅಥವಾ ಮಾತನಾಡುತ್ತ ಆಹಾರ ಸೇವಿಸುತ್ತಾರೆ. ಆಹಾರದಲ್ಲಿರುವ ರಸಗಳ ಏರುಪೇರಿನಿಂದಾಗಿ ದೋಷಗಳು ವ್ಯತ್ಯಾಸವಾಗುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಹಿರಿಯರು ಹೇಳಿಕೊಟ್ಟಿರುವ ಕ್ರಮವನ್ನು ಪಾಲಿಸಿ, ಷಡ್ರಸಗಳು ಸರಿಯಾದ ಪ್ರಮಾಣದಲ್ಲಿರುವ ಆಹಾರವನ್ನು ಅನುಭವಿಸುತ್ತಾ, ಸೇವಿಸಿ. ಆಗಲೇ ದೇಹಕ್ಕೆ ಬೇಕಾದ ಪೋಷಕಾಂಶ ಸಿಗುವುದಷ್ಟೇ ಅಲ್ಲ; ಆರೋಗ್ಯಕರ ಜೀವನ ಶೈಲಿ ನಮ್ಮದಾಗಲಿದೆ. – ಡಾ| ಪ್ರದೀಪ್ ನಾವೂರ, ತಜ್ಞರು, ನಾವೂರು