Advertisement

ಪಾಕಿಗೆ ಫಾಲೋಆನ್‌; ಗೆಲುವಿನತ್ತ ಆಸೀಸ್‌

10:02 AM Dec 02, 2019 | sudhir |

ಅಡಿಲೇಡ್‌: ಡೇ-ನೈಟ್‌ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ಥಾನಕ್ಕೆ ಫಾಲೋಆನ್‌ ಹೇರಿದ ಆಸ್ಟ್ರೇಲಿಯ, ಸತತ 2ನೇ ಇನ್ನಿಂಗ್ಸ್‌ ಗೆಲುವಿನತ್ತ ದಾಪುಗಾಲಿಕ್ಕಿದೆ.

Advertisement

ಆಸ್ಟ್ರೇಲಿಯದ 589 ರನ್ನುಗಳ ಭಾರೀ ಮೊತ್ತಕ್ಕೆ ಉತ್ತರವಾಗಿ 96 ರನ್ನಿಗೆ 6 ವಿಕೆಟ್‌ ಉದುರಿಸಿಕೊಂಡಿದ್ದ ಪಾಕಿಸ್ಥಾನ, 3ನೇ ದಿನವಾದ ರವಿವಾರ 302 ರನ್‌ ಮಾಡಿತು. ಆದರೆ 287 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ್ದರಿಂದ ಆಸೀಸ್‌ ಕಪ್ತಾನ ಟಿಮ್‌ ಪೇನ್‌ ಯಾವುದೇ ಮುಲಾಜಿಲ್ಲದೆ ಪ್ರವಾಸಿಗರಿಗೆ ಫಾಲೋಆನ್‌ ಹೇರಿದರು. ಪಾಕ್‌ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಕುಸಿತ ಅನುಭವಿಸಿದ್ದು, 39 ರನ್ನಿಗೆ 3 ವಿಕೆಟ್‌ ಕಳೆದುಕೊಂಡಿದೆ. ಕಾಂಗರೂ ಪಡೆಯನ್ನು ಮರಳಿ ಬ್ಯಾಟಿಂಗಿಗೆ ಇಳಿಸಬೇಕಾದರೆ ಇನ್ನೂ 248 ರನ್‌ ಮಾಡಬೇಕಿದೆ.

ಯಾಸಿರ್‌ ಶಾ ಶತಕ
ಪಾಕಿಸ್ಥಾನದ ಮೊದಲ ಇನ್ನಿಂಗ್ಸ್‌ ಕುಸಿತದ ತೀವ್ರತೆಯನ್ನು ಕಂಡಾಗ ತಂಡ ಇನ್ನೂರರ ಗಡಿ ಮಟ್ಟುವುದೂ ಅನುಮಾನವಿತ್ತು. ಆದರೆ ಬಾಬರ್‌ ಆಜಂ ಮತ್ತು ಯಾಸಿರ್‌ ಶಾ ಅವರ ಹೋರಾಟದಿಂದ ಮುನ್ನೂರರ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಇವರಿಬ್ಬರು 7ನೇ ವಿಕೆಟಿಗೆ 105 ರನ್‌ ಜತೆಯಾಟ ನಡೆಸಿದರು.

ಯಾಸಿರ್‌ ಶಾ ಅವರ ಚೊಚ್ಚಲ ಶತಕ ಪಾಕಿಸ್ಥಾನದ ಸರದಿಯ ವಿಶೇಷವೆನಿಸಿತು. 4 ರನ್‌ ಮಾಡಿ ಆಡುತ್ತಿದ್ದ ಅವರು 113 ರನ್‌ ಬಾರಿಸಿ ಅಂತಿಮ ವಿಕೆಟ್‌ ರೂಪದಲ್ಲಿ ಪೆವಿಲಿಯನ್‌ ಸೇರಿಕೊಂಡರು. ಈವರೆಗೆ ಟೆಸ್ಟ್‌ನಲ್ಲಿ 42 ರನ್‌ ಗಡಿ ದಾಟದ ಶಾ, ಒಟ್ಟು 213 ಎಸೆತ ನಿಭಾಯಿಸಿ 13 ಬೌಂಡರಿ ಹೊಡೆದರು.

ಬಾಬರ್‌ ಆಜಂ ಕೇವಲ 3 ರನ್‌ ಕೊರತೆಯಿಂದ ಸೆಂಚುರಿ ತಪ್ಪಿಸಿಕೊಂಡರು. 97 ರನ್‌ ಮಾಡಿದ ಬಾಬರ್‌, ಸ್ಟಾರ್ಕ್‌ ಬೌಲಿಂಗ್‌ನಲ್ಲಿ ಕೀಪರ್‌ ಟಿಮ್‌ ಪೇನ್‌ಗೆ ಕ್ಯಾಚಿತ್ತು ನಿರಾಸೆ ಅನುಭವಿಸಿದರು. 132 ಎಸೆತಗಳ ಈ ಇನ್ನಿಂಗ್ಸ್‌ ನಲ್ಲಿ 11 ಬೌಂಡರಿ ಸೇರಿತ್ತು.

Advertisement

6 ವಿಕೆಟ್‌ ಹಾರಿಸಿದ ಸ್ಟಾರ್ಕ್‌
ವೇಗಿ ಮಿಚೆಲ್‌ ಸ್ಟಾರ್ಕ್‌ 6 ವಿಕೆಟ್‌ ಹಾರಿಸಿ ಪಾಕ್‌ ಸರದಿಯನ್ನು ಸೀಳಿದರು. ದ್ವಿತೀಯ ಸರದಿಯಲ್ಲಿ ಹ್ಯಾಝಲ್‌ವುಡ್‌ 2, ಸ್ಟಾರ್ಕ್‌ ಒಂದು ವಿಕೆಟ್‌ ಉರುಳಿಸಿದ್ದಾರೆ. ಇಮಾಮ್‌ ಉಲ್‌ ಹಕ್‌ (0), ಅಜರ್‌ ಅಲಿ (9), ಬಾಬರ್‌ ಆಜಂ (8) ಈಗಾಗಲೇ ಆಟ ಮುಗಿಸಿದ್ದಾರೆ. ಆರಂಭಕಾರ ಶಾನ್‌ ಮಸೂದ್‌ (14) ಮತ್ತು ಅಸದ್‌ ಶಫೀಕ್‌ (8) ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯ-3 ವಿಕೆಟಿಗೆ 589 ರನ್‌ ಡಿಕ್ಲೇರ್‌. ಪಾಕಿಸ್ಥಾನ-302 (ಶಾ 113, ಬಾಬರ್‌ 97, ಅಬ್ಟಾಸ್‌ 29. ಸ್ಟಾರ್ಕ್‌ 66ಕ್ಕೆ 6, ಕಮಿನ್ಸ್‌ 83ಕ್ಕೆ 3) ಮತ್ತು 3 ವಿಕೆಟಿಗೆ 39.

Advertisement

Udayavani is now on Telegram. Click here to join our channel and stay updated with the latest news.

Next